ತಿಮ್ಮಪ್ಪನ ದರ್ಶನಕ್ಕೆ 48 ಗಂಟೆ ಕಾಲಾವಧಿ
ಕಾರ್ಕಳ : ರಜೆಯ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತಜನಸಾಗರವೇ ಹರಿದು ಬರುತ್ತಿದೆ. ಈ ವಾರಾಂತ್ಯದಲ್ಲಿ ಬರೋಬ್ಬರಿ ನಾಲ್ಕು ದಿನಗಳ ರಜೆ ಇರುವುದರಿಂದ ದೇವಾಲಯಗಳಿಗೆ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ತಿರುಮಲದಲ್ಲಿ ದೇವರ ದರ್ಶನಕ್ಕೆ ಎರಡು ದಿನ ಬೇಕಾಗುವುದರಿಂದ ಟ್ರಾಫಿಕ್ ಅನ್ನು ಗಮನದಲ್ಲಿಟ್ಟುಕೊಂಡು ಭಕ್ತರು ತಮ್ಮ ಪ್ರವಾಸವನ್ನು ಯೋಜಿಸಲು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ. ತಿರುಮಲ ಶ್ರೀವಾರಿ ದರ್ಶನಕ್ಕೆ ಭಕ್ತಕೋಟಿ ಸಾಲುಗಟ್ಟಿ ನಿಂತಿದೆ. ಸತತ ರಜೆ ಇರುವ ಕಾರಣ ಭಕ್ತರ ದಂಡು ತಿರುಮಲದತ್ತ ನುಗ್ಗಿಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಸಾರ್ವಜನಿಕ ದರ್ಶನದ ಕ್ಯೂ ಲೈನ್ ಗೋ ಗರ್ಭ ಅಣೆಕಟ್ಟು ದಾಟಿ ಸಾಗಿದೆ. ಸದ್ಯ ತಿಮ್ಮಪ್ಪನ ದರ್ಶನಕ್ಕೆ 48 ಗಂಟೆ ಕಾಲಾವಧಿ ಬೇಕಾಗಿದೆ. ಇದರೊಂದಿಗೆ ತಿರುಮಲ ಬೆಟ್ಟದಲ್ಲಿ ಭಕ್ತ ಸಾಗರ ಪ್ರವಾಹೋಪಾದಿಯಲ್ಲಿದೆ. ಇದೇ ವೇಳೆ ಸರ್ವ ದರ್ಶನ ಸರತಿ ಸಾಲಿನಲ್ಲಿ ಟೋಕನ್ ರಹಿತ ಭಕ್ತರು ಸಂಯಮದಿಂದ ಇರುವಂತೆ ಟಿಟಿಡಿ ಅಧಿಕಾರಿಗಳು ಪದೇ ಪದೇ ಮನವಿ ಮಾಡುತ್ತಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಜನಸಾಗರ
ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಲ್ಲಿ 25,000 ಕ್ಕೂ ಅಧಿಕ ಜನರು ಭೇಟಿ ನೀಡಿದ್ದು ಶ್ರೀ ಕ್ಷೇತ್ರದಲ್ಲಿ ಭಕ್ತ ಸಮೂಹವೆ ಕಂಡು ಬಂದಿದೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತುಕೊಂಡು ದೇವಿಯ ದರ್ಶನವನ್ನು ಪಡೆದರು. ಕುಡಿಯುವ ನೀರು,ಪಾರ್ಕಿಂಗ್, ವಾಸ್ತವ್ಯದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
























