Thursday, May 19, 2022
spot_img
Homeಅಂಕಣಕಾನೂನು ಕಣಜ - ಆಸ್ತಿ ಖರೀದಿ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

ಕಾನೂನು ಕಣಜ – ಆಸ್ತಿ ಖರೀದಿ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

ಪ್ರತಿಯೊಬ್ಬ ವ್ಯಕ್ತಿಗೆ ತಾನು ಸ್ವಂತ ಮನೆ, ಸೈಟ್ ಅಥವಾ ಜಮೀನನ್ನು ಹೊಂದಬೇಕೆನ್ನುವ ಆಕಾಂಕ್ಷೆ ಸ್ವಾಭಾವಿಕ. ಈ ಕಾರಣದಿಂದ ಅನೇಕ ಮಂದಿ ಮನೆ ಅಥವಾ ಜಮೀನನ್ನು ಖರೀದಿಸುವ ಆತುರದಿಂದ ಬ್ಯಾಂಕಿನಿಂದ ಅಥವಾ ಇತರ ಮೂಲಗಳಿಂದ ಸಾಲವನ್ನು ಸಹಾ ಪಡೆಯುತ್ತಾರೆ. ಆದರೆ ಈ ಸಂದರ್ಭದಲ್ಲಿ ಕೆಲವರು ಆತುರದಿಂದ ಅಥವಾ ನಿರ್ಲಕ್ಷತನದಿಂದ ತಾವು ಖರೀದಿಸುವ ಸೈಟ್, ಕಟ್ಟಡ ಅಥವಾ ಜಮೀನುಗಳಿಗೆ ಸಮ್ಮಂದ ಪಟ್ಟಂತೆ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ, ಕಾನೂನು ತಜ್ಞರ (ವಕೀಲರ) ಸೂಕ್ತ ಕಾನೂನು ಅಭಿಪ್ರಾಯವನ್ನು ಪಡೆಯದೇ ಮಾರಾಟಗಾರರ ಅಥವಾ ಅವರ ಪರ ಮಧ್ಯವರ್ತಿಗಳ ಮಾತಿನ ಮೇಲೆ ವಿಶ್ವಾಸ ಇರಿಸಿ, ನಂಬಿ ಸೂಕ್ತ ದಾಖಲೆ ರಹಿತವಾಗಿ ಹಣವನ್ನು ನೀಡಿ ಆ ನಂತರ ನಾನಾ ರೀತಿಯ ತೊಂದರೆ ಸಮಸ್ಯೆಗಳನ್ನು ಎದುರಿಸುವ ಪ್ರಸಂಗಗಳು ಇತ್ತೀಚೆಗೆ ಸರ್ವೆ ಸಾಮಾನ್ಯವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಖರೀದಿದಾರ ಯಾವುದೇ ಸ್ಯೆಟ್, ಮನೆ ನಿವೇಶನ, ಕಟ್ಟಡ ಅಥವಾ ಕೃಷಿ ಜಮೀನುಗಳನ್ನು ಖರೀದಿಸುವ ಮುಂಚಿತವಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅವಶ್ಯಕವಾಗಿರುತ್ತದೆ.
ಯಾವುದೇ ಸ್ಥಿರಾಸ್ತಿಯನ್ನು ಅಂದರೆ ಮನೆ ನಿವೇಶನ, ಕಟ್ಟಡ, ಜಮೀನು ವಗೈರೆಯನ್ನು ಖರೀದಿಸುವ ಪೂರ್ವದಲ್ಲಿ ಅದಕ್ಕೆ ಸಮ್ಮಂದಪಟ್ಟ ಸೂಕ್ತ ಹಕ್ಕುದಾರರನ್ನು ನಿರ್ಧರಿಸುವ ಬಗ್ಗೆ ಅಂತಹ ಸ್ಥಿರಾಸ್ತಿಗೆ ಸಮ್ಮಂದಪಟ್ಟ ಮೂಲ ದಾಖಲೆಗಳನ್ನು ಅಥವಾ ಅದರ ಅಧಿಕೃತ ಪ್ರತಿಗಳನ್ನು ಮಾರಾಟಗಾರರಿಂದ ಪಡೆದು ಖರೀದಿಸಲು ಇಚ್ಚಿಸುವ ಸ್ಥಿರಾಸ್ತಿಗೆ ಸಮ್ಮಂದಪಟ್ಟ ಅಧಿಕೃತ ಹಕ್ಕುದಾರರ ಮಾಲಿಕರ, ಮತ್ತಿತರ ಯಾವುದೇ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳ ವಿವರಗಳನ್ನು ಖಚಿತಪಡಿಸಿಕೊಳ್ಳಬೇಕು.
