ಕಾರ್ಕಳ : ಭ್ರಷ್ಟಾಚಾರ – ಬೇನಾಮಿ ಆಸ್ತಿಗಳ ಬಗ್ಗೆ ಪಟ್ಟಿ ಮಾಡಿ ತನ್ನದೇ ಗುರುಗಳಾದ ಪ್ರಮೋದ್ ಮುತಾಲಿಕ್ ಅವರು ಸಾರ್ವಜನಿಕ ವೇದಿಕೆಗಳಲ್ಲಿ ಓದಿ ಹೇಳುತ್ತಿರುವುದರ ಹೊರತಾಗಿಯೂ ಸಚಿವ ಸುನಿಲ್ ಕುಮಾರ್ ಮೌನ ವಹಿಸಿರುವುದರ ಹಿಂದೆ ಮೌನಂ ಸಮ್ಮತಿ ಲಕ್ಷಣದ ಸಿದ್ದಾಂತ ಅಡಗಿದೆಯೇ ? ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆದಿಂಜೆ ಸುಪ್ರೀತ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಕ್ಷೇತ್ರದಲ್ಲಿ ಭಾವನಾತ್ಮಕ ವಿಚಾರಗಳ ಮೂಲಕ ರಾಜಕೀಯ ಮಾಡುವ ಸುನಿಲ್ ಕುಮಾರ್ ಅಭಿವೃದ್ಧಿಯ ಹೆಸರಲ್ಲಿ ಸರಕಾರದ ಹಣವನ್ನು ಅನಗತ್ಯವಾಗಿ ದುಂದು ವೆಚ್ಚ ಮಾಡುತ್ತಿದ್ದಾರೆ. ತನ್ನ ರಾಜಕೀಯ ಆರ್ಥಿಕ ತಿಜೋರಿಯನ್ನು ಭರ್ತಿ ಮಾಡಿದ ಅವರಿಗೆ ಪ್ರಮೋದ್ ಮುತಾಲಿಕ್ ಮಾಡಿದ ಆರೋಪಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ಧೈರ್ಯವಿಲ್ಲ. ಯಾಕೆಂದರೆ ಈ ಆರೋಪದ ಹಿಂದೆ ಸತ್ಯಾಂಶ ಅಡಗಿದ್ದು, ಸಹಜವಾಗಿಯೇ ಸುನಿಲ್ ಕುಮಾರ್ ಆರೋಪ ಒಪ್ಪಿಕೊಂಡಂತಾಗಿದೆ. ಈ ನಿಟ್ಟಿನಲ್ಲಿ ಸುನಿಲ್ ಕುಮಾರ್ ಅವರಿಗೆ ಮತ್ತೆ ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನೈತಿಕ ಹಕ್ಕಿಲ್ಲ ಎಂದರು.
ಪ್ರಮೋದ್ ಮುತಾಲಿಕ್ ಮಾಡಿದ ಆರೋಪಗಳು ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಮಾಡಿದ ಭ್ರಷ್ಟಾಚಾರಗಳಿಗೆ ಜೀವಂತ ಸಾಕ್ಷಿ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ಸುನಿಲ್ ಕುಮಾರ್ ವಿರುದ್ಧ ಸ್ವಯಂ ಪ್ರೇರಿತ – ಸುಮೋಟೊ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































