ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ, ತ್ವಚೆಯ ಸಮಸ್ಯೆ ಬರುವುದು ಸಾಮಾನ್ಯ. ಇದನ್ನು ತಡೆಯಲು ವಾರಕ್ಕೆ ಮೂರು ದಿನ ಕಷಾಯಗಳನ್ನು ಸೇವಿಸಬಹುದು.
ಆಯುರ್ವೇದಲ್ಲಿ ಅನೇಕ ಗಿಡಮೂಲಿಕೆಗಳನ್ನು ಬಳಸಿ ಮಾಡಿದ ಕಷಾಯ ದೊರೆಯುತ್ತದೆ. ಅದನ್ನು ರೋಗದ ಅವಸ್ಥೆಯನ್ನು ಪರಿಶೀಲಿಸಿ ಆಯುರ್ವೇದಾಚಾರ್ಯರು ನೀಡುತ್ತಾರೆ. ಇವತ್ತು ಚಿಕ್ಕಪುಟ್ಟ ಕಾಯಿಲೆಗಳನ್ನು ತಡೆಯಲು ಹಾಗೂ ಆರೋಗ್ಯವನ್ನು ವೃದ್ಧಿಸಲು ಮನೆಯಲ್ಲಿಯೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಕಷಾಯಗಳ ಬಗ್ಗೆ ತಿಳಿದುಕೊಳ್ಳೋಣ.
ಇನ್ನೊಂದು ವಿಷಯ ಕಷಾಯ ಒಳ್ಳೆಯದು ಎಂದು ವಿಪರಿಮೀತ ಸೇವಿಸಬೇಡಿರಿ. ವಾರಕ್ಕೆ ಮೂರು ದಿನ ಸೇವಿಸಿದರೆ ಸಾಕು. ಕಾಲು ಲೋಟಕ್ಕಿಂತ ಅಧಿಕ ಸೇವಿಸಬೇಡಿ. ಮಾಡಿದ ತಕ್ಷಣ ಬಿಸಿ ಇರುವಾಗಲೇ ಸೇವಿಸಿ.
ಮಳೆಗಾಲದಲ್ಲಿ ಕುಡಿಯಬಹುದಾದ ಕಷಾಯಗಳು
• ಕೊತ್ತುಂಬರಿ ಜೀರಿಗೆ ಕಷಾಯ – ಒಂದು ಗ್ಲಾಸ್ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜ, ಅರ್ಧ ಚಮಚ ಜೀರಿಗೆ, ಕಾಲು ಚಮಚ ಮೆಂತೆ, ಕಾಲು ಚಮಚ ಕರಿಮೆಣಸು ಹಾಕಿ ಕುದಿಸಿರಿ. ಇದರ ಹುಡಿಯ ಕೂಡ ಮಾಡಿ ಇಟ್ಟುಕೊಳ್ಳಬಹುದು. ಕುದಿ ಬರುವಾಗ ಸ್ವಲ್ಪ ಬೆಲ್ಲವನ್ನು ಸೇರಿಸಿ. ಕಾಲು ಗ್ಲಾಸ್ ಬರುವವರೆಗೆ ಇದನ್ನು ಕುದಿಸಿ ನಂತರ ಸೋಸಿ ಬಿಸಿಯಾಗಿ ಸೇವಿಸಿ. ಸೇವಿಸುವಾಗ ಸ್ವಲ್ಪ ಹಾಲನ್ನು ಕೂಡ ಬೆರೆಸಬಹುದು. ಈ ಕಷಾಯವು ನೆಗಡಿ, ಕೆಮ್ಮು ಗಂಟಲು ಕೆರೆತ ಕಡಿಮೆ ಮಾಡುತ್ತದೆ.

• ತುಳಸಿ ಕಷಾಯ – ಎರಡು ಗ್ಲಾಸ್ ನೀರಿಗೆ ಆರು ತುಳಸಿಯ ಎಲೆಗಳು, ಎರಡು ಲವಂಗ, ಆರು ಕರಿಮೆಣಸು ಹಾಗೂ ಬೆಲ್ಲ ಹಾಕಿ ಕುದಿಸಿ. ಅರ್ಧ ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಬಿಸಿಯಾಗಿ ಸೇವಿಸಿರಿ.
• ಅಮೃತಬಳ್ಳಿ ಕಷಾಯ – ಅಮೃತಬಳ್ಳಿಯ ಕಾಂಡದ ನಾಲ್ಕೈದು ತುಂಡು ಒಂದು ಗ್ಲಾಸ್ ನೀರಿಗೆ ಹಾಕಿ ಕುದಿಸಿ. ಕಾಲು ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ. ಇದಕ್ಕೆ ಬೆಲ್ಲ ಸೇರಿಸಬಹುದು. ಈ ಕಷಾಯವು ಜ್ವರವನ್ನು ಹೋಗಲಾಡಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ದೊಡ್ಡಪತ್ರೆ ಕಷಾಯ – ಒಂದು ಲೋಟ ನೀರಿಗೆ ನಾಲ್ಕೈದು ಎಲೆ ದೊಡ್ಡಪತ್ರೆ, ಕಾಲು ಚಮಚ ಅರಿಶಿಣ, ನಾಲ್ಕೈದು ತುಳಸಿ ಎಲೆ, ಚಿಕ್ಕ ಶುಂಠಿ ತುಂಡು ಹಾಕಿ ಕುದಿಸಿ ಕಾಲು ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಬಿಸಿಯಾಗಿ ಸೇವಿಸಿ. ಇದು ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ ಇದ್ದಾಗ ತುಂಬಾ ಒಳ್ಳೆಯದು.
• ವೀಳ್ಯದೆಲೆ ಕಷಾಯ – ಒಂದು ಲೋಟ ನೀರಿಗೆ ಒಂದು ವೀಳ್ಯದೆಲೆ, ನಾಲ್ಕು ತುಳಸಿ ಎಲೆ, ಎರಡು ಲವಂಗ, ಚಿಟಿಕೆ ಏಲಕ್ಕಿ ಪುಡಿ, ಆರು ಕರಿಮೆಣಸು ಹಾಕಿ ಸರಿಯಾಗಿ ಕುದಿಸಿ. ಕಾಲು ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಬಿಸಿಯಾಗಿ ಸೇವಿಸಿರಿ.
ಮೇಲೆ ಹೇಳಿರುವ ಕಷಾಯಗಳಲ್ಲಿ ಯಾವುದಾದರು ಒಂದು ಬಗೆಯ ಕಷಾಯ ಸೇವಿಸಿರಿ. ಎಲ್ಲಾ ಕಷಾಯವನ್ನು ಒಟ್ಟಿಗೆ ಸೇವಿಸಬೇಡಿ.

ಡಾ. ಹರ್ಷಾ ಕಾಮತ್

















































