ಅವಳಿ ಹೆಣ್ಣುಮಕ್ಕಳ ಜತೆ ದಂಪತಿ ಸಾವಿಗೆ ಶರಣು
ಮಂಗಳೂರು : ಮಂಗಳೂರಿನ ಹೋಟೆಲಿನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಲದ ಬಾಧೆ ಕಾರಣ ಎಂದು ತಿಳಿದು ಬಂದಿದೆ. ಇಂದು ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡವರನ್ನು ದೇವೇಂದ್ರ (48), ನಿರ್ಮಲಾ(48), ಚೈತ್ರಾ (9), ಚೈತನ್ಯ (9) ಎಂದು ಗುರುತಿಸಲಾಗಿದೆ. ದಂಪತಿ ಮತ್ತು ಅವಳಿ ಹೆಣ್ಣುಮಕ್ಕಳು ಮೃತಪಟ್ಟವರು. ಮಕ್ಕಳನ್ನು ಕೊಂದು ಹೆತ್ತವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರಿನ ಕೆ.ಎಸ್. ರಾವ್ ರೋಡ್‌ನಲ್ಲಿರುವ ಕರುಣಾ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೈಸೂರಿನ ವಿಜಯನಗರ ಮೂಲದ ಕುಟುಂಬ ಎಂದು ತಿಳಿದು ಬಂದಿದೆ. ಸಾಲಗಾರರ ಒತ್ತಡದಿಂದ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಡೆತ್ ನೋಟ್‌ನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಉಲ್ಲೇಖಿಸಲಾಗಿದೆ.
ಮಾ. 27ರಂದು ಒಂದು ದಿನಕ್ಕಾಗಿ ಲಾಡ್ಜ್‌ನಲ್ಲಿ ರೂಂ ಬುಕ್ ಮಾಡಿದ್ದು ಬಳಿಕ ಎರಡು ದಿನಕ್ಕಾಗಿ ರೂಂ ವಿಸ್ತರಣೆ ಮಾಡಿದ್ದರು. ನಿನ್ನೆ ಸಂಜೆ ರೂಂ ಚೆಕ್‌ಔಟ್ ಮಾಡಬೇಕಾಗಿತ್ತು. ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ತಪಾಸಣೆ ನಡೆಸಲಾಗಿದೆ. ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಭೇಟಿ ಪರಿಶೀಲನೆ ನಡೆಸಿದ್ದಾರೆ.


























