ಎರಡನೇ ಹಂತದ ನಾಯಕರಿಗೆ ಮಣೆ : ಕರಾವಳಿಯಲ್ಲಿ ಬಿಜೆಪಿ ಮತ್ತೆ ಪ್ರಯೋಗ

ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಣೆ-ಬಂಡಾಯ ಒಂದೇ ದಿನದಲ್ಲಿ ಥಂಡಾ

ಉಡುಪಿ : ಬಿಜೆಪಿ ಈ ಸಲ ಉಡುಪಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಪ್ರಯೋಗಕ್ಕೆ ಮುಂದಾಗಿದೆ. ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿರುವುದೇ ಇದಕ್ಕೆ ಸಾಕ್ಷಿ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾರ್ಕಳದಲ್ಲಿ ಮಾತ್ರ ಹಾಲಿ ಶಾಸಕ ಸುನಿಲ್‌ ಕುಮಾರ್‌ ಮರಳಿ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಉಡುಪಿ, ಕುಂದಾಪುರ, ಬೈಂದೂರು ಮತ್ತು ಕಾಪು ಕ್ಷೇತ್ರಗಳಲ್ಲಿ ಹಾಲಿಗಳಿಗೆ ಟಿಕೆಟ್‌ ನೀಡದೆ ಹೊಸಬರನ್ನು ಕಣಕ್ಕಿಳಿಸುವ ರಿಸ್ಕ್‌ ಅನ್ನು ಬಿಜೆಪಿ ತೆಗೆದುಕೊಂಡಿದೆ. ಇದು ಜಾತಿ ಲೆಕ್ಕಾಚಾರ, ಗೆಲುವಿನ ಸಾಧ್ಯತೆ ಇತ್ಯಾದಿ ಅಂಶಗಳನ್ನು ಒಳಗೊಂಡಿದ್ದರೂ ಇಂಥ ಒಂದು ರಿಸ್ಕ್‌ ತೆಗೆದುಕೊಳ್ಳಲು ದಿಟ್ಟತನ ಬೇಕು ಎನ್ನುವುದು ನಿಜ.

ಮೊದಲೇ ಇತ್ತು ಸುಳಿವು
ಅವಿಭಜಿತ ದ.ಕ. ಜಿಲ್ಲೆ ಕಳೆದ ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿ ಇನ್ನೂ ಅನೇಕ ವರ್ಷ ಬಿಜೆಪಿಯ ಪಾರುಪತ್ಯ ಮುಂದುವರಿಯಬೇಕು. ಹೀಗಾಗಬೇಕಾದರೆ ಯುವ ನಾಯಕರು, ಹೊಸಬರು ಸಕ್ರಿಯ ರಾಜಕೀಯ ಪ್ರವೇಶಿಸಬೇಕು. ಈ ಕಾರಣಕ್ಕೆ ಬಿಜೆಪಿ ಪ್ರಯೋಗಗಳಿಗೆ ಮುಂದಾಗಿದೆ. ಈ ಸಲ ಉಡುಪಿಯಲ್ಲಿ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆಯ ಸುಳಿವೊಂದು ಮೊದಲೇ ಇತ್ತು. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡದ ಕೆಲವು ಕ್ಷೇತ್ರಗಳಲ್ಲಿ ಈ ಪ್ರಯೋಗ ಮಾಡಿತ್ತು. ಇದರಿಂದಾಗಿ ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಸಂಜೀವ ಮಠಂದೂರು ಅವರಂಥ ಎರಡನೇ ಹಂತದ ಕಾರ್ಯಕರ್ತರು ಸ್ಪರ್ಧಿಸಲು ಸಾಧ್ಯವಾಗಿತ್ತು. ಇದೇ ಪ್ರಯೋಗ ಮುಂದಿನ ಸಲ ಉಡುಪಿಯಲ್ಲಿ ನಡೆಯಲಿದೆ ಎಂಬ ಮಾತು ಆಗಲೇ ಕೇಳಿ ಬರುತ್ತಿತ್ತು. ಅದೀಗ ನಿಜವಾಗಿದೆ. ದಕ್ಷಿಣ ಕನ್ನಡದಲ್ಲಿ ಈ ಸಲ ಪುತ್ತೂರು ಮತ್ತು ಸುಳ್ಯದ ಅಭ್ಯರ್ಥಿಗಳನ್ನು ಮಾತ್ರ ಬದಲಾಯಿಸಲಾಗಿದೆ. ಆದರೆ ಉಡುಪಿಯಲ್ಲಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳು ಬದಲಾಗಿದ್ದಾರೆ.

