ಕಾರ್ಕಳ : ಅಶಕ್ತ ಗೋವಿಗೆ ಆಸರೆಯಾಗುವ ಮೂಲಕ ಗೋಪಾಲನೆಯೇ ತನ್ನ ಜೀವನದ ಉಸಿರಾಗಿಸಿಕೊಂಡವರು ಕಾರ್ಕಳದ ಮಾಧವರು. ಸರಕಾರಿ ಉದ್ಯೋಗದಿಂದ ನಿವೃತ್ತಿ ಪಡೆದ ಅನಂತರ ಗೋಶಾಲೆಯನ್ನು ತೆರೆದು ಗೋಪ್ರೀತಿ ಮೆರೆದವರು. ಈ ಮೂಲಕ ನೈಜ ಗೋಪಾಲಕನಾಗಿ ಗುರುತಿಸಿಕೊಂಡು ಅದರಲ್ಲೇ ಖುಷಿ ಕಾಣುವವರು ಬಂಗ್ಲೆಗುಡ್ಡೆ ಸದ್ಭಾವನ ನಗರದ ಕೊಡಗಿ ಮಾಧವರು.
ಗೋಶಾಲೆ
ಗೋಪಾಲನೆಗಾಗಿಯೇ ಹಿರ್ಗಾನ ಗ್ರಾಮದ ಚಿಕ್ಕಲ್ಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ 1 ಎಕ್ರೆ ಜಾಗವನ್ನು ಖರೀದಿಸಿ, ೨೦ ಸೆಂಟ್ಸ್ ಜಾಗದಲ್ಲಿ ಅಭಿನಂದನಾ ಗೋ ಸಂರಕ್ಷಣಾ ಕೇಂದ್ರ ಸ್ಥಾಪಿಸಿದ್ದಾರೆ. ಉಳಿದ 80 ಸೆಂಟ್ಸ್ ಜಾಗದಲ್ಲಿ ಗೋವಿಗಾಗಿ ಹುಲ್ಲು ಬೆಳೆದಿರುವ ಮಾಧವರು ಪಿಂಚಣಿ ಹಣವನ್ನು ಪೂರ್ತಿಯಾಗಿ ಗೋವಿನ ಪಾಲನೆಗಾಗಿ ವಿನಿಯೋಗಿಸಿದ್ದಾರೆ. ಇವರಲ್ಲಿರುವ ಗೋವುಗಳು ಹಾಲು ನೀಡುವಂತದಲ್ಲ. ಜಾನುವಾರುಗಳನ್ನು ಸಾಕಲು ಸಾಧ್ಯವಿಲ್ಲದವರು, ದನ ಕಳ್ಳರಿಂದ ಪೊಲೀಸರ ಪಾಲಾದ ಜಾನುವಾರುಗಳೇ ಇಲ್ಲಿರುವುದು.
ದಕ್ಷತೆ ಪ್ರಾಮಾಣಿಕತೆಗೆ ಹೆಸರಾದ ಅಧಿಕಾರಿ
ಕೆ. ಮಾಧವರು ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದವರು. ಕುಂದಾಪುರ, ಮಂಗಳೂರು, ಉಡುಪಿ, ಕಾರ್ಕಳ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿದ ಇವರು 2004ರಿಂದ 2008ರ ವರೆಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಅಜೆಕಾರು ನಾಡಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿ ಭಡ್ತಿಗೊಂಡ ಮಾಧವರು 2017ರಲ್ಲಿ ನಿವೃತಿ ಹೊಂದಿದರು. ತನ್ನ ಸೇವಾವಧಿಯಲ್ಲಿ ಪ್ರಾಮಾಣಿಕತೆ, ದಕ್ಷತೆ ಮೂಲಕವೇ ಎಲ್ಲರ ಅಚ್ಚುಮೆಚ್ಚಿಗೆ ಪಾತ್ರರಾಗಿದ್ದರು. ಯಕ್ಷಗಾನದಲ್ಲೂ ಹವ್ಯಾಸಿ ಪಾತ್ರಧಾರಿಯಾಗಿ ಕಲಾಭಿಮಾನಿಗಳ ಅಭಿಮಾನ ಗಳಿಸಿದ್ದರು.

ಮಾದರಿ ಮಾಧವರು
ಬಂಗ್ಲೆಗುಡ್ಡೆಯಲ್ಲಿ ಮನೆಯಿದ್ದರೂ ಇವರು ಇರುವುದು ಗೋಶಾಲೆಗೆ ಹೊಂದಿಕೊಂಡಂತಿರುವ ಕೊಠಡಿಯಲ್ಲೇ. ಅವುಗಳ ಆರೈಕೆಯಲ್ಲೇ ಬದುಕಿನ ಸಂತೋಷವನ್ನು ಕಾಣುವ ಮಾಧವರ ಗೋಪ್ರೀತಿ ಇತರರಿಗೆ ಮಾದರಿ. ಪತ್ನಿ ಯಶೋಧಾ ಅವರು ಕೂಡ ಗೋವಿನ ಕುರಿತು ವಿಶೇಷವಾದ ಒಲವು ಹೊಂದಿದ್ದಾರೆ. ಮಕ್ಕಳಾದ ಅನೂಪ್, ನಿರೂಪ್ ಅವರು ಗೋಸೇವೆಯನ್ನು ಮಾಡುತ್ತಿದ್ದು ಇಡೀ ಕುಟುಂಬವೇ ಗೋರಕ್ಷಣೆ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕ್ಯ ಕಾಣುತ್ತಿದೆ.































































