ಹೃದಯ ಶ್ರೀಮಂತಿಕೆ ಮೆರೆದ 80ರ ಹರೆಯದ ಅಶ್ವತ್ಥಮ್ಮ
ಮಂಗಳೂರು : ಕುಂದಾಪುರ ಮೂಲದ ಅಶ್ವತ್ಥಮ್ಮ ಎಂಬ ವೃದ್ಧೆ ಭಿಕ್ಷೆ ಬೇಡಿ ಬಂದ ಒಂದು ಲಕ್ಷ ರೂಪಾಯಿಯನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನ್ನದಾನ ನಿಧಿಗೆ ಸಮರ್ಪಿಸಿದ್ದಾರೆ.
ಪ್ರತಿ ವರ್ಷ ನಾನಾ ದೇವಸ್ಥಾನಗಳಿಗೆ ಅನ್ನದಾನಕ್ಕಾಗಿ ಹಣ ನೀಡುವ ಅಶ್ವತ್ಥಮ್ಮ ಕಳೆದ ಬಾರಿ ಪೊಳಲಿ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ನೀಡಿದ್ದರು. ಈ ಬಾರಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.
ಅ.17ರಂದು ಬಪ್ಪಾನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಶ್ವತ್ಥಮ್ಮ, ದೇವಸ್ಥಾನದ ಮಧ್ಯಾಹ್ನದ ಅನ್ನದಾನ ನಿಧಿಗೆ ತನ್ನ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಬಪ್ಪನಾಡು ದೇವಸ್ಥಾನದ ಆಡಳಿತ ಸಮಿತಿ ಅಶ್ವತ್ಥಮ್ಮ ಅವರ ಸಹಾಯಧನ ಸ್ವೀಕರಿಸಿ ದೇವಳದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದೆ.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೋಡು ನಿವಾಸಿಯಾಗಿರುವ ಅಶ್ವತ್ಥಮ್ಮರ ಪತಿ 18 ವರ್ಷಗಳ ಹಿಂದೆ ಮೃತರಾಗಿದ್ದಾರೆ. ಮಕ್ಕಳೂ ಇಹಲೋಕ ತ್ಯಜಿಸಿದ್ದಾರೆ. ಧಾರ್ಮಿಕ ಪ್ರಜ್ಞೆ ಹೊಂದಿರುವ ಅಶ್ವತ್ಥಮ್ಮ ಆ ಬಳಿಕ ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡುತ್ತಿದ್ದಾರೆ. ಭಿಕ್ಷೆ ಬೇಡಿ ಬಂದ ಹಣವನ್ನು ಎಳ್ಳಷ್ಟೂ ಸ್ವಂತಕ್ಕೆ ಉಪಯೋಗಿಸದ ಅಶ್ವತ್ಥಮ್ಮ ಈ ವರೆಗೆ ಏಳು ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ದೇವಸ್ಥಾನ, ಆಶ್ರಮಗಳಿಗೆ ದೇಣಿಗೆಯಾಗಿ ನೀಡಿದ್ದಾರೆ.
81ರ ಹರೆಯದ ಇಳಿವಯಸ್ಸಿನ ಅಶ್ವತ್ಥಮ್ಮ ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೇ ನೀಡಿ ಗಮನ ಸೆಳೆಯುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಭಿಕ್ಷೆ ಬೇಡುತ್ತಿದ್ದಾರೆ 80ರ ಹರೆಯ ಅಶ್ವತ್ಥಮ್ಮ.
ವರ್ಷದ ಬಹುತೇಕ ಸಮಯ ಅಯ್ಯಪ್ಪ ಮಾಲಾಧಾರಿಯಾಗಿಯೇ ಇರುವ ಅಶ್ವತ್ಥಮ್ಮ, ಅಯ್ಯಪ್ಪ ಸ್ವಾಮಿಯ ಪರಮ ಭಕ್ತೆ. ಅಯ್ಯಪ್ಪ ಸ್ವಾಮಿಯ ವೃತಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ಶಬರಿಮಲೆಯ ಪಂಪೆ, ಪಂದಳ, ಎರಿಮಲೆಯಲ್ಲೂ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರಿಗೆ ಅನ್ನದಾನವನ್ನು ಮಾಡಿದ್ದಾರೆ.
ಬೆಳಗ್ಗೆಯಿಂದ ಸಂಜೆಯವರೆಗೆ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ನಿತ್ಯ ಪಿಗ್ಮಿಗೆ ಕಟ್ಟಿ ಲಕ್ಷ ರೂಪಾಯಿ ಜಮೆಯಾದ ಬಳಿಕ ಆ ಹಣವನ್ನು ದೇವಸ್ಥಾನದ ಅನ್ನದಾನಕ್ಕೆ ನೀಡುತ್ತಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ, ಪೊಳಲಿ ಅಖಿಲೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳಿಗೆ ಒಂದೂವರೆ ಲಕ್ಷ , ಗಂಗೊಳ್ಳಿ ದೇವಸ್ಥಾನ, ಪೊಳಲಿ ದೇವಸ್ಥಾನದ ಅನ್ನದಾನ ಸೇರಿದಂತೆ ನಾನಾ ದೇಗುಲ ಹಾಗೂ ಆಶ್ರಮಗಳಿಗೆ ಅಶ್ವತ್ಥಮ್ಮ ದೇಣಿಗೆ ನೀಡಿದ್ದಾರೆ.