ಹಾಲಾಡಿ ನಿರ್ಧಾರ ಟರ್ನಿಂಗ್‌ ಪಾಯಿಂಟ್‌
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕೈಗೊಂಡ ನಿರ್ಧಾರ ಉಡುಪಿಯಲ್ಲಿ ಟರ್ನಿಂಗ್‌ ಪಾಯಿಂಟ್‌ ಆಯಿತು. ಇದರ ಬಳಿಕ ರಾಜಕೀಯ ಸಮೀಕರಣವೆಲ್ಲ ಬುಡಮೇಲಾಯಿತು. ಆದರೆ, ಇದಕ್ಕೆ ಬಲಿಪಶುವಾದದ್ದು ಮಾತ್ರ ಉಡುಪಿ ಶಾಸಕ ರಘುಪತಿ ಭಟ್‌. ಕುಂದಾಪುರದಲ್ಲಿ ಬ್ರಾಹ್ಮಣ ಸಮುದಾಯದ ಕಿರಣ್‌ ಕುಮಾರ್‌ ಕೊಡ್ಗಿ ಅವರಿಗೆ ಟಿಕೆಟ್‌ ಕೊಟ್ಟ ಕಾರಣ ಅದರ ಪಕ್ಕದ ಉಡುಪಿಯಲ್ಲೂ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರೆ ತಪ್ಪು ಸಂದೇಶ ಹೋಗುವ ಸಾಧ್ಯತೆಯಿರುವುದರಿಂದ ರಘುಪತಿ ಭಟ್‌ ಶಿಷ್ಯನೇ ಆಗಿರುವ ಯಶ್‌ಪಾಲ್‌ ಸುವರ್ಣ ಅವರನ್ನು ಕಣಕ್ಕಿಳಿಸಲಾಗಿದೆ.
ಇದರ ಹಿಂದೆಯೂ ಹಲವು ಲೆಕ್ಕಾಚಾರಗಳಿವೆ. ಉಡುಪಿಯಲ್ಲಿ ಕಾಂಗ್ರೆಸ್‌ ಮೊಗವೀರ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಿಜೆಪಿ ಕೂಡ ಅದೇ ಸಮುದಾಯಕ್ಕೆ ಟಿಕೆಟ್‌ ನೀಡಿದೆ. ಮೊಗವೀರ ಸಮುದಾಯದ ಪ್ರಾಬಲ್ಯವಿರುವ ಕಾಪುವಿನಲ್ಲಿ ಈ ಸಲ ಬಂಟ ಸಮುದಾಯಕ್ಕೆ ಸೇರಿರುವ ಗುರ್ಮೆ ಸುರೇಶ್‌ ಶೆಟ್ಟಿಯವರಿಗೆ ಟಿಕೆಟ್‌ ನೀಡಿರುವುದರಿಂದ ಆ ಸಮುದಾಯಕ್ಕೆ ಒಂದು ಸೀಟ್‌ ನೀಡುವುದು ಅನಿವಾರ್ಯವಾಗಿತ್ತು. ಉಡುಪಿ ಹೊರತುಪಡಿಸಿದರೆ ಬೇರೆ ಕಡೆ ಸೀಟ್‌ ಇರಲಿಲ್ಲ. ಹೀಗಾಗಿ ಅನಾಯಾಸವಾಗಿ ಯಶ್‌ಪಾಲ್‌ ಸುವರ್ಣ ಟಿಕೆಟ್‌ ಪಡೆದುಕೊಂಡರು.