ಯಾವುದೇ ಸ್ಥಿರಾಸ್ತಿಯ ಮೇಲಿನ ಮಾಲಿಕತ್ವ ಅಥವಾ ಹಕ್ಕನ್ನು ನಿರ್ಧರಿಸುವ ಸಂದರ್ಭದಲ್ಲಿ ಕೇವಲ ಆರ್.ಟಿ.ಸಿ (ಪಹಣಿ ಪತ್ರ), ವಿಭಾಗ ಪತ್ರ ಅಥವಾ ಇತರ ಕಂದಾಯ ದಾಖಲೆಗಳನ್ನು ಅವಲಂಬಿಸಕೂಡದು. ಯಾಕೆಂದರೆ ಕಾನೂನಿನ ಪ್ರಕಾರ ಕಂದಾಯ ದಾಖಲೆಗಳಾಗಲೀ ಅಥವಾ ಒಂದು ಕುಟುಂಬದ ಒಳಗಿನ ವಿಭಾಗ ಪತ್ರ ಅಥವಾ ಒಡಂಬಡಿಕೆ ಪತ್ರ ಇವುಗಳು ಯಾವುದೇ ಸ್ಥಿರಾಸ್ತಿಗಳ ಮೇಲಿನ ಮಾಲಿಕತ್ವ ಅಥವಾ ಹಕ್ಕನ್ನು ನಿರ್ಧರಿಸುವ ಸಂಪೂರ್ಣ ದಾಖಲೆಗಳಾಗಿರುವುದಿಲ್ಲ.
ಸ್ಥಿರಾಸ್ತಿಯನ್ನು ಖರೀದಿಸುವ ಮುನ್ನ ಅದರ ಮೇಲೆ ಯಾವುದೇ ಸಾಲ, ಜವಾಬ್ದಾರಿ, ಅಡ್ಡಿ ಆತಂಕ ಇತ್ಯಾದಿಗಳನ್ನು ಪರಿಶೀಲಿಸುವ ಬಗ್ಗೆ ಸಮ್ಮಂದಪಟ್ಟ ಸಬ್ ರಿಜಿಸ್ಟ್ರಾರ್ ಕಛೇರಿ (ನೋಂದಣಾಧಿಕಾರಿ) ಯಿಂದ ಋಣಭಾರಪತ್ರ (ಇ.ಸಿ) ಪಡೆದು ಖಾತ್ರಿ ಮಾಡಿಕೊಳ್ಳಬಹುದಾಗಿದೆ. ಖರೀದಿಸಲು ಬಯಸುವ ಸ್ಥಿರಾಸ್ತಿ ವಾಸ್ತವ್ಯ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣದ ಉದ್ದೇಶಕ್ಕೆಂದಾದರೆ ಈ ಉದ್ದೇಶಕ್ಕೆ ಮಾರಾಟಗಾರರು ಸರಕಾರದಿಂದ, ಸಮ್ಮಂದಪಟ್ಟ ಪ್ರಾಧಿಕಾರದಿಂದ ಅಥವಾ ಸ್ಥಳೀಯ ಆಡಳಿತ ಸಂಸ್ಥೆಯಿಂದ ಪಡೆದಿರುವ ಅನುಮೋದನೆ ಪತ್ರ ಭೂಪರಿವರ್ತನಾ ಆದೇಶ (ಕನ್ವರ್ಶನ್) ಮತ್ತಿತರ ಅಗತ್ಯವುಳ್ಳ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ಸ್ಥಿರಾಸ್ತಿಯನ್ನು (ನಿವೇಶನ) ಖರೀದಿಸುವುದರಿಂದ ಖರೀದಿಯ ನಂತರ ಮುಂದಕ್ಕೆ ಕನ್ವರ್ಶನ್, ಕಟ್ಟಡ ನಿರ್ಮಾಣ ಇತ್ಯಾದಿಗಳ ಸಂದರ್ಭದಲ್ಲಿ ಉಂಟಾಗಬಹುದಾದ ಕಾನೂನಿನ ನಿಯಮಾನುಸಾರಗಳ ಪ್ರಕಾರದ ವಿವಿಧ ರೀತಿಯ ಅಡ್ಡಿ ಅಡಚಣೆಗಳನ್ನು ಎದುರಿಸುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇಲ್ಲವಾದಲ್ಲಿ ಸ್ಥಿರಾಸ್ತಿ ಖರೀದಿ ಮಾಡಿ ನಂತರ ಉಂಟಾಗಬಹುದಾದ ಯಾವುದೇ ರೀತಿಯ ಅಡ್ಡಿ ಅಡಚಣೆಗೆ ಖರೀದಿದಾರರೇ ಜವಾಬ್ದಾರರಾಗುತ್ತಾರೆ.
