ಹೆಬ್ರಿ : ಹೆಬ್ರಿ, ಕಾರ್ಕಳ ಉಭಯ ತಾಲೂಕುಗಳಲ್ಲಿ ಕಾಂಗ್ರೆಸ್‌ನವರು ಪಕ್ಷೇತರರಾಗಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಅಥವಾ ಕಾಂಗ್ರಸ್ ನಾಯಕರ ಹೆಸರಲ್ಲಿ ಮತಕೇಳಲು ಮುಖವಿಲ್ಲದ ಕಾರಣ ಪಕ್ಷೇತರರಾಗಿ ಚುನಾವಣೆ ಕಣಕ್ಕೆ ಧುಮುಕಿದ್ದಾರೆ ಎಂದು ಬಿಜೆಪಿ ವಕ್ತಾರ ಮುಟ್ಲುಪಾಡಿ ಸತೀಶ ಶೆಟ್ಟಿ ಹೇಳಿದರು.
ಅವರು ಡಿ. 17ರಂದು ಹೆಬ್ರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ, ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದೆ. ಶಾಸಕ ವಿ. ಸುನಿಲ್ ಕುಮಾರ್ ಹೆಬ್ರಿ ತಾಲೂಕಿಗೆ ವಿಶೇಷ ಅನುದಾನ ತಂದು ಅಭಿವೃದ್ಧಿಪಡಿಸುತ್ತಿದ್ದಾರೆ. ಒಂದೇ ಸೂರಿನಡಿ ಸರಕಾರದ ಎಲ್ಲ ಸೇವೆಗಳು ದೊರೆಯಬೇಕೆನ್ನುವ ನಿಟ್ಟಿನಲ್ಲಿ ಮಿನಿವಿಧಾನ ಸೌಧ ನಿರ್ಮಿಸಲಾಗಿದೆ ಎಂದವರು ಹೇಳಿದರು.
ಅಭಿವೃದ್ದಿ ಕಾರ್ಯಗಳೇ ಶ್ರೀ ರಕ್ಷೆ
ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಶಾಸಕ ವಿ. ಸುನಿಲ್ ಕುಮಾರ್ ಅಭಿವೃದ್ಧಿ ಕಾರ್ಯಗಳೇ ಗ್ರಾ.ಪಂ. ಚುನಾವಣೆಯಲ್ಲಿ ನಮಗೆ ಶ್ರೀರಕ್ಷೆಯಾಗಲಿದೆ ಎಂದು ಸತೀಶ್ ಶೆಟ್ಟಿ ಮುಟ್ಲುಪಾಡಿ ಹೇಳಿದರು.
ಸತೀಶ್ ಸವಾಲು
ಪ್ರಧಾನಿ ಮೋದಿ ಸಮರ್ಥ ನಾಯಕ. ನಾವು ಮೋದಿ ಹೆಸರಲ್ಲಿ ಮತ ಕೇಳುತ್ತೇವೆ. ಕಾಂಗ್ರೆಸ್‌ನವರು ಸೋನಿಯಾ, ರಾಹುಲ್ ಹೆಸರಲ್ಲಿ ಮತ ಕೇಳಲಿ ಎಂದು ಸತೀಶ್ ಅವರು ಸವಾಲು ಹಾಕಿದರು. ಕಸ್ತೂರಿರಂಗನ್ ವರದಿ ಜಾರಿ ಕುರಿತು ಆತಂಕ ಪಡಬೇಕಾಗಿಲ್ಲ. ಶಾಸಕ ವಿ. ಸುನಿಲ್ ಕುಮಾರ್ ವಿಧಾನ ಸಭೆ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯಿಂದಾಗುವ ತೊಂದರೆ ಕುರಿತು ಸರಕಾರಕ್ಕೆ ಮನವಿ ಮಾಡಿಕೊಟ್ಟಿರುತ್ತಾರೆ ಎಂದು ಸತೀಶ್ ಹೇಳಿದರು.

ಹೆಬ್ರಿ ಬಿಜೆಪಿ ಮಡಿಲಿಗೆ : ಗುರುದಾಸ ಶೆಣೈ
ಬಿಜೆಪಿ ನಾಯಕರು, ಕಾರ್ಯಕರ್ತರು ಪಂಚಾಯತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ನಿಟ್ಟಿನಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ಹೀಗಾಗಿ ಹೆಬ್ರಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‌ಗಳು ಬಿಜೆಪಿ ಮಡಿಲಿಗೆ ಸೇರಲಿದೆ ಎಂದು ಹೆಬ್ರಿ ತಾಲ್ಲೂಕಿನ ಚುನಾವಣಾ ಉಸ್ತುವಾರಿಯಾಗಿರುವ ಎಚ್. ಗುರುದಾಸ ಶೆಣೈ ಭರವಸೆ ವ್ಯಕ್ತಪಡಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.






























































