ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳು, ಪ್ರೇಮಿಯನ್ನು ಕೊಂದ ತಂದೆ
ಬಾಗಲಕೋಟೆ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಳೆಂಬ ಕಾರಣಕ್ಕೆ ಮಗಳು ಹಾಗೂ ಆಕೆಯ ಪ್ರಿಯಕರನನ್ನು ತಂದೆ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಬೇವಿನಮಟ್ಟಿಯಲ್ಲಿ ನಡೆದಿದೆ. ಬೇವಿನಮಟ್ಟಿ ಗ್ರಾಮದ 18 ವರ್ಷದ ರಾಜೇಶ್ವರಿ ಕರಡಿ 24 ವರ್ಷದ ವಿಶ್ವನಾಥ್ ನೆಲಗಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇದೀಗ ಇಬ್ಬರದ್ದು ಕೊಲೆಯಾಗಿದ್ದು, ಆದರೆ ಶವಗಳು ಪತ್ತೆಯಾಗಿಲ್ಲ.
ಎರಡು ವರ್ಷಗಳಿಂದ ಅವರು ಪ್ರೀತಿಸುತ್ತಿದ್ದರು. ಈ ವಿಷಯ ಯುವತಿ ಪೋಷಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆಕೆಗೆ ಎಚ್ಚರಿಕೆ ನೀಡಿದ್ದಾರೆ .ಯುವಕ ಕೆಳ ಜಾತಿಯವನಾಗಿರುವುದರಿಂದ ಆತನ ಜತೆಗಿನ ಒಡನಾಟ ಬಿಡುವಂತೆ ಬುದ್ಧಿ ಹೇಳಿದ್ದಾರೆ. ಜಾತಿ ವಿಚಾರವಾಗಿ ಈ ಹಿಂದೆ ಎರಡೂ ಕುಟುಂಬಗಳಲ್ಲಿ ಜಗಳವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೇವಿನಮಟ್ಟಿ, ಹನುಮಂತ ಬೇವಿನಮಟ್ಟಿ ಹಾಗೂ ಬೀರಪ್ಪ ದಳವಿ ಎಂಬ ಮೂವರನ್ನು ಬಂಧಿಸಲಾಗಿದೆ.
ಆರಂಭದಲ್ಲಿ ಜೋಡಿ ಓಡಿ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಯುವಕನ ತಾಯಿ ಮಗ ಕಾಣಿಸುತ್ತಿಲ್ಲ ಎಂದು ದೂರು ದಾಖಲಿಸಿದ್ದರು. ಇತ್ತ ಮಗಳನ್ನು ಅಪಹರಿಸಲಾಗಿದೆ ಎಂದು ಅಪ್ರಾಪ್ತೆಯ ಪೋಷಕರು ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ವೇಳೆ ಅಪ್ರಾಪ್ತೆಯ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ.
ವಿಶ್ವನಾಥ್‌ನನ್ನು ಅವನ ಪೋಷಕರು ಜೀವನೋಪಾಯಕ್ಕಾಗಿ ಕೇರಳದ ಕಾಸರಗೋಡಿಗೆ ಕಳುಹಿಸಿದ್ದರು, ಅಲ್ಲಿ ಆತ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಅಷ್ಟರಲ್ಲಿ ರಾಜೇಶ್ವರಿ ತನ್ನ ತಂದೆ-ತಾಯಿಗೆ ವಿಶ್ವನಾಥ್‌ನನ್ನು ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಳು.
ಯುವತಿಯ ಕುಟುಂಬಸ್ಥರು ಹೆಣೆದ ಬಲೆಗೆ ವಿಶ್ವನಾಥ್ ಬಿದ್ದಿದ್ದ. ಮದುವೆ ಮಾಡಿಕೊಡುವುದಾಗಿ ಹೇಳಿ ಆತನನ್ನು ಕರೆಸಿಕೊಂಡಿದ್ದಾರೆ. ವಿಶ್ವನಾಥ್ ನರಗುಂದ ತಲುಪಿದಾಗ ಯುವತಿಯನ್ನು ಬೇರೆ ವಾಹನದಲ್ಲಿ ಕರೆತರುವಾಗ ಆರೋಪಿಗಳು ಆತನನ್ನು ಜೀಪಿನಲ್ಲಿ ಕೂಡಿ ಹಾಕಿದ್ದರು. ಇಬ್ಬರನ್ನೂ ವಾಹನದಲ್ಲಿಯೇ ಹತ್ಯೆ ಮಾಡಿ, ಶವಗಳನ್ನು ಕೃಷ್ಣಾ ನದಿಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳಿಗಾಗಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ಎರಡು ದಿನಗಳಿಂದ ವಿಶ್ವನಾಥ್‌ನನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಆತನ ಪೋಷಕರು ಅಕ್ಟೋಬರ್ 3 ರಂದು ನರಗುಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಬಾಲಕಿಯ ಕುಟುಂಬದವರು ಅ.7 ರಂದು ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ದಾಖಲಿಸಿದ್ದರು. ಕೃತ್ಯದಲ್ಲಿ ರಾಜೇಶ್ವರಿಯ ಪೋಷಕರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.






































































