ಕಾರ್ಕಳ : ಗುರುವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕಾರ್ಕಳಕ್ಕೆ ಭೇಟಿ ನೀಡಿದರು. ಸರಕಾರದ ನಿಯಮಾವಳಿಯಂತೆ ತೆರೆಯುವ ಅಂಗಡಿಗಳು ನಿಗದಿತ ಅವಧಿಗೆ ಮುಚ್ಚಬೇಕು. ಮದುವೆ ಕಾರ್ಯಕ್ರಮಗಳಲ್ಲಿ ಎಷ್ಟು ಮಂದಿ ಸೇರುತ್ತಾರೆ ಎಂಬುದನ್ನು ಗಮನಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು ಕೊರೋನ ಕಂಟ್ರೋಲ್‌ಗೆ ತರುವ ನಿಟ್ಟಿನಲ್ಲಿ ಬಿಗಿ ನಿಯಮ ಜಾರಿಗೊಳಿಸಬೇಕು. ಬೇಕರಿ, ಹೂವಿನ ಮಾರಾಟ ಮಳಿಗೆಗಳಿಗೂ ಅವಕಾಶ ಬೇಡವೆಂದರು. ಈ ಸಂದರ್ಭ ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕಾರ್ಕಳ ನಗರ ಠಾಣೆ ಎಸ್‌ಐ ಮಧು ಬಿ.ಇ., ಪುರಸಭಾ ಕಂದಾಯ ಅಧಿಕಾರಿ ಸಂತೋಷ್, ಆಹಾರ ನಿರೀಕ್ಷಕಿ ಲೈಲಾ ಥಾಮಸ್ ಉಪಸ್ಥಿತರಿದ್ದರು.

ಬೆಳಿಗ್ಗೆ ಜನಜಂಗುಳಿ
ಕಾರ್ಕಳ : ಕಾರ್ಕಳ ಪೇಟೆಯಲ್ಲಿ ಗುರುವಾರ ಬೆಳಿಗ್ಗೆ ಗ್ರಾಹಕರು ಖರೀದಿಯಲ್ಲಿ ಬ್ಯುಸಿಯಾಗಿರುವ ದೃಶ್ಯ ಕಂಡು ಬಂತು. ಬೆಳಿಗ್ಗೆ 10 ಗಂಟೆ ತನಕ ದಿನಸಿ ಅಂಗಡಿ, ಬ್ಯಾಂಕ್, ನ್ಯಾಯಬೆಲೆ ಅಂಗಡಿ, ಮೆಡಿಕಲ್ ಎದುರು ಜನತೆ ಸಾಲುಗಟ್ಟಿ ನಿಂತಿದ್ದರು. ಪುರಸಭಾ ವ್ಯಾಪ್ತಿಯಲ್ಲಿ ಬೇಕರಿ, ಹೂ ಮಾರಾಟದ ಅಂಗಡಿಗಳನ್ನು ಅಧಿಕಾರಿಗಳು ಮುಚ್ಚಿಸಿದರು.
ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದವರಿಗೆ ದಂಡ
ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ಟ್ರೇಡರ್ಸ್‌ಗೆ 5 ಸಾವಿರ ರೂ., ಕೇಕ್ ಮಳಿಗೆಗೆ 5 ಸಾವಿರ ರೂ., ಬೇಕರಿಗೆ 25 ಸಾವಿರ ರೂ., ಬೆಳ್ಮಣ್‌ನ ರಸ್ತೆ ಬದಿ ಕ್ಯಾಂಟೀನ್‌ಗೆ 2 ಸಾವಿರ ರೂ., ದಿನಸಿ ಅಂಗಡಿಗೆ 450 ರೂ., ಮುಂಡ್ಕೂರಿನ ಹಾರ್ಡ್ ವೇರ್ ಮಳಿಗೆಗೆ 1 ಸಾವಿರ ರೂ. ಕಾರ್ಕಳ ತಾಲೂಕು ಕಚೇರಿ ಅಧಿಕಾರಿಗಳು ದಂಡ ವಿಧಿಸಿದರು. ಗ್ರಾಹಕರನ್ನು ಕುಳ್ಳಿರಿಸಿ, ತಿಂಡಿ ನೀಡುತ್ತಿದ್ದ ಕಾರ್ಕಳ ಮಾರ್ಕೆಟ್ ಬಳಿಯಿರುವ ಹೊಟೇಲ್‌ಗೆ ಪುರಸಭಾ ಅಧಿಕಾರಿಗಳು 1 ಸಾವಿರ ದಂಡ ವಿಧಿಸಿದರು. ಮಾಸ್ಕ್ ಧರಿಸದೇ ಇದ್ದವರಿಗೂ ಪುರಸಭೆ ಅಧಿಕಾರಿಗಳು ದಂಡ ವಿಧಿಸಿದರು.































