ಬೈಂದೂರು ಅಚ್ಚರಿ
ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸುಕುಮಾರ ಶೆಟ್ಟಿಯವರಿಗೆ ಟಿಕೆಟ್‌ ನಿರಾಕರಿಸಿರುವುದು ಮಾತ್ರ ತುಸು ಅಚ್ಚರಿಯ ನಿರ್ಧಾರ. ಈ ಸಲ ಸುಕುಮಾರ ಶೆಟ್ಟಿಯವರು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ಇದೆ. ಸಾಕಷ್ಟು ಅನುದಾನವನ್ನು ಸುಕುಮಾರ ಶೆಟ್ಟಿಯವರು ಕ್ಷೇತ್ರಕ್ಕೆ ತಂದಿದ್ದಾರೆ. ಜತೆಗೆ ಜನಬೆಂಬಲವೂ ಅವರ ಕಡೆಗೆ ಇತ್ತು. ಆಡಳಿತ ವಿರೋಧಿ ಅಲೆಯೂ ಬೈಂದೂರಿನಲ್ಲಿ ಇರಲಿಲ್ಲ. ಹೀಗಾಗಿ ಅವರು ಮರಳಿ ಸ್ಪರ್ಧಿಸಲು ಅವಕಾಶ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿ ಈ ಸಲ ಗುರುರಾಜ ಗಂಟಿಹೊಳಿ ಅವರಿಗೆ ಟಿಕೆಟ್‌ ನೀಡಿದೆ.

ಸಂಘದ ಕಾರ್ಯಕರ್ತ
ಗುರುರಾಜ ಗಂಟಿಹೊಳಿ ಸಂಘದ ನಿಷ್ಠಾವಂತ ಕಾರ್ಯಕರ್ತ. ಪ್ರಚಾರಕ ಮತ್ತಿತರ ಹುದ್ದೆಗಳನ್ನು ನಿಭಾಯಿಸಿದ ಅನುಭವವಿದೆ. ಚಪ್ಪಲಿ ಧರಿಸದೆ ಓಡಾಡುವ ಅವರು ಬರಿಗಾಲ ಸಂತ ಎಂದೇ ಸಂಘದಲ್ಲಿ ಫೇಮಸ್‌. ಇನ್ನೂ 39ರ ಹರೆಯ. ಬಂಟ ಸಮುದಾಯಕ್ಕೆ ಸೇರಿರುವವರು. ಹೀಗಾಗಿ ಈ ಆಯ್ಕೆಯ ಬಗ್ಗೆಯೂ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ತಕರಾರು ಇಲ್ಲ.

ಬಂಡಾಯ ಒಂದೇ ದಿನದಲ್ಲಿ ಥಂಡಾ
ಟಿಕೆಟ್‌ ನಿರಾಕರಣೆಯಾದಾಗ ಹಾಲಿ ಶಾಸಕರು ಅಸಮಾಧಾನಗೊಂಡದ್ದು ನಿಜ. ಅದರಲ್ಲೂ ರಘುಪತಿ ಭಟ್‌ ಬಹಿರಂಗವಾಗಿ ಕಣ್ಣೀರು ಹಾಕಿ ತನ್ನ ನೋವು ತೋಡಿಕೊಂಡಿದ್ದರು. ಆದರೆ ಅವರ ಬಂಡಾಯವನ್ನು ಬಿಜೆಪಿ ವರಿಷ್ಠರು ಒಂದೇ ದಿನದಲ್ಲಿ ಶಮನಗೊಳಿಸಿದ್ದಾರೆ. ಮರುದಿನವೇ ಭಟ್‌ ಸುದ್ದಿಗೋಷ್ಠಿ ಕರೆದು ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ ಎಂದು ಘೋಷಿಸಿದ್ದಲ್ಲದೆ 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಬಂಡಾಯದ ಸುಳಿವೇ ಇರಲಿಲ್ಲ
ಕಾಪುವಿನಲ್ಲಿ ಟಿಕೆಟ್‌ ಘೋಷಣೆಯಾದ ಬೆನ್ನಿಗೇ ಶಾಸಕ ಲಾಲಾಜಿ ಮೆಂಡನ್‌ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಪ್ರಾಂಜಲ ಮನಸ್ಸಿನಿಂದ ಘೋಷಿಸಿ ಔದಾರ್ಯ ಮೆರೆದಿದ್ದಾರೆ. ಕುಂದಾಪುರದಲ್ಲಿ ಶ್ರೀನಿವಾಸ ಶೆಟ್ಟಿಯವರು ಅಪೇಕ್ಷಿಸಿದವರಿಗೆ ಟಿಕೆಟ್‌ ಸಿಕ್ಕಿರುವುದರಿಂದ ಅಸಮಾಧಾನದ ಪ್ರಶ್ನೆಯೇ ಇಲ್ಲ. ಬೈಂದೂರಿನಲ್ಲಿ ಸುಕುಮಾರ ಶೆಟ್ಟಿಯವರು ಅಸಮಾಧಾನಗೊಂಡಿದ್ದರೂ ಪಕ್ಷ ಬಿಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಅವರಿಗೆ ಇಷ್ಟವಿದ್ದಂತಿಲ್ಲ. ಪಕ್ಷದ ವರಿಷ್ಠರು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯದಲ್ಲೆ ಅವರ ಮುನಿಸು ಕೂಡ ಶಮನವಾಗಬಹುದು.

