ಪ್ರೀತಿಯ ವಿದ್ಯಾರ್ಥಿಗಳೇ, ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಕಾರಣಕ್ಕಾಗಿ ದೊಡ್ಡ ಸುದ್ದಿಯಾಗಿದೆ. ಇಂದು ಇಡೀ ದೇಶ ಉಡುಪಿಯ ಕಡೆಗೆ ನೋಡುವಂತಾಗಿದ್ದು, ಇದು ಖಂಡಿತವಾಗಿಯೂ ಸಾಧನೆಯಲ್ಲ.
ಇದರಿಂದ ವಿದ್ಯಾರ್ಥಿಗಳು ಗಳಿಸಿದ್ದು ಎಷ್ಟು ? ಕಳೆದುಕೊಂಡದ್ದು ಎಷ್ಟು ? ಸ್ವಲ್ಪ ಯೋಚನೆ ಮಾಡಬೇಕಾಗಿದೆ. ಒಂದೇ ಕಾಲೇಜಿನಲ್ಲಿ ಕೂತು ಪಾಠ ಕೇಳುವ ವಿದ್ಯಾರ್ಥಿಗಳು, ಒಂದೇ ತಾಯಿಯ ಮಕ್ಕಳ ಹಾಗೆ ಇದ್ದವರು ಇಂದು ಹಿಜಾಬ್ ಮತ್ತು ಕೇಸರಿ ಶಾಲಿನ ಕಾರಣಕ್ಕೆ ಮುಖಕ್ಕೆ ಮುಖ ಕೊಟ್ಟು ಮಾತಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ. ನಿಮ್ಮ ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಮನೆಯಲ್ಲಿ ಇಟ್ಟು ಕಾಲೇಜಿಗೆ ಬರುವಾಗ ಸಮವಸ್ತ್ರ ಧರಿಸಿ ಬರುವ ಸಮಾನತೆ, ಖುಷಿ ಎಷ್ಟು ಚೆನ್ನಾಗಿತ್ತು ಅಲ್ಲವೇ ? ಒಬ್ಬರಿಗೆ ಒಬ್ಬರು ಸಪೋರ್ಟ್ ಮಾಡಿ ಕಲಿಯುವ ವ್ಯವಸ್ಥೆ ಚೆನ್ನಾಗಿತ್ತು ಅಲ್ಲವೇ ? ಮೊನ್ನೆ ಮೊನ್ನೆಯ ತನಕ ಅಣ್ಣ ತಮ್ಮಂದಿರ ಹಾಗೆ ಇದ್ದ ವಿದ್ಯಾರ್ಥಿಗಳು ಇಂದು ಹಿಜಾಬ್, ಕೇಸರಿ ಹಿಡಿದು ಬೀದಿಗಿಳಿದು ಸಾಧನೆ ಮಾಡಿದ್ದು ಏನು ? ಇನ್ನೇನು ಎರಡು ತಿಂಗಳ ಒಳಗೆ ಪರೀಕ್ಷೆ ಆರಂಭವಾಗಿ ಶೈಕ್ಷಣಿಕ ವರ್ಷವು ಮುಗಿದು ಹೋಗುತ್ತಿತ್ತು. ಕಾಲೇಜು ಮುಗಿಸಿ ಹೊರಟಾಗ ಭಾರವಾದ ಹೃದಯದಿಂದ ಕಾಲೇಜಿಗೆ ಒಂದು ಸೆಲ್ಯೂಟ್ ಹೊಡೆದು ಹೋಗುವ ಪ್ರೀತಿ ನಿಮಗೆ ಬೇಡವೇ ? ನಿಮ್ಮ ಕ್ಲಾಸಿನ ಗ್ರೂಪ್ ಫೋಟೋ ಹಿಡಿದು ಇವನು ನನ್ನ ಕ್ಲಾಸ್ ಮೇಟ್, ಇವಳು ನನ್ನ ಕ್ಲಾಸ್ ಮೇಟ್ ಎಂದು ಹೆಮ್ಮೆ ಪಡುವ ಸಂಗತಿಗಳು ನಿಮಗೆ ಬೇಡವೆ ? ಕಾಲೇಜಲ್ಲಿ ಮಾಡಿದ ತುಂಟಾಟ, ಕೀಟಲೆ, ಜಗಳ, ಹುಸಿ ಮುನಿಸು, ಹೀರೋಗಿರಿ ಇದೆಲ್ಲವೂ ನಿಮಗೆ ಜೀವನದ ಸ್ಮರಣೆ ಆಗಬೇಕು ಅಲ್ಲವೇ ?
