ಹಿಂದುತ್ವದ ಉಳಿವಿಗಾಗಿ ಸ್ಪರ್ಧೆ – ಪ್ರಮೋದ್ ಮುತಾಲಿಕ್
ಕಾರ್ಕಳ : ಹಿಂದುತ್ವದ ಉಳಿವು, ಪ್ರಾಮಾಣಿಕ ಅಭಿವೃದ್ಧಿ, ರಾಜಕೀಯ ವೈಚಿತ್ರ ನಿವಾರಿಸುವ ಸಲುವಾಗಿ ರಾಷ್ಟ್ರೀಯತೆ, ದೇಶಭಕ್ತಿ ಏನೆಂಬುದು ತೋರಿಸಿಕೊಡುವ ಉದ್ದೇಶದಿಂದ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ರಾಜ್ಯದ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆ ವತಿಯಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಅವರು ಫೆ. 9ರಂದು ಪರಪುವಿನಲ್ಲಿ ಪಾಂಚಜನ್ಯ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದರು. ಕರ್ನಾಟಕದಲ್ಲಿ ಬಹಳಷ್ಟು ಜನ ನನಗೆ ಬೆಂಬಲವಾಗಿ ನಿಂತಿದ್ದಾರೆ. ನೀವು ಸ್ಪರ್ಧೆಗೆ ಆಯ್ಕೆ ಮಾಡಿರುವ ಕ್ಷೇತ್ರ ಯೋಗ್ಯವಾಗಿದೆ. ಎಲ್ಲ ರೀತಿಯಿಂದಲೂ ನಾವು ಸಹಕರಿಸುವುದಾಗಿ ಭರವಸೆ ನೀಡಿರುತ್ತಾರೆ ಎಂದು ಮುತಾಲಿಕೆ ತಿಳಿಸಿದರು.

ವೋಟು ನೀಡಿ ಜೊತೆಗೆ ನೋಟು ಕೊಡಿ
ಚುನಾವಣೆ ಫಂಡಿಂಗ್ ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್ ನನ್ನಲ್ಲಿ ದುಡ್ಡಿಲ್ಲ. ಹಾಗಾಗಿ ಮತದಾರರು ವೋಟು ಜೊತೆಗೆ ನೋಟು ನೀಡಿ ನನ್ನನ್ನು ಬೆಂಬಲಿಸಬೇಕು. ರಾಜ್ಯದ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಕಾರ್ಕಳ ಬಂದಿದ್ದಾರೆ. ಅವರ ಊಟ, ವಾಹನ ಖರ್ಚು ಇವೆಲ್ಲದರ ಖರ್ಚು ತುಂಬಲು ಹಣದ ಅವಶ್ಯಕತೆಯಿದೆ ಎಂದು ಮುತಾಲಿಕ್ ಹೇಳಿದರು.
ದೇಶದ್ರೋಹಿ ಸಂಘಟನೆ
ಎಸ್ಡಿಪಿಐ ದೇಶದ್ರೋಹಿಗಳ ಸಂಘಟನೆ, ಅದೊಂದು ದೇಶದ್ರೋಹಿಗಳ, ಕೊಲೆಗಡುಕರ ಪಕ್ಷ. ಎಸ್ಡಿಪಿಐ ಅನ್ನು ಬ್ಯಾನ್ ಮಾಡುವಂತೆ ಕಳೆದ ಹಲವಾರು ವರ್ಷಗಳಿಂದ ಒತ್ತಾಯ ಮಾಡಿಕೊಂಡು ಬಂದಿದ್ದೇವೆ. ಅವರ ಸ್ಪರ್ಧೆಯಿಂದ ಯಾರಿಗೆ ಲಾಭ ಅನ್ನವುದು ಎಲ್ಲರಿಗೂ ತಿಳಿದ ವಿಚಾರ. ಪರೋಕ್ಷವಾಗಿ ಯಾರು ಅವರಿಗೆ ಸಹಕಾರ ಕೊಡುತ್ತಾರೆ ಅನ್ನುವುದು ಗೊತ್ತಿದೆ ಎಂದು ಮುತಾಲಿಕ್ ಹೇಳಿದರು. ಗೋ ಕಳ್ಳತನ ನಿಲ್ಲುವವರೆಗೆ, ಮುಂದಿನ ದಿನಗಳಲ್ಲಿ ಗೋ ಕಳ್ಳರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನ ಒಪ್ಪಲಾರರು
ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಅಭಿವೃದ್ಧಿ ಕಾರ್ಯ, ಪ್ರಾಮಾಣಿಕತೆ ಬಗ್ಗೆ ಮಾತನಾಡಬೇಕೆ ಹೊರತು ಬೇರೆ ಪಕ್ಷ, ಅವರ ಅಭ್ಯರ್ಥಿ ಬಗ್ಗೆ ಮಾತನಾಡಬಾರದು. ಜನ ಇದನ್ನು ಒಪ್ಪುವುದಿಲ್ಲ ಎಂದರು.
