ಆಡಳಿತ ವಿರೋಧಿ ಚಟುವಟಿಕೆ ಹತ್ತಿಕ್ಕಲು ಜನರ ಮೇಲೆ ಬಾಂಬ್ ಸುರಿಸಿದ ಸೇನೆ
ಮ್ಯಾನ್ಮಾರ್: ಪುಟ್ಟ ಹಳ್ಳಿಯೊಂದರ ಮೇಲೆ ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ಕನಿಷ್ಠ 100 ಮಂದಿ ಮೃತಪಟ್ಟಿರುವ ಘಟನೆ ಮ್ಯಾನ್ಮಾರ್ ಸಾಗಯಿಂಗ್ ಪ್ರದೇಶದ ಕಾನ್ಬಾಲು ಟೌನ್‌ಶಿಪ್‌ನಲ್ಲಿರುವ ಪಜಿಗಿ ಹಳ್ಳಿಯಲ್ಲಿ ನಡೆದಿದೆ.
ವೈಮಾನಿಕ ದಾಳಿಯನ್ನು ಮ್ಯಾನ್ಮಾರ್ ಸೇನಾಡಳಿತ (ಜುಂಟಾ) ನಡೆಸಿದೆ. ಪಜಿಜಿ ಹಳ್ಳಿಯಲ್ಲಿ ಕೆಲವೊಂದಿಷ್ಟು ಜನರು ದೇಶ ವಿರೋಧಿ ಚಳವಳಿಯನ್ನು ನಡೆಸುವ ಸಲುವಾಗಿ ಗುಂಪೊಂದನ್ನು ಕಟ್ಟಿಕೊಂಡಿದ್ದರು. ಇದಕ್ಕಾಗಿ ಗುಂಪಿನ ಜನರು ಒಂದು ಕಚೇರಿಯನ್ನು ನಿರ್ಮಿಸಿದ್ದರು. ಈ ಕಚೇರಿಯ ಉದ್ಘಾಟನೆ ಮಂಗಳವಾರ ಬೆಳಗ್ಗೆ ನಡೆಯಲಿತ್ತು. ಅಲ್ಲಿ ಸಮಾರು 150 ಜನರು ಸೇರಿದ್ದರು. ಈ ವೇಳೆ ಸೇನೆ ಅವರ ಮೇಲೆ ನೇರವಾಗಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ದಾಳಿಯನ್ನು ನಡೆಸಿದೆ ಎಂದು ದಾಳಿಯ ಬಗ್ಗೆ ಸೇನೆಯ ವಕ್ತಾರ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ 8 ಗಂಟೆಯ ವೇಳೆ ಅಲ್ಲಿದ್ದ ಸುಮಾರು 150 ಮಂದಿಯ ಮೇಲೆ ನೇರವಾಗಿ ಬಾಂಬ್ ಎಸೆಯಲಾಗಿದೆ. ಈ ದಾಳಿಯಲ್ಲಿ 20-30 ಮಕ್ಕಳು ಮೃತಪಟ್ಟಿದ್ದಾರೆ. ಸರ್ಕಾರ ವಿರೋಧಿ ಚಳವಳಿಯ ನಾಯಕತ್ವವನ್ನು ವಹಿಸಿಕೊಂಡಿದ್ದ ಸ್ಥಳೀಯ ಮುಖಂಡರು ಕೂಡ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ವಿಶ್ವಸಂಸ್ಥೆ ಮ್ಯಾನ್ಮಾರ್ ಸೇನಾಡಳಿತದ ಈ ಕೃತ್ಯವನ್ನು ಬಲವಾಗಿ ಖಂಡಿಸಿದೆ. ಇಂಥ ಹಿಂಸಾಚಾರವನ್ನು ಸೇನಾಡಳಿತ ಕೊನೆಗೊಳಿಸಬೇಕಿದೆ. ಇನ್ನು ವಿರೋಧ ಪಕ್ಷ ಕೂಡ ಇದನ್ನು ಅತ್ಯಂತ ಹೇಯ ಕೃತ್ಯವೆಂದು ಕರೆದು ಮಿಲಿಟರಿಯನ್ನು ಖಂಡಿಸಿದೆ.
























