ಜಾಗದ ತಕರಾರು : ವ್ಯಕ್ತಿಗೆ ಹಲ್ಲೆ
ಕಾರ್ಕಳ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಏ.11ರಂದು ನಿಟ್ಟೆ ಲೆಮಿನಾ ಕ್ರಾಸ್ ಬಳಿ ನಡೆದಿದೆ. ನಿಟ್ಟೆ ಗ್ರಾಮ ದೂಪದಕಟ್ಟೆ ಕುಕ್ಕಾಬೆ ಹೌಸ್‌ನ ಕೃಷ್ಣಪ್ಪ ಅಮೀನ್ (60) ಮತ್ತು ದೂರದ ಸಂಬಂಧಿ ಆರೋಪಿ ವಿಶ್ವನಾಥ ಪೂಜಾರಿ ನಡುವೆ ಕುಕ್ಕಾಬೆ ಎಂಬಲ್ಲಿರುವ ಜಾಗದ ವಿಚಾರದಲ್ಲಿ ತಕರಾರು ಇದ್ದು, ಮಂಗಳವಾರ ಕೃಷ್ಣಪ್ಪ ಅಮೀನ್ ಸೈಕಲ್‌ನಲ್ಲಿ ಹೋಗುತ್ತಿರುವಾಗ ರಿಕ್ಷಾದಲ್ಲಿ ಬಂದ ವಿಶ್ವನಾಥ ಪೂಜಾರಿ ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ್ದಾರೆ. ಕೃಷ್ಣಪ್ಪ ಅಮೀನ್ ಸೈಕಲ್‌ನಿಂದ ಬಿದ್ದ ಪರಿಣಾಮವಾಗಿ ಕೈ ಮತ್ತು ಕಾಲಿಗೆ ಗಾಯವಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾತ್ರೆ ಸೇವಿಸಿ ಮಾನಸಿಕ ಅಸ್ವಸ್ಥೆ ಆತ್ಮಹತ್ಯೆ
ಕಾರ್ಕಳ: ಮಾನಸಿಕ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ತಂದಿರಿಸಿದ್ದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೋಳದಲ್ಲಿ ಮಂಗಳವಾರ ಸಂಭವಿಸಿದೆ. ಬೋಳ ಗ್ರಾಮದ ಕೆರೆಕೋಡಿ ದರ್ಖಾಸು ನಿವಾಸಿ ಶ್ರೀಮತಿ ಸುಶೀಲಾ ಇವರ ಮಗಳು ಶೋಭಾ (40) ಆತ್ಮಹತ್ಯೆ ಮಾಡಿಕೊಂಡವರು. ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಶೋಭಾ ಅವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಇದಕ್ಕಾಗಿ ಮನೆಯಲ್ಲಿ ತಂದಿರಿಸಿದ್ದ ಮಾತ್ರಗಳಿದ್ದವು. ಸೋಮವಾರ ರಾತ್ರಿ ಶೋಭಾ ಈ ಎಲ್ಲ ಮಾತ್ರೆಗಳನ್ನು ಸೇವಿಸಿದ್ದು, ಮರುದಿನ ಬೆಳಗ್ಗೆ ಅವರನ್ನು ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿಗೆ ತಲುಪುವ ಮೊದಲೇ ಅವರು ಕೊನೆಯುಸಿರೆಳೆದಿದ್ದರು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ
ಕಾರ್ಕಳ: ಮುಡಾರು ಗ್ರಾಮದ ದಿಡಿಂಬಿರಿ ಸುಮ ಚೈತ್ರಾ ನಿವಾಸದ ಲಕ್ಷ್ಮಣ್ ಮೂಲ್ಯ ಎಂಬವರು ಕೆಲಸಕ್ಕೆಂದು ಹೋದವರು ಮನೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಏ.9ರಂದು ಬೆಳಗ್ಗೆ ಕೆಲಸಕ್ಕೆಂದು ಹೋದ ಲಕ್ಷ್ಮಣ್ ಪೂಜಾರಿ ವಾಪಸು ಬಂದಿಲ್ಲ ಎಂದು ಟವರ ಪತ್ನಿ ಸುಮಿತ್ರಾ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