ಅವಕಾಶವಾದಿ ಮನಸ್ಸು
ವಿದ್ಯಾರ್ಥಿಗಳ ತಲೆಗೆ ಒಂದಿಷ್ಟು ಚೇಳು ಬಿಟ್ಟು ಬೀದಿಯ ಹೋರಾಟಕ್ಕೆ ಅಣಿ ಮಾಡಿದ ಅವಕಾಶವಾದಿ ಮನಸ್ಸುಗಳು ಯಾರೂ ಕೂಡ ನಿಮ್ಮ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದವರು ಅಲ್ಲ. ಅವರಿಗೆ ಗಲಾಟೆ ಎಬ್ಬಿಸುವ ಕಾಲೇಜು ಮಕ್ಕಳು ಬೇಕು. ಅವರ ಬೇಳೆ ಬೇಯಬೇಕು ಅಷ್ಟೇ ! ರಾಜಕಾರಣಿಗಳು ಮುಂದಿನ ಚುನಾವಣೆಯ ಬಗ್ಗೆ ಯೋಚನೆ ಮಾಡಿಯೇ ಮಾಡುತ್ತಾರೆ. ಮಾಧ್ಯಮಗಳಲ್ಲಿ ಕೂತು ಅಬ್ಬರಿಸುವವರಿಗೂ ಅವರದ್ದೇ ಆದ ಅಜೆಂಡಾ ಇರುತ್ತವೆ. ಅವರ್ಯಾರೂ ನಿಮ್ಮ ಮೇಲಿನ ಪ್ರೀತಿಯಿಂದ ನಿಮ್ಮನ್ನು ಬೆಂಬಲಿಸುತ್ತಾ ಇಲ್ಲ ಎಂದು ನಿಮಗೆ ಅರ್ಥವಾಗಬೇಕು.

ಹಿಜಾಬ್ ಅಥವಾ ಕೇಸರಿ ಶಾಲುಗಳು ನಿಮ್ಮ ನಿಮ್ಮ ಧರ್ಮದ ಸಂಕೇತಗಳು ಆಗಬೇಕೇ ಹೊರತು ಅವುಗಳು ನಿಮ್ಮನ್ನು ದೂರ ಮಾಡುವ ಸಾಧನಗಳು ಆಗಬಾರದು. ಅವೆರಡೂ ನಿಮಗೆ ಉದ್ಯೋಗ ಒದಗಿಸಿ ಕೊಡುವುದಿಲ್ಲ. ಹೊಟ್ಟೆ ಪಾಡು ಆಗುವುದೂ ಬೇಡ. ಶಿಕ್ಷಣ ನಿಮ್ಮ ಅನ್ನದ ಬಟ್ಟಲು ಆಗಬೇಕು. ನಾನು ಗೆಲ್ಲಬೇಕು ಎಂದು ಹೋರಾಡಲು ಇದು ಸ್ವಾತಂತ್ರ್ಯದ ಹೋರಾಟವಲ್ಲ.
ಭರವಸೆ ಬಗ್ಗೆ ಯೋಚಿಸಿ
ವಿದ್ಯಾರ್ಥಿಗಳು ಯೋಚನೆ ಮಾಡಬೇಕಾದದ್ದು ನಿಮ್ಮ ಹೆತ್ತವರು ಇಟ್ಟ ಭರವಸೆಯ ಬಗ್ಗೆ. ಬೆವರು ಸುರಿಸಿ ದುಡಿದು ಮಗ ಅಥವಾ ಮಗಳು ಏನೋ ಆಗಬೇಕು ಎಂದು ಕನಸು ಕಾಣುತ್ತಿರುವ ಅವರ ಮನಸ್ಸಿಗೆ ನೀವು ಮಾಡಿದ ಆಘಾತ ಊಹೆ ಮಾಡಲು ಕಷ್ಟ ಆಗಬಹುದು. ಬೀದಿ ಕಾಳಗದಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಕೇಸ್ ಆಯ್ತು ಅಂದರೆ ನಿಮ್ಮ ಭವಿಷ್ಯದ ಗೋರಿಗೆ ನೀವೇ ಕೊನೆಯ ಮೊಳೆ ಹೊಡೆದಂತೆ. ಅಲ್ಲಿಗೆ ನಿಮ್ಮ ಉದ್ಯೋಗದ ಕನಸು, ಕಾರ್ಪೊರೇಟ್ ಕನಸು, ಸರಕಾರಿ ಕೆಲಸ ಕನಸು, ವಿದೇಶಕ್ಕೆ ಹಾರುವ ಕನಸು ಎಲ್ಲವೂ ಮೂಲೆ ಪಾಲಾಗುವುದು ಖಂಡಿತ. ಆಗ ನಿಮ್ಮ ಬೆಂಬಲಕ್ಕೆ ಈ ಧಾರ್ಮಿಕ ನಾಯಕರು, ರಾಜಕಾರಣಿಗಳು, ಭಾಷಣ ವೀರರು ಯಾರೂ ಬರುವುದಿಲ್ಲ. ಕಾಲೇಜು ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಅಂಟಿಸಿಕೊಂಡರು ಕೂಡ ನಿಮ್ಮ ಭವಿಷ್ಯದ ಎಲ್ಲ ಬಾಗಿಲುಗಳು ಮುಚ್ಚಿ ಹೋದಂತೆ.
