ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂಬ ಆರೋಪ
ಬೆಂಗಳೂರು: ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸರಕಾರದ ವಿರುದ್ಧ PayCM ಅಭಿಯಾನ ನಡೆಸಿದ್ದ ಕಾಂಗ್ರೆಸ್ ಇದೀಗ ಅದರ ಮುಂದುವರಿದ ಭಾಗವಾಗಿ SayCM ಎಂಬ ಹೋರಾಟ ಪ್ರಾರಂಭಿಸಿದೆ. ಆಡಳಿತಾರೂಢ ಬಿಜೆಪಿ ಸರಕಾರದ ಈಡೇರದ ಭರವಸೆಗಳ ಬಗ್ಗೆ ಉತ್ತರಿಸುವಂತೆ ಕಾಂಗ್ರೆಸ್ ಮಂಗಳವಾರ SayCM ಅಭಿಯಾನ ಪ್ರಾರಂಭಿಸಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನೀಡಿದ ಭರವಸೆಗಳ ಬಗ್ಗೆ ರಾಜ್ಯದ ಜನತೆಗೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕಾಂಗ್ರೆಸ್, “ಪೇಸಿಎಂ ಈಗ ಸೇಸಿಎಂ ಆಗಲಿ, ರಾಜ್ಯದ ಜನತೆಗೆ ಉತ್ತರ ನೀಡಲಿ. ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನ ಭ್ರಷ್ಟರಾದ ಕರ್ನಾಟಕ ಬಿಜೆಪಿ ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ” ಎಂದಿದೆ.
ತನ್ನದೆ ಪ್ರಣಾಳಿಕೆ ಇಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸುವ ದಮ್ಮು, ತಾಕತ್ತು ಇದೆಯೇ ಬಿಜೆಪಿಗೆ? ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ, ಈಡೇರಿಸಿಲ್ಲ ಎಂಬ ಲೆಕ್ಕ ಕೊಡಲು ಸಾಧ್ಯವೇ ರಾಜ್ಯದ ಜನತೆಗೆ?. ಪ್ರಣಾಳಿಕೆ ಮುಂದಿಟ್ಟುಕೊಂಡು ದಮ್ಮು ತಾಕತ್ತಿನ ಪ್ರದರ್ಶನ ಮಾಡಲು ಸಾಧ್ಯವೇ ಕರ್ನಾಟಕ ಬಿಜೆಪಿ? ಎಂದು ಸರಣಿ ಟ್ವೀಟ್‌ಗಳ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 550 ಭರವಸೆಗಳನ್ನು ನೀಡಿತ್ತು, ಇದುವರೆಗೂ ನಾವು ಬಿಜೆಪಿ ನೀಡಿದ ಭರವಸೆಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳಿದ್ದೇವೆ, ಆದರೆ, ಕರ್ನಾಟಕ ಬಿಜೆಪಿ ನೀಡಿದ ಉತ್ತರ – 0. ತಮ್ಮದೇ ಪ್ರಣಾಳಿಕೆಯ ಅಂಶಗಳ ಬಗ್ಗೆ ಬಿಜೆಪಿಗೆ ಮಾತನಾಡುವ ಧೈರ್ಯವಿರದಿರುವುದು ಸರ್ಕಾರದ ವೈಫಲ್ಯಕ್ಕೆ ನಿದರ್ಶನ ಎಂದು ಕಾಂಗ್ರೆಸ್ ಟೀಕಿಸಿದೆ.