ಖರೀದಿಸ ಬಯಸುವ ಸ್ಥಿರಾಸ್ತಿಯು ಕಟ್ಟಡ ಇರುವ ಸ್ಥಿರಾಸ್ತಿಯಾದಲ್ಲಿ ಅಂತಹ ಕಟ್ಟಡ ಮಾರಾಟಗಾರರ ಸ್ವಂತ ಮತ್ತು ಸಂಪೂರ್ಣ ಹಕ್ಕಿನದ್ದೋ ಅಥವಾ ಅದರ ಮೇಲೆ ಇತರ ಬೇರೆ ಯಾರಿಗಾದರೂ ಯಾವುದೇ ರೀತಿಯ ಹಕ್ಕು ಅಥವಾ ಇನ್ನಿತರ ಹಿತಾಸಕ್ತಿ ಇದೆಯಾ ಎನ್ನುವ ಬಗ್ಗೆ ಸಮ್ಮಂಧಪಟ್ಟ ಸ್ಥಳಿೀಯ ಆಡಳಿತ ಸಂಸ್ಥೆ ಅಂದರೆ ಸ್ಥಳಿೀಯ ಗ್ರಾಮಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರಪಾಲಿಕೆ ಕಛೇರಿ ವಗೈರೆಗಳ ಪೈಕಿ ಸಮ್ಮಂಧಪಟ್ಟ ಕಛೇರಿಯಿಂದ ಅಂತಹ ಕಟ್ಟಡಕ್ಕೆ ಸಮ್ಮಂದಪಟ್ಟ ದಾಖಲೆಗಳನ್ನು ಪಡೆದು ಪರಿಶೀಲಿಸಿಕೊಳ್ಳಬೇಕು.
ಒಂದು ವೇಳೆ ಸ್ಥಿರಾಸ್ತಿಯ ಮಾಲಿಕರ ಪವರ್ ಆಫ್ ಎಟೊರ್ನಿದಾರರೊಂದಿಗೆ ಖರೀದಿ ಬಗ್ಗೆ ವ್ವವಹರಿಸುವ ಸಂಧರ್ಭದಲ್ಲಿ ಮಾಡಲಿಚ್ಚಿಸುವ ಖರೀದಿ ವ್ಯವಹಾರ ವಿಚಾರವನ್ನು ಸಾದ್ಯವಾದಷ್ಟು ಮಟ್ಟಿಗೆ ಗೌಪ್ಯವಾಗಿಡದೇ ಸಮ್ಮಂದಪಟ್ಟ ಮಾಲಿಕ ಅಧಿಕಾರ ಪತ್ರ ನೀಡಿದ ವ್ಯಕ್ತಿಗೆ ವೈಯುಕ್ತಿಕವಾಗಿ ಮತ್ತು ಸಾರ್ವಜನಿಕರ ಅವಗಾಹನಗಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸುವುದರಿಂದ ಖರೀದಿ ವ್ಯವಹಾರ ನಂತರ ಉಂಟಾಗಬಹುದಾದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿವಾರಿಸಿಕೊಳ್ಳಬಹುದು. ಅನೇಕ ಸಂದರ್ಭಗಳಲ್ಲಿ ಪವರ್ ಆಫ್ ಎಟೊರ್ನಿ ನೀಡಿರುವ ವ್ಯಕ್ತಿಯ ಮರಣದಿಂದಾಗಿ ಅಥವಾ ಬೇರೆ ಯಾವುದಾದರೂ ಕಾರಣದಿಂದ ರದ್ದಾಗಿರುವ ಪವರ್ ಆಫ್ ಎಟೊರ್ನಿಯ ಆದಾರದ ಮೇಲೆ ನಡೆಸುವ ಯಾವುದೇ ವ್ಯವಹಾರಗಳು ಕಾನೂನು ಸಮ್ಮತವಾಗಿರುವುದಿಲ್ಲ ಮತ್ತು ಅಂತಹ ವ್ಯವಹಾರದಿಂದ ಖರೀದಿದಾರನಿಗೆ ಸ್ಥಿರಾಸ್ತಿಯ ಮೇಲಿನ ಕಾನೂನುಬದ್ಧವಾದ ಹಕ್ಕು ಪ್ರಾಪ್ತಿ ಆಗುವುದಿಲ್ಲ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!