ಪ್ರಕರಣ ಕೋರ್ಟಿಗೆ ಹೋದಲ್ಲಿ ತೀರ್ಪು ಬೇಗನೆ ಬರಲ್ಲ. ಬಂದರೂ ಅದು ಶಾಶ್ವತ ಪರಿಹಾರವೂ ಆಗುವುದಿಲ್ಲ. ಒಡೆದು ಹೋದ ಮನಸುಗಳು ಅಷ್ಟು ಬೇಗ ಒಂದಾಗುವುದಿಲ್ಲ. ‘ನಾನು ಗೆದ್ದೆ’ ಎಂಬ ಅಹಂ ಕೂಡ ತುಂಬಾ ದಿನ ಉಳಿಯುವುದಿಲ್ಲ. ತೀರ್ಪು ತಡವಾಗುತ್ತ ಹೋದಂತೆ ನಿಮಗೆ ತರಗತಿಗಳು ನಷ್ಟ.
CET, NEET, JEE MAIN, CPT ಮೊದಲಾದ ಪರೀಕ್ಷೆಗೆ ಗಂಭೀರವಾಗಿ ತಯಾರಾಗುತ್ತಿರುವ ನಿಮ್ಮ ಗೆಳೆಯ, ಗೆಳತಿಯರಿಗೆ ಆಗುವ ನಷ್ಟಕ್ಕೆ ನೀನೇ ಹೊಣೆ ಆಗುತ್ತೀರಾ. ಅವರ ಶಾಪ ನಿಮಗೆ ತಟ್ಟದೇ ಇದ್ದೀತೆ ? ನಿಮ್ಮದೇ ಕಾಲೇಜಿಗೆ ಧಿಕ್ಕಾರ ಕೂಗುವ, ಕಲ್ಲು ಬಿಸಾಡುವ, ಸಹಪಾಠಿಗಳನ್ನು ನುಗ್ಗಿ ಹೊಡೆಯುವ ಮನಸ್ಸು ನಿಮಗೆ ಹೇಗೆ ಬಂತೋ ?
ಕೋರ್ಟು ತೀರ್ಪು ಇನ್ನಷ್ಟು ನಿಧಾನ ಆಗಿ ರಜೆಗಳು ಮುಂದುವರೆದರೆ ನಿಮಗೆ ಖುಷಿಯಾ ? ಇಷ್ಟಕ್ಕೂ ಹಿಜಾಬ್, ಕೇಸರಿ ಹಿಡಿದು ಬೀದಿಗೆ ಬಿದ್ದ ನಿಮ್ಮ ಭವಿಷ್ಯಕ್ಕೆ ನಿವೇ ಕೊಳ್ಳಿ ಇಡುವ ಪ್ರಯತ್ನ ಯಾಕೆ ? ಬೇರೆಯವರನ್ನು ಸೋಲಿಸಿ ಪಡೆದ ಜಯವು ಎಂದಿಗೂ ಶಾಶ್ವತ ಖುಷಿ ಕೊಡುವುದಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಪಡೆದ ಗೆಲುವು ನಿಮಗೆ ಶಾಶ್ವತವಾದ ಸಂತೋಷ ಕೊಡಲಿದೆ. ಆದ್ದರಿಂದ ನಿಮ್ಮ ಹಠ ಬಿಟ್ಟು ಸಮವಸ್ತ್ರ ಧರಿಸಿ ಮತ್ತೆ ಕಾಲೇಜಿಗೆ ಬಂದು ನಿಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ.
ರಾಜೇಂದ್ರ ಭಟ್ ಕೆ.
ಶಿಕ್ಷಕರು, ಜೇಸಿಐ ರಾಷ್ಟ್ರೀಯ ತರಬೇತುದಾರರು

































































