ಸುಳ್ಯ : ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ಬೆಳ್ಳಾರೆ ಅಕ್ಷಯ ಚಿಕನ್ ಸೆಂಟರ್ ಮಾಲಕ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳಿಬ್ಬರು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಪ್ರವೀಣ್ ಅವರು ತನ್ನ ಅಂಗಡಿಯಲ್ಲಿ ಕುಳಿತುಕೊಂಡಿದ್ದ ವೇಳೆ ಕೆಎಲ್ ನಂಬರಿನ ಬೈಕ್‌ನಲ್ಲಿ ಬಂದಿದ್ದ ಈರ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಪ್ರವೀಣ್ ತಪ್ಪಿಸಿಕೊಳ್ಳಲೆಂದು ಪಕ್ಕದ ಅಂಗಡಿಯತ್ತ ಓಡುವ ವೇಳೆ ಹಿಂದಿನಿಂದ ಬಂದು ಅವರ ತಲೆಗೆ ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡು ಪ್ರವೀಣ್ ರಕ್ತದ ಮಡುವಿನಲ್ಲಿ ಬಿದ್ದರು. ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಯಾಕಾಗಿ ನಡೆಯಿತು ಎಂಬುದು ನಿಗೂಢವಾಗಿದೆಯಾದರೂ ಕೆಲ ದಿನಗಳ ಹಿಂದೆ ಕಳಂಜ ವಿಷ್ಣುನಗರದಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಸುದ್ದಿ ಹರಡುತ್ತಿದೆ. ಘಟನೆಯಿಂದಾಗಿ ಬೆಳ್ಳಾರೆಯಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಈಗಾಗಲೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರವೀಣ್ ಅವರು ಯುವವಾಹಿನಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು.
ಬಿಜೆಪಿ ಯುವ ಮುಖಂಡನ ಬರ್ಬರ ಹತ್ಯೆ
























