ಉಡುಪಿ: ಉಡುಪಿ ಕ್ಷೇತ್ರದ ಟಿಕೆಟ್ ತಪ್ಪಿದ ಹಿನ್ನೆಲೆ ಬೇಸರ ವ್ಯಕ್ತಪಡಿಸಿದ ಶಾಸಕ ಕೆ. ರಘುಪತಿ ಭಟ್ ಪಕ್ಷ ನಡೆಸಿಕೊಂಡ ರೀತಿ ಅತೀವವಾದ ನೋವುಂಟು ಮಾಡಿದೆ ಹಾಗೆಂದು ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದರು.
ಪೆರಂಪಳ್ಳಿಯ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಪಕ್ಷ ಸೀಟ್ ನೀಡದೇ ಇರುವುದಕ್ಕೆ ಬೇಸರವಿಲ್ಲ. ಆದರೆ, ಪಕ್ಷ ನಡೆಸಿಕೊಂಡ ರೀತಿ ಸಾಕಷ್ಟು ಬೇಸರ ತಂದಿದೆ ಮತ್ತು ಶಾಕ್ ಕೂಡ ಆಗಿದೆ.
ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಡುವ ಪ್ರಶ್ನೆಯೇ ಇಲ್ಲ. ಯಾಕೆ ಹೀಗಾಯಿತು ಎಂಬುದು ತುಂಬ ಬೇಸರ ತಂದಿದೆ. ನಾನು ಬೆಳೆಸಿದ ಹುಡುಗ ಇಂದು ಅಭ್ಯರ್ಥಿಯಾಗಿದ್ದು, ಅವರಿಗೆ ಶುಭಾಶಯ ಕೋರುತ್ತೇನೆ. ಅಭ್ಯರ್ಥಿ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಉಡುಪಿಯಲ್ಲಿ ಪಾರ್ಟಿ ಕಟ್ಟಿದ್ದೇನೆ ಮತ್ತು ಬಿಜೆಪಿಯಿಂದ ಇಲ್ಲಿ ಯಾರು ನಿಂತರೂ ಗೆಲ್ಲಲಿದ್ದಾರೆ ಎಂಬ ಸ್ಥಿತಿ ನಿರ್ಮಾಣ ಮಾಡಿದ್ದೇನೆ. ಪಕ್ಷಕ್ಕೆ ಈಗ ನನ್ನ ಅವಶ್ಯಕತೆ ಇಲ್ಲ ಎಂಬುದು ತೋರಿಸುತ್ತಿದ್ದಾರೆ. ಅಮಿತ್ ಶಾ ಬೇಡ, ರಾಜ್ಯ ನಾಯಕರು ಅಥವಾ ಜಿಲ್ಲಾಧ್ಯಕ್ಷರು ಕರೆ ಮಾಡದೇ ಇರುವುದು ಬೇಸರ ತಂದಿದೆ ಎಂದರು.






















