ಕಾರ್ಕಳ : ಸಭೆಯಲ್ಲಿ ಆಯ್ಕೆ ಮಾಡಲಾಗುವ ಫಲಾನುಭವಿಗಳ ಹೆಸರು ನಿರ್ಣಯದ ಪಟ್ಟಿಯಲ್ಲಿರುವುದಿಲ್ಲ. ಮನೆ ದುರಸ್ತಿ ಅನುದಾನಕ್ಕೆ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿಯಲ್ಲಿ ತಾರತಮ್ಯವೆಸಗಲಾಗಿದೆ ಎಂದು ಆರೋಪಿಸಿ ವಿಪಕ್ಷ ಸದಸ್ಯರು ಧರಣಿ ಕುಳಿತ ಘಟನೆ ಮಂಗಳವಾರ ಕಾರ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
2019ರಲ್ಲಿ ಕೊಟ್ಟ ಅರ್ಜಿಯನ್ನು ಬಾಕಿಯಿಟ್ಟು 2022ರಲ್ಲಿ ಅರ್ಜಿ ಕೊಟ್ಟವರಿಗೆ ಮನೆದುರಸ್ತಿಗೆ ಅನುದಾನ ಮಂಜೂರು ಮಾಡಲಾಗಿದೆ. ಇದು ಸರಿಯಲ್ಲ. ವಾರ್ಡ್‌ನ ಫಲಾನುಭವಿಗಳ ಆಯ್ಕೆಯನ್ನು ವಾರ್ಡ್ ಸದಸ್ಯರೇ ಮಾಡಬೇಕು. ಅದರಲ್ಲಿ ಅಧ್ಯಕ್ಷರ ಅಥವಾ ಆಡಳಿತ ಪಕ್ಷದ ಹಸ್ತಕ್ಷೇಪವಿರಬಾರದು. ಸ್ಥಳೀಯ ಪುರಸಭಾ ಸದಸ್ಯರ ಹಕ್ಕಿಗೆ ಚ್ಯುತಿಬರಬಾರದು ಎಂದು ಶುಭದ ರಾವ್ ಏರು ಧ್ವನಿಯಲ್ಲಿ ಹೇಳಿದರು.
ಧ್ವನಿಗೂಡಿಸಿದ ಪ್ರತಿಮಾ, ವಿಪಕ್ಷದವರ ವಾರ್ಡ್‌ನಲ್ಲೂ ಆಡಳಿತ ಪಕ್ಷದವರು, ಪುರಸಭಾ ಅಧ್ಯಕ್ಷರು ಹಸ್ತಕ್ಷೇಪ ಮಾಡೋದಾದ್ರೆ ನಾವ್ಯಾಕೆ ಅಲ್ಲಿನ ಸದಸ್ಯರಾಗಿ ಮುಂದುವರಿಯಬೇಕು. ನಮ್ಮನ್ನು ಜನತೆ ಚುನಾಯಿಸಿ ಕಳಿಸಿದ್ದಾರೆ. ಹೀಗಾಗಿ ವಾರ್ಡ್ ಕೆಲಸ ಕಾರ್ಯಗಳನ್ನು ನಾವೇ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಪಾಪಸ್
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 11 ಮನೆಗಳನ್ನು ದುರಸ್ತಿಗಾಗಿ ಆಯ್ಕೆ ಮಾಡಲಾಗಿತ್ತು. ಮತ್ತೊಂದು ಮನೆ ಸೇರ್ಪಡೆಗಾಗಿ ವಿಪಕ್ಷದ ಸದಸ್ಯರು ಒತ್ತಾಯಿಸಿ ಧರಣಿ ಕುಳಿತಿದ್ದರು. ಅಶ್ಪಕ್ ಅಹಮ್ಮದ್, ನಳಿನಿ, ರೆಹಮತ್ ಶೇಖ್, ಪ್ರದೀಪ್, ನೀತಾ ಆಚಾರ್ಯ, ಮೀನಾಕ್ಷಿ ಗಂಗಾಧರ್, ವಿನ್ನಿ ಬೋಲ್ಡ್ ಅರ್ಧ ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಮಾತನಾಡಿದರು. ಬಳಿಕ ಪುರಸಭಾ ಅಧ್ಯಕ್ಷರು ಆ ಮನೆಯ ದುರಸ್ತಿಗೂ ಅನುದಾನ ಒದಗಿಸಿಕೊಡುವುದಾಗಿ ತಿಳಿಸಿದರು. ಬಳಿಕ ವಿಪಕ್ಷ ಸದಸ್ಯರು ಧರಣಿ ವಾಪಸ್ ಪಡೆದರು.
ಹಿಂಬರಹ ನೀಡಿ
ಸಾರ್ವಜನಿಕರ ಅರ್ಜಿಯನ್ನು ತಿರಸ್ಕರಿಸಿದಲ್ಲಿ ಅಥವಾ ಬಾಕಿಯಿಡುವುದಾದರೆ ಅರ್ಜಿದಾರರಿಗೆ ಹಿಂಬರಹ ನೀಡಬೇಕು. ಪೂರಕ ದಾಖಲೆ ನೀಡಲು ಅವಕಾಶ ಕಲ್ಪಿಸಬೇಕೆಂದು ಪ್ರದೀಪ್ ಸಲಹೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಯೋಗಿಶ್ ದೇವಾಡಿಗ ಮಾತನಾಡಿ, ಅಧಿಕಾರಿಗಳ ಎಡವಟ್ಟಿನಿಂದಾಗಿಯೇ ಅನೇಕ ಬಾರಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದರು.

ಬೀದಿ ನಾಯಿ ಕಾಟ
ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಅಸ್ಪಕ್ ಆಗ್ರಹಿಸಿದರು. ಪ್ರತಿಕ್ರಿಯಿಸಿದ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್, ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಶಿವಮೊಗ್ಗದ ಏಜೆನ್ಸಿಗೆ ವಹಿಸಕೊಡಲಾಗಿದೆ. ಆಗಸ್ಟ್ ತಿಂಗಳಾಂತ್ಯಕ್ಕೆ ಅವರು ಆಗಮಿಸಿ, ಕ್ರಮಕೈಗೊಳ್ಳಲಿದ್ದಾರೆ ಎಂದರು.
ಕಾರ್ಕಳ ಉತ್ಸವ ಬಿಲ್ ಪಾವತಿ ವಿಚಾರದಲ್ಲಿ ಸೋಮನಾಥ ನಾಯ್ಕ ಆಕ್ಷೇಪ ವ್ಯಕ್ತಪಡಿಸಿ, ಎಲ್ಲ ಬಿಲ್ ಗಳ ಕುರಿತು ತನಿಖೆಯಾಗಬೇಕೆಂದು ಸಭೆಯನ್ನು ಒತ್ತಾಯಿಸಿದರು. ಮುಖ್ಯಾಧಿಕಾರಿ ರೂಪ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ಪಲ್ಲವಿ ಪ್ರವೀಣ್, ಸ್ಥಾಯೀ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಪ್ರಬಂಧಕ ಸೂರ್ಯಕಾಂತ್ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
