ಶೋಭಾ ಕರಂದ್ಲಾಜೆಗೆ ಅಭಿನಂದನೆ
ಕೇಂದ್ರ ಸರಕಾರದ ಅನುದಾನದಿಂದಾಗಿ ಈ ಭಾಗದ ರಸ್ತೆಗಳು ಉತ್ತಮವಾಗಿದೆ. ಅದಕ್ಕಾಗಿ ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ರಾಜ್ಯ ಸರಕಾರದಿಂದ ಕಾರ್ಕಳದಲ್ಲಿ ರಸ್ತೆ ನಿರ್ಮಾಣಕ್ಕೆ ಎಷ್ಟು ಅನುದಾನ ಬಿಡುಗಡೆ ಆಗಿದೆ ಎಂಬುದನ್ನು ಕ್ಷೇತ್ರದ ಶಾಸಕರು ಮಾಹಿತಿ ನೀಡಬೇಕಾಗಿದೆ. ಏಕೆಂದರೆ ಗ್ರಾಮೀಣ ಭಾಗದಲ್ಲಿನ ರಸ್ತೆಗಳು ಇನ್ನೂ ದುಸ್ತರವಾಗಿದ್ದು ಜನಸಾಮಾನ್ಯರ ಸಂಚಾರಕ್ಕೆ ಕುತ್ತಾಗಿದೆ. ರಾಜ್ಯ ಸರಕಾರದ ಅನುದಾನದಿಂದ ಯಾವ್ಯಾವ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಂಡಿದೆ ಎನ್ನುವುದನ್ನು ಕ್ಷೇತ್ರದ ಶಾಸಕರು ಬಹಿರಂಗಪಡಿಸಬೇಕೆಂದು ಮುತಾಲಿಕ್ ಪ್ರಶ್ನಿಸಿದರು.
ಒತ್ತಡವಿಲ್ಲ
ಚುನಾವಣಾ ಕಣದಿಂದ ಹಿಂದೆ ಸರಿಯಲು ಏನಾದರೂ ಒತ್ತಡವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಖಂಡಿತ ಇಲ್ಲ ಎಂದುತ್ತರಿಸಿದ ಮುತಾಲಿಕ್ ಹಳ್ಳಿ ಹಳ್ಳಿಯಲ್ಲಿ ನನಗೆ ಉತ್ತಮ ಸ್ಪಂದೆನೆ ದೊರೆಯುತ್ತಿದೆ ಎಂದರು. ಮಂಗಗಳ ಕಾಟವನ್ನು ತಡೆಯುವ ಸಲುವಾಗಿ ಮಂಕಿ ಪಾರ್ಕ್ ನಿರ್ಮಾಣ, ಎಲೆ ಚುಕ್ಕಿ ರೋಗದಿಂದ ನಷ್ಟಕ್ಕೀಡಾದ ರೈತರಿಗೆ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಬೇಡಿಕೆ, ಕಾರ್ಕಳ ಕ್ಷೇತ್ರದ 7 ಹೋಬಳಿಗಳಲ್ಲೂ ಸರಕಾರಿ ಗೋ ಶಾಲೆಗಳ ನಿರ್ಮಾಣ, ಗೋ ಕಳ್ಳತನ ವಿರುದ್ಧ ಕಟ್ಟು ನಿಟ್ಟಿನ ಕ್ರಮ, ಚರ್ಮಗಂಟು ರೋಗದಿಂದಾಗಿ ಸಾವಿಗೀಡಾದ ದನಗಳ ಮನೆಗೆ ಸರಕಾರದಿಂದ ಪರಿಹಾರ ಒದಗಿಸುವಂತೆ ಮಾಡುತ್ತೇವೆ ಎಂದರು.
ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕರಾವಳಿಯಲ್ಲಿ ಹಿಂದುತ್ವದ ಅಲೆ ಸಾಗರೋಪಾದಿಯಲ್ಲಿ ಹರಿಯುವಂತೆ ಮಾಡಿರುವುದು ಮುತಾಲಿಕ್. ಅವರು ಹುಟ್ಟಿದ್ದು ಬೆಳಗಾವಿಯಾದರೂ ಅವರ ಕಾರ್ಯಕ್ಷೇತ್ರ, ಹೋರಾಟ ಕರಾವಳಿ ಹಾಗೂ ಮಲೆನಾಡು ಆಗಿದೆ ಎಂದರು.
ಹಿಂದುತ್ವದಿಂದಾಗಿ ಅಧಿಕಾರ
ಮುತಾಲಿಕ್ ಅವರ ಹಿಂದಿನ ಶಿಷ್ಯರಿಗೆ ಹಿಂದುತ್ವದ ಪವರ್ ಇದೆ ಎಂಬ ಕಾರಣಕ್ಕಾಗಿ ಸ್ಥಳೀಯ ಜನತೆ ಇಲ್ಲಿನ ಶಾಸಕರಿಗೆ ರಾಜಕೀಯವಾಗಿ ಅಧಿಕಾರ ನೀಡಿದರು. ಕಳೆದ ಒಂದು ವರ್ಷದಿಂದ ಇತ್ತೀಚೆಗೆ ನಡೆದ ಧರ್ಮ ದಂಗಲ್, ಹಿಜಾಬ್, ಆಜಾನ್, ಗೋ ಹತ್ಯೆ, ಗೋ ಕಳ್ಳತನ ಇವೆಲ್ಲದರ ವಿರುದ್ಧ ನಡೆದ ಹೋರಾಟದ ಸಂದರ್ಭ ಕಾರ್ಕಳ ಕ್ಷೇತ್ರದ ಶಾಸಕರು ಹಿಂದೂಗಳಿಗೆ ಸ್ಪಂದಿಸಿಲ್ಲ. ಇದರಿಂದಾಗಿ ಸ್ಥಳೀಯ ಜನತೆಗೆ ಅಸಮಾಧಾನ ಉಂಟಾಗಿದ್ದು, ಹಿಂದುತ್ವದ ರಕ್ಷಣೆಗಾಗಿ ಮತ್ತು ಹಿಂದೂ ಕಾರ್ಯಕರ್ತರಿಗೆ ಬೆಂಬಲ ನೀಡುವ ಸಲುವಾಗಿ ಪ್ರಮೋದ್ ಮುತಾಲಿಕ್ ಕಾರ್ಕಳ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಇಡೀ ರಾಜ್ಯಕೆ ಹಿಂದುತ್ವದ ಪರವಾದ ಒಂದೊಳ್ಳೆ ಸಂದೇಶವಾಗಲಿದೆ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಹಿಂದುತ್ವದ ಕಾರ್ಯ
ಮುತಾಲಿಕ್ ಅವರು ಕಳೆದ 45 ವರ್ಷಗಳಿಂದ ಹಿಂದುತ್ವಕ್ಕಾಗಿ ಶ್ರಮಿಸುತ್ತಿದ್ದಾರೆ. ಮುತಾಲಿಕ್ ಅವರು ಬೇಡಿಕೆ ಇಟ್ಟಾಗ್ಯೂ ಒಬ್ಬ ಪ್ರಬಲ ಹಿಂದೂ ಅಭ್ಯರ್ಥಿಗೆ ಒಂದೇ ಒಂದು ಸ್ಥಾನ ನೀಡಲಾಗಿಲ್ಲ. ಬಿಜೆಪಿಯ ಕೆಲ ನಾಯಕರಿಗೂ ಪ್ರಮೋದ್ ಮುತಾಲಿಕ್ ವಿಧಾನ ಸಭೆ ಪ್ರವೇಶ ಮಾಡಬೇಕೆನ್ನುವ ಅಪೇಕ್ಷೆಯಿದೆ. ಆದರೆ ಅವರು ಅದನ್ನು