ಗೆಲುವಿಗಾಗಿ ಶ್ರಮಿಸಿದ ಕಾಲಾಳುಗಳು
ಹೊಸ ನಾಲ್ವರು ಅಭ್ಯರ್ಥಿಗಳಲ್ಲಿ ಇರುವ ಸಾಮ್ಯತೆಯೆಂದರೆ ಇವರೆಲ್ಲ ಬಿಜೆಪಿಯ ಎರಡನೇ ಹಂತದ ನಾಯಕರು. ಇಷ್ಟು ಮಾತ್ರವಲ್ಲ ಇವರೆಲ್ಲ ಇಷ್ಟು ವರ್ಷ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪ್ರತಿ ಚುನಾವಣೆಯಲ್ಲಿ ಶ್ರಮಿಸಿದವರು. ಹೀಗಾಗಿ ಹಾಲಿ ಶಾಸಕರಿಗೆ ಇವರ ಉಮೇದುವಾರಿಕೆಯನ್ನು ವಿರೋಧಿಸುವ ಸ್ಥಿತಿಯಲ್ಲಿಲ್ಲ. ರಘುಪತಿ ಭಟ್‌ ಗೆಲುವಿಗೆ ಯಶ್‌ಪಾಲ್‌ ಸುವರ್ಣ, ಲಾಲಾಜಿ ಮೆಂಡನ್‌ಗಾಗಿ ಗುರ್ಮೆ ಸುರೇಶ್‌ ಶೆಟ್ಟಿ, ಹಾಲಾಡಿಯವರ ಪರವಾಗಿ ಕೊಡ್ಗಿ, ಸುಕುಮಾರ ಶೆಟ್ಟಿಯವರ ಪರವಾಗಿ ಗುರುರಾಜ್‌ ಗಂಟಿಹೊಳಿ ಚುನಾವಣೆಗಳಲ್ಲಿ ಎಷ್ಟು ಓಡಾಡಿದ್ದಾರೆ, ಏನೆಲ್ಲ ತಂತ್ರಗಾರಿಕೆ ಹೆಣೆದಿದ್ದಾರೆ, ಎಷ್ಟು ಬೆವರು, ಸಂಪನ್ಮೂಲ ಹರಿಸಿದ್ದಾರೆ ಎಂಬುದೆಲ್ಲ ಎಲ್ಲರಿಗೂ ತಿಳಿದಿರುವ ವಿಚಾರ. ಒಂದರ್ಥದಲ್ಲಿ ಇವರೆಲ್ಲ ಶಾಸಕರೇ ಬೆಳೆಸಿದ ಹುಡುಗರು. ಇಂಥವರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಶಾಸಕರು ಹೇಳಿದರೆ ಖಂಡಿತ ಅದು ಉಪಕಾರ ಸ್ಮರಣೆಯಿಲ್ಲದ ದ್ರೋಹವಾಗಲಿದೆ ಎಂದರಿತ ಅವರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶ್ರಮಿಸಲಿದ್ದಾರೆ.





























































































































error: Content is protected !!
Scroll to Top