ಅಗಸದೆತ್ತರಕ್ಕೆ ಮುಖಮಾಡಿ ನಿಂತಿರುವ ಈ ಕಲ್ಲು ಜನ್ಮ ತಾಳಿ ಅದೆಷ್ಟು ಶತಮಾನಗಳಾಯಿತೋ ಏನೋ? ಬೆಟ್ಟದ ಮೇಲೆ ಯಾರೋ ಒಂದು ದೊಡ್ಡ ಬಂಡೆ ಕಲ್ಲನ್ನು ಎತ್ತಿ ನಿಲ್ಲಿಸಿದಂತೆ ಭಾಸವಾಗುವ ಈ ಕಲ್ಲು ಊರ ಪರವೂರಿನ ಜನರಿಗೆ ವಿಸ್ಮಯ ತಾಣ, ಹಲವಾರು ರಹಸ್ಯಗಳನ್ನು ತನ್ನೊಳಗೆ ಅಡಗಿಸಿಟ್ಟಿರುವ ಈ ನಕ್ರೆ ಕಲ್ಲು ಸಾಹಸಿ ಚಾರಣಿಗರಿಗೆ ಆಕರ್ಷಣೆಯ ಕೇಂದ್ರ ಬಿಂದು.
ಬೆಟ್ಟದ ಮೇಲೆ ಬಿರು ಬಿರುಬಿಸಿಲಿದ್ದರೂ ಈ ಕಲ್ಲಿನ ಬುಡದಲ್ಲಿರುವ ವಿಶಾಲ ತಂಪು ಪ್ರದೇಶ ಬೆಟ್ಟ ಹತ್ತುವವರ ಮೈ ಮನಸ್ಸಿಗೆ ಮುದನೀಡುತ್ತದೆ. ಬಂಡೆಯ ತಳಭಾಗದಲ್ಲಿರುವ ಈ ತಂಪಾದ ಸ್ಥಳ ಬೆಟ್ಟ ಹತ್ತುವವರಿಗೆ ವಿಶ್ರಾಂತಿ ತಾಣವೂ ಹೌದು. ಅಲ್ಲೇ ಸ್ವಲ್ಪ ಎಡ ಬದಿಗೆ ಹೋದರೆ ಈಶ್ವರ ಲಿಂಗ ಹಾಗೂ ಪುರುಷಾಕೃತಿಯ ಹಾವಿನ ಹೆಡೆಯುಳ್ಳ ಕಲ್ಲಿನ ಕೆತ್ತನೆಯಿದ್ದು ಶತಮಾನಗಳಿಂದ ಆರಾಧಿಸಿಕೊಂಡು ಬಂದು ಈಗ ಪಾಳು ಬಿದ್ದಂತಿದೆ.
ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಎಂಬಂತೆ ಸುಮಾರು ಕಿಲೋಮೀಟರ್ ದೂರದಿಂದ ಗಮನಿಸಿದಾಗ ಇಲ್ಲೇ ಹತ್ತಿರದಲ್ಲೇ ಇದೆ ಎಂದೆನಿಸುವ ಈ ಬೆಟ್ಟ ಹತ್ತಲು ಪ್ರಾರಂಭಿಸಿ ತುತ್ತತುದಿಗೇರಿದಾಗಲೇ ತಿಳಿಯುವುದು ಈ ಕೌತುಕ ಬೆಟ್ಟವನ್ನು ಹತ್ತುವುದು ಅಷ್ಟು ಸುಲಭವಲ್ಲವೆಂದು. ಬೆಟ್ಟದ ತುದಿಗೇರಿದಾಗ ಕಾಣಸಿಗುವ ದೃಶ್ಯಗಳು ಅದ್ಭುತ ಹಾಗೂ ರಮಣೀಯ. ಬೆಟ್ಟವೇರಿದ ಆಯಾಸವೆಲ್ಲ ಸ್ವಲ್ಪ ಹೊತ್ತಲ್ಲೇ ಮಂಗಮಾಯ! ದೂರದೂರಿನ ಸ್ಥಳಗಳು ಇಲ್ಲಿ ಒಂದೇ ನೋಟದಲ್ಲಿ ಲಭ್ಯ. ಸಂಜೆಯ ಸೂರ್ಯಾಸ್ತದ ದೃಶ್ಯವಂತೂ ಕಣ್ಣಿಗೆ ಹಬ್ಬ! ಇಷ್ಟೆಲ್ಲಾ ವಿಶೇಷತೆಗಳಿದ್ದು ಈ ಬೆಟ್ಟದ ಬಗ್ಗೆ ಜನರಿಗೆ ಸಾಕಷ್ಟು ಕುತೂಹಲವಿದೆ. ಪ್ರವಾಸಿ ತಾಣವಾಗುವ ಎಲ್ಲಾ ಲಕ್ಷಣಗಳು ಈ ಬೆಟ್ಟಕ್ಕ್ಕಿದ್ದರೂ ಆ ಭಾಗ್ಯ ಇದುವರೆಗೆ ಒದಗಿ ಬಂದಿಲ್ಲ.
ಈ ಬೆಟ್ಟದ ಸುತ್ತಮುತ್ತಲಿದ್ದ ಹಲವಾರು ಜಾತಿಯ ಪ್ರಾಣಿಗಳು ಮಾನವ ಶಿಕಾರಿಯ ಹೊಡೆತಕ್ಕೆ ಸಿಕ್ಕಿ ನಾಮಾವಶೇಷವಾಗಿವೆ. ವಿವಿಧ ಜಾತಿಯ ಬೆಲೆಬಾಳುವ ಮರಗಳು ಮರಗಳ್ಳರ ಪಾಲಾಗಿವೆ. ಪ್ರತಿ ವರ್ಷ ಮರಗಳ್ಳರು ಇಕ್ಕುವ ಬೆಂಕಿಯಿಂದ ಇಲ್ಲಿನ ಜೀವ ವೈವಿಧ್ಯ ಹಳಿತಪ್ಪಿದ್ದು, ಜೀವ ಜಂತುಗಳೀಗ ವಿನಾಶದ ಹಂತದಲ್ಲಿವೆ. ಇಷ್ಟು ಸಾಲದೆಂಬಂತೆ ಇಲ್ಲಿ ಚಾರಣಕ್ಕೆ ಬಂದ ಕೆಲ ಅವಿವೇಕಿಗಳು ಬಳಸಿ ಬಿಸಾಡಿದ ಪ್ಲಾಸ್ಟಿಕ್ ವಸ್ತುಗಳು ಆ ಪರಿಸರವನ್ನು ಇನ್ನಷ್ಟು ಮಲಿನಗೊಳಿಸಿವೆ.
ಸರಕಾರ ಈ ಬಗ್ಗೆ ಗಮನಹರಿಸಿ ಇಲ್ಲಿನ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ನಕ್ರೆ ಕಲ್ಲನ್ನು ಪ್ರವಾಸಿ ತಾಣವಾಗಿಸುವಲ್ಲಿ ಸೂಕ್ತ ಕ್ರಮ ಕೈಗೊಂಡರೆ ನಮ್ಮ ನಕ್ರೆ ಕಲ್ಲು ಪ್ರವಾಸಿಗರ ಹಾಗೂ ಚಾರಣಿಗರ ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ.
ಬಾಲಕೃಷ್ಣ ಮೂಲ್ಯ, ಹೆಕಲ








































































