ಕಾರ್ಕಳ : ರಾಷ್ಟ್ರ ರಕ್ಷಣೆ, ಭದ್ರತೆಯ ವಿಷಯ ಬಂದಾಗ ಸೈದ್ಧಾಂತಿಕ ವಿಚಾರ, ಮತೀಯ ಸಮಾಚಾರವೇನಿದ್ದರೂ ದೂರವಾಗಿ ನಾವೆಲ್ಲರೂ ಭಾರತೀಯರಾಗಿರಬೇಕು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘ, ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್. ಸಹಯೋಗದೊಂದಿಗೆ ನಡೆದ 23ನೇ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ, ಕಾರ್ಗಿಲ್ ಕಥನದ ಕುರಿತು ಉಪನ್ಯಾಸ ನೀಡಿದರು.
ಯಾವುದೋ ಹಾಡಿನ ಗುಂಗಿನಲ್ಲೆ ನಾವು ಮೈಮರೆತಿದ್ದೇವೆ. ನಾವು ಸೈನಿಕರಾಗದಿದ್ದರೂ ನಮ್ಮಕಾರ್ಯಕ್ಷೇತ್ರದಲ್ಲಿ ಸೈನಿಕರಲ್ಲಿರುವ ಶಿಸ್ತು, ಬದ್ದತೆಯನ್ನು ಹೊಂದಿರಬೇಕು. ಅದೇ ಒಂದು ರೀತಿಯ ದೇಶ ಸೇವೆ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಕಾರ್ಗಿಲ್ ಯುದ್ಧವನ್ನು ಶಸ್ತ್ರಾಸ್ತ್ರಗಳಿಂದ ಗೆದ್ದಿರುವುದಲ್ಲ, ನಮ್ಮ ಕೆಚ್ಚೆದೆಯ ವೀರಯೋಧರ ಶೌರ್ಯ ಸಾಹಸಗಳಿಂದ ಗೆದ್ದಿರುವುದು ಎಂದರು.
ಗೌರವಾರ್ಪಣೆ
ಕಾರ್ಗಿಲ್ ವೀರ ಯೋಧ ರಂಗಪ್ಪ ಆಲೂರ ಅವರನ್ನು ಜ್ಞಾನಸುಧಾ ಪರಿವಾರದ ಪರವಾಗಿ ಅಜೆಕಾರ್ ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ ವತಿಯಿಂದ 50 ಸಾವಿರ ರೂ.ವಿನೊಂದಿಗೆ ಸನ್ಮಾನಿಸಲಾಯಿತು. ಅಜೆಕಾರ್ ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಉಡುಪಿ ಜ್ಞಾನಸುಧಾ ಸಂಸ್ಥೆಯ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಷಾ ರಾವ್ ಯು., ಉಪ ಪ್ರಾಂಶುಪಾಲರಾದ ಸಾಹಿತ್ಯ, ಸಂತೋಷ್, ವಾಣಿ ಕೆ., ಪಿ.ಆರ್.ಓ. ಜ್ಯೋತಿ ಪದ್ಮನಾಭ್ ಬಂಡಿ, ಜ್ಞಾನಸುಧಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಭವಿಷ್, ಎನ್.ಸಿ.ಸಿ. ಅಧಿಕಾರಿ ಸುಮಿತ್ ಇ. ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಸ್ವಾಗತಿಸಿ, ಉಪನ್ಯಾಸಕಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರವಿ ಜಿ. ವಂದಿಸಿದರು.


























