12 ವರ್ಷದ ಬಾಲಕನಿಗೆ 2.9 ಲಕ್ಷ ರೂ. ದಂಡ

ರಾಮನವಮಿ ಗಲಭೆ ಸಂದರ್ಭದಲ್ಲಿ ನೆರೆಮನೆಗೆ ನುಗ್ಗಿ ದರೋಡೆ ಮಾಡಿ, ಧ್ವಂಸಗೊಳಿಸಿದ ಆರೋಪ

ಭೋಪಾಲ್ : ರಾಮ ನವಮಿ ವೇಳೆ ಸಂಭವಿಸಿದ ಗಲಭೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ನ್ಯಾಯ ಮಂಡಳಿ 12 ವರ್ಷದ ಬಾಲಕನಿಗೆ 2.9 ಲ.ರೂ. ದಂಡ ವಿಧಿಸಿರುವುದು ಈಗ ಭಾರಿ ವಿವಾದಕ್ಕೊಳಗಾಗಿದೆ. ಖಾರ್ಗೋನ್‌ನಲ್ಲಿ ರಾಮನವಮಿ ವೇಳೆ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಹಾನಿಗಾಗಿ 2.9 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬಾಲಕನಿಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ನಲ್ಲಿ ಬಾಲಕನ ಪ್ರಾಯ 12 ವರ್ಷ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.
‘ಮಧ್ಯಪ್ರದೇಶ ಸಾರ್ವಜನಿಕ ಆಸ್ತಿಗೆ ಹಾನಿಯ ವಸೂಲಾತಿ ಕಾಯ್ದೆಯ ಅಡಿಯಲ್ಲಿ ಈ ದಂಡ ವಿಧಿಸಲಾಗಿದೆ. ಮುಷ್ಕರಗಳು, ಪ್ರತಿಭಟನೆಗಳು ಮತ್ತು ಗುಂಪು ಘರ್ಷಣೆಗಳ ಸಮಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಉದ್ದೇಶಪೂರ್ವಕ ಹಾನಿಮಾಡಿದರೆ ಆಗುವ ನಷ್ಟವನ್ನು ತುಂಬಿಕೊಡಲು ಮತ್ತು ಪರಿಹಾರ ಪಡೆಯಲು ಈ ಕಾನೂನು ಸಹಾಯ ಮಾಡುತ್ತದೆ.
ರಾಮನವಮಿಯ ಘರ್ಷಣೆ ಬಳಿಕ ರಾಜ್ಯ ನ್ಯಾಯಮಂಡಳಿಗೆ 343 ದೂರುಗಳು ಬಂದಿವೆ. ಅದರಲ್ಲಿ ಅದು ಕೇವಲ 34 ಅನ್ನು ಸ್ವೀಕರಿಸಿದೆ. ಇದುವರೆಗೆ, ಇದು ಆರು ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಇದರಲ್ಲಿ ನಾಲ್ಕು ಮಂದಿ ಹಿಂದೂಗಳು ಮತ್ತು ಇಬ್ಬರು ಮುಸ್ಲಿಮರು ಸೇರಿದ್ದಾರೆ. 50 ಮಂದಿಯಿಂದ 7.46 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.
ಎಪ್ರಿಲ್ 10 ರಂದು ನಡೆದ ರಾಮನವಮಿ ಮೆರವಣಿಗೆ ವೇಳೆ ಗುಂಪು ಹಲ್ಲೆ ನಡೆಸಿದಾಗ ತನ್ನ ಆಸ್ತಿಗೆ ಹಾನಿಯಾಗಿದೆ ಎಂದು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿರುವ ಮಹಿಳೆಯೊಬ್ಬರು ದೂರು ಕೊಟ್ಟಿದ್ದಾರೆ. ಬಾಲಕ ಮತ್ತು ಇತರರು ತಮ್ಮ ಮನೆಯನ್ನು ದರೋಡೆ ಮಾಡಿ ಧ್ವಂಸ ಮಾಡಿದ್ದಾರೆ ಎಂದು ನೆರೆಮನೆಯವರು ಆರೋಪಿಸಿದ್ದಾರೆ. ಬಾಲಕ ಮತ್ತು ಅವನ ತಂದೆಯಲ್ಲದೆ, ವಯಸ್ಕರಾದ ಇತರ ಆರು ಮಂದಿಗೆ ನೋಟಿಸ್ ಕಳುಹಿಸಲಾಗಿದೆ.
ನನ್ನ ಮಗ ಅಪ್ರಾಪ್ತ. ಗಲಭೆ ನಡೆದಾಗ ನಾವು ಮಲಗಿದ್ದೆವು, ನಮಗೆ ನ್ಯಾಯ ಬೇಕು ಬಾಲಕನ ತಂದೆ ಎಂದು ಕಾಲು ಖಾನ್ ಹೇಳಿದ್ದಾರೆ. ನೋಟಿಸ್ ರದ್ದುಗೊಳಿಸುವಂತೆ ಕೋರಿ ಕುಟುಂಬವು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ ಸೆಪ್ಟೆಂಬರ್ 12 ರಂದು ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ, ಯಾವುದೇ ಆಕ್ಷೇಪಣೆಗಳಿದ್ದರೇ ನ್ಯಾಯಮಂಡಳಿಗೆ ಸಲ್ಲಿಸಬೇಕು ಎಂದು ಹೇಳಿದೆ. ಆಕ್ಷೇಪಣೆ ಸಲ್ಲಿಸಿದರೆ, ಅದನ್ನು ನ್ಯಾಯಮಂಡಳಿಯು ಕಾನೂನಿನ ಪ್ರಕಾರ ಪರಿಗಣಿಸಿ ನಿರ್ಧರಿಸುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

Latest Articles

error: Content is protected !!