ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ ನೀರಿನ ಆರೋಗ್ಯ ಲಾಭಗಳು – ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದರು. ಮಣ್ಣಿನ ಮಡಿಕೆಯಲ್ಲಿ ನೀರನ್ನು ಶೇಖರಿಸುತ್ತಿದ್ದರು. ಈಗಲೂ ಕೂಡ ಕೆಲವರ ಮನೆಯಲ್ಲಿ ನೀರನ್ನು ಮಡಿಕೆಯಲ್ಲಿ ಸಂಗ್ರಹಿಸುವುದನ್ನು ನಾವು ಕಾಣಬಹುದು. ಆಹಾ! ಆ ನೀರಿನಲ್ಲಿ ಎಂಥಾ ಸ್ವಾದ ಎಷ್ಟು ತಂಪು ಕೂಡ. ಮಡಿಕೆಯ ನೀರು ಕುಡಿದ ಮೇಲೆ ತೃಪ್ತಿಯ ಅನುಭವವಾಗುವುದು. ಬೇಸಿಗೆಯಲ್ಲಿ ಇದರ ಉಪಯೋಗ ಬರೀ ದೇಹವನ್ನು ತಂಪು ಮಾಡುವುದಲ್ಲದೆ ಆರೋಗ್ಯಕ್ಕೂ ಹಿತಕರ. ಶೀತ ಕೆಮ್ಮಿನಿಂದ ಬಳಲುವವರೂ ಕೂಡ ಸೇವಿಸಬಹುದು ಯಾವುದೇ ಆರೋಗ್ಯ ಹಾನಿ ಉಂಟುಮಾಡುವುದಿಲ್ಲ. ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಅಧಿಕ ಸಮಯದ ತನಕ ಶುದ್ಧವಾಗಿರುತ್ತದೆ. ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಎಳನೀರು – ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ದೊರೆಯುವಂತಹ ನೈಸರ್ಗಿಕ ತಂಪು ಪಾನೀಯ ವೆಂದರೆ ಎಳನೀರು. ಇದರ ಆರೋಗ್ಯ ಲಾಭವೂ ಅಧಿಕ. ಈ ಎಳನೀರು ದೇಹವನ್ನು ತಂಪು ಮಾಡುವುದಲ್ಲದೆ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ. ಇದು ಶೀತ ಪ್ರಕೃತಿ ಹಾಗೂ ಮಧುರ ಗುಣಗಳಿಂದ ಕೂಡಿರುವುದರಿಂದ ಜೀರ್ಣಕಾರಿ ಹಾಗೂ ಬೇಸಿಗೆಗೆ ಉತ್ತಮ ಆರೋಗ್ಯಕರ ಪಾನೀಯವೆನಿಸಿದೆ. ಪಿತ್ತದೋಷವನ್ನು ಶಮನ ಗೊಳಿಸುತ್ತದೆ ಆದ್ದರಿಂದ ಬೇಸಿಗೆಯಲ್ಲಿ ಇದರ ಉಪಯೋಗ ಒಳ್ಳೆಯದು. ಬಿಕ್ಕಳಿಕೆ, ಅಸಿಡಿಟಿ, ಕಣ್ಣುರಿ, ಕೈಕಾಲು ಉರಿಯನ್ನು ಕಡಿಮೆಗೊಳಿಸುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರೆಕಿಸುತ್ತದೆ. ಹೃದಯಕ್ಕೆ ಹಾಗೂ ಯಕೃತ್ತಿಗೆ ಹಿತಕರ. ರಕ್ತದೊತ್ತಡ ನಿಯಂತ್ರಿಸುತ್ತದೆ, ಕೊಬ್ಬನ್ನು ಕರಗಿಸುತ್ತದೆ, ಎಲುಬನ್ನು ಸದೃಡಗೊಳಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. ನಮ್ಮ ತ್ವಚೆಗೆ ಕೂಡ ಒಳ್ಳೆಯದು. ತ್ವಚೆಯನ್ನು ಮೃದು ಹಾಗೂ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ದಿನಕ್ಕೆ ಎರಡು ಲೋಟ ಎಳನೀರು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.
ಮಜ್ಜಿಗೆ – ಮಜ್ಜಿಗೆಯನ್ನು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿ ಮಾಡುತ್ತಾರೆ. ಊಟವಾದ ನಂತರ ಮಜ್ಜಿಗೆ ಅನ್ನ ಅಥವಾ ಮಜ್ಜಿಗೆ ಕುಡಿದರೆ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಮಜ್ಜಿಗೆಯನ್ನು ಯಾರು ದಿನಾಲು ಸೇವಿಸುತ್ತಾರೋ ಅವರಿಗೆ ರೋಗ ಬರುವುದಿಲ್ಲವೆಂದು ಆಯುರ್ವೇದದಲ್ಲಿ ಹೇಳಿದೆ. ಮಜ್ಜಿಗೆಯೂ ನಮ್ಮ ಜೀರ್ಣಾಂಗವನ್ನು ಶುದ್ಧಗೊಳಿಸಿ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ ಹಾಗೂ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ನಮ್ಮ ತ್ವಚೆಯು ಸುಕ್ಕು ಗಟ್ಟುವುದು, ಬಿಳಿ ಕೂದಲು, ದೃಷ್ಟಿ ಮಂದವಾಗುವುದು ಮರೆವಿನ ಲಕ್ಷಣಗಳು ಕಾಣಿಸುತ್ತದೆ. ಅದೇ ಒಂದು ಲೋಟ ಮಜ್ಜಿಗೆಯನ್ನು ಸೇವಿಸುವುದರಿಂದ ವಯಸ್ಸಾಗುವ ಲಕ್ಷಣಗಳನ್ನು ದೂರಕ್ಕೆ ತಳ್ಳಬಹುದು. ಮಜ್ಜಿಗೆಯು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಮಜ್ಜಿಗೆಯ ಜೊತೆ ಜೀರಿಗೆ ಪುಡಿ ಬಳಸಿ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಮಜ್ಜಿಗೆಯು ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿವೈರಲ್, ಆಂಟಿ ಕ್ಯಾನ್ಸರ್ ಗುಣಗಳಿಂದ ಕೂಡಿದೆ. ಕೊಲೆಸ್ಟ್ರಾಲನ್ನು ಕಡಿಮೆಗೊಳಿಸುತ್ತದೆ. ಆ್ಯಸಿಡಿಟಿ, ಎದೆ ಉರಿಗಳನ್ನು ಶಮನ ಮಾಡುತ್ತದೆ. ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ. ಆದರೆ ನೆನಪಿಡಿ ರಾತ್ರಿ ಮಜ್ಜಿಗೆಯನ್ನು ಸೇವಿಸುವುದು ಹಿತಕರವಲ್ಲ. ಬೆಳಿಗ್ಗೆ ಅಥವಾ ಮಧ್ಯಾಹ್ನ ಮಜ್ಜಿಗೆ ಸೇವಿಸುವುದು ಉತ್ತಮ. ಪೋಷಕಾಂಶಬರಿತ ಮಜ್ಜಿಗೆಯನ್ನು ದಿನಾಲು ಬಳಸಿ ಆರೋಗ್ಯದಿಂದಿರಿ.