Saturday, October 1, 2022
spot_img
Homeಅಂಕಣಕಾನೂನು ಕಣಜ - ಪಾಸ್‍ಪೋರ್ಟ್ ಅಧಿನಿಯಮ 1967

ಕಾನೂನು ಕಣಜ – ಪಾಸ್‍ಪೋರ್ಟ್ ಅಧಿನಿಯಮ 1967

ಭಾರತ ದೇಶದ ಪ್ರಜೆಗಳು ಭಾರತದಿಂದ ಹೊರದೇಶಕ್ಕೆ ಹೊರಡುವುದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಪಾಸ್‍ಪೋರ್ಟ್ ಅಧಿನಿಯಮ 1967 ಎಂಬ ಕಾನೂನನ್ನು ದಿನಾಂಕ 27-06-1967 ರಿಂದ ಜಾರಿಗೆ ತಂದಿರುತ್ತದೆ. ಈ ಅಧಿನಿಯವು ಭಾರತ ದೇಶದಲ್ಲಿ ವಾಸವಿರುವ ಮತ್ತು ಭಾರತ ದೇಶದಿಂದ ಹೊರಗಿರುವ ಅಂದರೆ ವಿದೇಶದಲ್ಲಿರುವ ಸಮಸ್ತ ಭಾರತೀಯ ನಾಗರಿಕರಿಗೆ ಅನ್ವಯವಾಗುತ್ತದೆ. ಈ ಕಾನೂನಿನ ಜಾರಿಯ ಉದ್ದೇಶಕ್ಕಾಗಿ ಸರಕಾರವು ಪಾಸ್‍ಪೋರ್ಟ್ ಪ್ರಾಧಿಕಾರಗಳನ್ನು ಪ್ರತಿಯೊಂದು ರಾಜ್ಯದಲ್ಲಿ ಸ್ಥಾಪಿಸಿದ್ದು ಇಂತಹ ಪಾಸ್‍ಪೋರ್ಟ್ ಪ್ರಾಧಿಕಾರಗಳ ನಿಯಂತ್ರಣಕ್ಕಾಗಿ ಈ ಅಧಿನಿಯಮಗಳ ಮೇರೆಗೆ ಅಧಿಕೃತಗೊಳಿಸಿದ ಅಧಿಕಾರಿಗಳು ಇರುತ್ತಾರೆ. ಯಾರೇ ಭಾರತೀಯ ಪ್ರಜೆಯು ಸಿಂಧುವಾದ ಪಾಸ್‍ಪೋರ್ಟನ್ನು ಅಥವಾ ಪ್ರಯಾಣದ ದಸ್ತಾವೇಜನ್ನು ಹೊಂದಿರದೆ ಭಾರತ ದೇಶದಿಂದ ಹೊರಗೆ ಹೋದಲ್ಲಿ ಅಥವಾ ಹೊರಡುವ ಪ್ರಯತ್ನವನ್ನು ಮಾಡಿದಲ್ಲಿ ಇದು ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಪಾಸ್‍ಪೋರ್ಟ್ ಮತ್ತು ಪ್ರಯಾಣದ ದಸ್ತಾವೇಜುಗಳಲ್ಲಿ
(1) ಸಾಮಾನ್ಯ ಪಾಸ್‍ಪೋರ್ಟ್, (2) ಅಧಿಕೃತ ಪಾಸ್‍ಪೋರ್ಟ್ ಮತ್ತು (3) ರಾಜತಾಂತ್ರಿಕ ಪಾಸ್‍ಪೋರ್ಟ್ ಎಂಬ ಮೂರು ವಿಧಗಳಿರುತ್ತದೆ.
ಈ ಅಧಿನಿಯಮದ ಪ್ರಕಾರ ಯಾವುದೇ ಭಾರತೀಯ ಪ್ರಜೆಯು ವಿದೇಶಕ್ಕೆ ಪ್ರಯಾಣಿಸಲು ಪಾಸ್‍ಪೋರ್ಟ್‍ಗಾಗಿ ಮತ್ತು ಪ್ರಯಾಣದ ದಸ್ತಾವೇಜಿನ ಮೇಲೆ ಅಗತ್ಯವುಳ್ಳ ಹಿಂಬರಹವನ್ನು ಪಡೆಯುವುದಕ್ಕಾಗಿ ತನ್ನ ವಾಸ್ತವ್ಯದ ಸರಹದ್ದಿಗೆ ಸಂಬಂಧಪಟ್ಟ ಪಾಸ್‍ಪೋರ್ಟ್ ಪ್ರಾಧಿಕಾರಕ್ಕೆ ಸರಕಾರವು ನಿರ್ದಿಷ್ಟ ಪಡಿಸಿದ ನಮೂನೆಯ ಅರ್ಜಿಯನ್ನು ಅಗತ್ಯವುಳ್ಳ ದಾಖಲೆಗಳೊಂದಿಗೆ ಮತ್ತು ನಿಗದಿತ ಶುಲ್ಕವನ್ನು ಪಾವತಿಸಿ ಪಾಸ್‍ಪೋರ್ಟ್ ನ್ನು ಅಥವಾ ಪ್ರಯಾಣದ ದಸ್ತಾವೇಜನ್ನು ಅಥವಾ ಸಂದರ್ಭಾನುಸಾರ ಪಾಸ್‍ಪೋರ್ಟ್‍ನ ಮೇಲೆ ಅಥವಾ ಪ್ರಯಾಣದ ದಸ್ತಾವೇಜಿನ ಮೇಲೆ ಹಿಂಬರಹವನ್ನು ಪಡೆಯಬಹುದಾಗಿದೆ. ಈ ಅಧಿನಿಯಮದ ಪ್ರಕಾರ ಪಾಸ್‍ಪೋರ್ಟ್ ಅರ್ಜಿದಾರನು ದೇಶದ ಸಾರ್ವಭೌಮತೆಗೆ ಮತ್ತು ಅಖಂಡತೆಗೆ ಪ್ರತಿಕೂಲಕರವಾದ ಚಟುವಟಿಕೆಗಳಲ್ಲಿ ನಿರತನಾಗಬಹುದು ಅಥವಾ ನಿರತನಾಗುವ ಸಂಭವ ಇದೆ ಎಂದು ಕಂಡುಬಂದಲ್ಲಿ, ಅಥವಾ ವಿದೇಶದಲ್ಲಿ ವಾಸವಿರುವುದರಿಂದ ಭಾರತ ದೇಶದ ಭದ್ರತೆಗೆ ಬಾಧಕವಾಗಬಹುದಾದ ಸಂಭವವಿದ್ದಲ್ಲಿ ಅಥವಾ ವಿದೇಶದಲ್ಲಿ ಇರುವುದರಿಂದ ಅಂತಹ ವಿದೇಶದ ಮತ್ತು ಭಾರತ ದೇಶದ ಒಳಗಿನ ಸ್ನೇಹ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಂಭವವಿದ್ದಲ್ಲಿ ಮತ್ತು ಕೇಂದ್ರ ಸರಕಾರದ ಅಭಿಪ್ರಾಯದಲ್ಲಿ ಪಾಸ್‍ಪೋರ್ಟ್ ಅರ್ಜಿದಾರನು ವಿದೇಶದಲ್ಲಿ ಇರುವುದು ಸಾರ್ವಜನಿಕ ಹಿತದೃಷ್ಟಿಗೆ ಮಾರಕವೆಂದು ಕಂಡುಬಂದಲ್ಲಿ ಪಾಸ್‍ಪೋರ್ಟ್ ಪ್ರಾಧಿಕಾರವು ಯಾವುದೇ ಪಾಸ್‍ಪೋರ್ಟ್ ಅರ್ಜಿದಾರನ ಅರ್ಜಿಯನ್ನು ವಜಾಗೊಳಿಸಬಹುದು ಮಾತ್ರವಲ್ಲದೇ ಪಾಸ್‍ಪೋರ್ಟ್ ಅರ್ಜಿದಾರನ ವಿರುದ್ಧ ಭಾರತದಲ್ಲಿನ ಕ್ರಿಮಿನಲ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವು ಬಾಕಿಯಿದ್ದಲ್ಲಿ ಅಥವಾ ಯಾವುದೇ ಕ್ರಿಮಿನಲ್ ನ್ಯಾಯಾಲಯದಿಂದ ಅಪರಾಧಿಯೆಂದು ನಿರ್ಣಯಿಸಿರುವ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಿಂದ ಅಥವಾ ಜೈಲುಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಉದ್ದೇಶ ಹೊಂದಿರುವ ಪಾಸ್‍ಪೋರ್ಟ್ ಅರ್ಜಿದಾರನ ಅರ್ಜಿಯನ್ನು ಸಹಾ ಪ್ರಾಧಿಕಾರವು ತಿರಸ್ಕರಿಸಬಹುದು.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

error: Content is protected !!