ನೇರವಾಗಿ ಹೇಳುತ್ತಿಲ್ಲ. ಅನೇಕ ಹಿಂದೂ ಕಾರ್ಯಕರ್ತರು ಈ ಭಾಗದಲ್ಲಿ ಕೇಸ್ಗಳನ್ನು ಹಾಕಿಸಿಕೊಂಡಿದ್ದಾರೆ. ಇವತ್ತಿಗೂ ಕೋರ್ಟ್ ಕಚೇರಿ ಅಂತ ಅಲೆಯುತ್ತಿದ್ದಾರೆ. ಮಂಗಳೂರು ಭಾಗದ ಶಾಸಕರ ಪ್ರಯತ್ನದಿಂದಾಗಿ ಹಿಂದೂ ಕಾರ್ಯಕರ್ತರ ಕೇಸ್ ರದ್ದು ಆಗಿದೆ. ದುರಂತವೆಂದರೆ ಕಾರ್ಕಳದಲ್ಲಿರುವ ಹಿಂದೂ ಕಾರ್ಯಕರ್ತರ ರೌಡಿ ಶೀಟ್ ಇವತ್ತಿಗೂ ಕ್ಲೋಸ್ ಆಗಿಲ್ಲ. ಇದಕ್ಕೆ ಇಲ್ಲಿಯ ಶಾಸಕರ ಇಚ್ಚಾಶಕ್ತಿಯ ಕೊರತೆಯೇ ಕಾರಣವೆಂದು ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಶಾಸಕರ ಎದುರು ಕೈ ಕಟ್ಟಿ ನಿಲ್ಲಬೇಕೆಂಬ ಒಂದೇ ಕಾರಣಕ್ಕೆ ಇವತ್ತಿನವರೆಗೂ ಹಿಂದೂ ಕಾರ್ಯಕರ್ತರು ಶೋಷಣೆಯನ್ನು ಎದುರಿಸುತ್ತಿದ್ದಾರೆ. ಇವರೆಲ್ಲರ ಸಂಕಟ ವಿಮೋಚಣೆಗಾಗಿ ಪ್ರಮೋದ್ ಮುತಾಲಿಕ್ ಈ ಭಾಗಕ್ಕೆ ಬಂದಿದ್ದಾರೆ. ಅವರ ಸ್ಪರ್ಧೆ ಈ ಭಾಗದ ಜನತೆಯಲ್ಲಿ ಹರ್ಷವನ್ನುಂಟು ಮೂಡಿದೆ. ಹಿಂದುತ್ವವನ್ನು ಗೆಲ್ಲಿಸುವುದಕ್ಕಾಗಿ, ಹಿಂದುತ್ವವನ್ನು ರಾಜ್ಯಾದ್ಯಂತ ಪಸರಿಸುವುದಕ್ಕಾಗಿ ಮುತಾಲಿಕ್ ಇಂದು ಚುನಾವಣೆಗೆ ನಿಂತಿದ್ದಾರೆಯೇ ಹೊರತು ಯಾವುದೇ ಏಜೆಂಟರ್ ಆಗಿ ಅಥವಾ ಯಾರಾದೋ ಬಲವಂತಕ್ಕಾಗಿ ನಿಂತಿಲ್ಲ. ಬದಲಾಗಿ ಕೇಸರಿ ಧ್ವಜವನ್ನು ಹಿಡಿದುಕೊಂಡು ವಿಧಾನಸಭೆಯನ್ನು ಪ್ರವೇಶಿಸುವ ಸಲುವಾಗಿ ಕಣಕ್ಕೆ ಇಳಿದಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ನ್ಯಾಯವಾದಿ ಹರೀಶ್ ಅಧಿಕಾರಿ, ಪುರಸಭಾ ಸದಸ್ಯ ಲಕ್ಷ್ಮೀ ನಾರಾಯಣ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.






























































