ಕಾರ್ಕಳ : ಎಲ್ಲೂರು ಗ್ರಾಮದ ಕೊಳಚ್ಚೂರು ಎಂಬಲ್ಲಿ ರೈಲ್ವೆ ಟ್ರಾಕ್ ನಲ್ಲಿ ತಲೆ ಕೈಕಾಲು ಛಿದ್ರಗೊಂಡು ಕವುಚಿ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅ. 18ರಂದು ಕಾಪು ತಾಲೂಕು ನಂದಿಕೂರು ಸಮೀಪದ ಕೊಳಚ್ಚೂರು ಎಂಬಲ್ಲಿ ಕೊಂಕಣ್ ರೈಲ್ವೆ ಹಳಿಯಲ್ಲಿ ಶವ ಪತ್ತೆಯಾಗಿದ್ದು, ಈ ಬಗ್ಗೆ ಸ್ಟೇಷನ್ ಮಾಸ್ಟರ್ ದಿನೇಶ್ ಎಂಬವರು ಪಡುಬಿದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಈ ಕುರಿತು ಪರಿಶೀಲಿಸಲಾಗಿ ಬಾಲಕ ಕಾರ್ಕಳ ತಾಲೂಕು ಸೂಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಆದರ್ಶ (16) ಎಂದು ತಿಳಿದುಬಂದಿದೆ.
ಪ್ರತಿಭಾವಂತ
ಕಲಿಕೆ, ಕ್ರೀಡೆಯಲ್ಲಿ ಪ್ರತಿಭಾವಂತನಾಗಿದ್ದ ಈತ 17ರ ವಯೋಮಾನದೊಳಗಿನ ರಾಜ್ಯ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ. ಇದಕ್ಕಾಗಿ ಕೊಡಗಿನಲ್ಲಿ ವಿಶೇಷ ತರಬೇತಿ ಪಡೆದಿದ್ದ. ಬೆಳ್ಮಣ್ ಸದಾಶಿವ ಆಚಾರ್ಯ ಅವರ ಪುತ್ರನಾಗಿರುವ ಈತ ತಂದೆ, ತಾಯಿ, ಸಹೋದರ, ಮೂವರು ಸಹೋದರಿಯರನ್ನು ಅಗಲಿದ್ದಾನೆ. ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಕಾರಣ ಮಾತ್ರ ತಿಳಿದುಬಂದಿಲ್ಲ.





































































