ಕೊರೊನ ಸಮಸ್ಯೆಯಿಂದ ಪ್ರಪಂಚವೇ ತಲ್ಲಣಗೊಂಡಿದೆ.ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗಿವೆ. ಕೊರೊನ ವೈರಸ್ ನಮ್ಮ ಶಿಕ್ಷಣದ ಮೇಲೂ ಗಮನಾರ್ಹ ಪರಿಣಾಮಗಳನ್ನು ಉಂಟುಮಾಡಿದೆ.ಬಹುತೇಕ ಶಾಲಾ- ಕಾಲೇಜುಗಳು ಆನ್ ಲೈನ್ ಶಿಕ್ಷಣ ಮತ್ತು ರೆಕಾರ್ಡಿಂಗ್ ತರಗತಿಗಳನ್ನು ನಡೆಸುತ್ತಿವೆ.ಈ ಕ್ರಮಗಳು ನಮ್ಮ ಶಿಕ್ಷಣದ ಕೊಂಡಿಯು ತಪ್ಪಬಾರದು ಎನ್ನುವ ಉದ್ದೇಶವನ್ನು ಒಳಗೊಂಡಿವೆ ಎನ್ನುವುದು ನಿಜ.ಆದರೆ ಈ ಕ್ರಮ ಗಳಾವುದೂ ತರಗತಿಯಲ್ಲಿ ಕುಳಿತು ಕಲಿತಂಥ ಅನುಭವವನ್ನು ತಂದುಕೊಡಲಾರದು.ಹಾಗಾಗಿ ನಮ್ಮ ಓದು ಬರಹದಲ್ಲಿ ಕೆಲವು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ.ಇಲ್ಲವಾದರೆ ನಮಗೆಲ್ಲ ಶಿಕ್ಷಣದ ಬಗ್ಗೆ ಆಸಕ್ತಿ ಇಲ್ಲದೇ ಹೋಗಬಹುದು ಅಥವಾ ಕಲಿಕೆಯ ಮನೋಸ್ಥಿತಿ ಬದಲಾಗುವ ಸಾಧ್ಯತೆಗಳಿರುತ್ತವೆ.
ಮಕ್ಕಳು ಆನ್ ಲೈನ್ ಶಿಕ್ಷಣ ಪಡೆಯುವಾಗ ಕೆಲವು ಗೊಂದಲಗಳು ಮೂಡುತ್ತವೆ. ದಿನಚರಿಯೂ ಬದಲಾಗುತ್ತದೆ.ಇಂಥ ಪರಿಸ್ಥಿತಿಯಲ್ಲಿ ನಾವು ಕರಲವೊಂದು ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯ. ನಮ್ಮ ಚಟುವಟಿಕೆಗಳನ್ನು ಕ್ರಮಬದ್ಧಗೊಳಿಸಬೇಕು.ಅಂದರೆ ಮುಂಜಾನೆ ಎದ್ದ ನಂತರ ತಿಂಡಿಯ ಸಮಯ, ತರಬೇತಿಯನ್ನು ಪಡೆದುಕೊಳ್ಳುವ ಸಮಯ, ಆಡುವ ಸಮಯ ವಿಶ್ರಾಂತಿ ಸಮಯ ಹಾಗೂ ಶೈಕ್ಷಣಿಕ ವಿಷಯಗಳನ್ನು ಪುನರಾವರ್ತಿಸುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಸೂಕ್ತ ಸಮಯವನ್ನು ನಿಯೋಜಿಸಬೇಕು.ಆಗ ನಾವು ವಿಷಯದಲ್ಲಿ ಆಸಕ್ತಿ ಹಾಗೂ ಉತ್ತಮ ಕಲಿಕೆ ಪ್ರವೃತ್ತಿಯನ್ನು ತೋರುವೆವು.
ನಮ್ಮ ವಿದ್ಯಾಭ್ಯಾಸ ಪೋಷಕರಿಗೆ ಅತ್ಯಂತ ಪ್ರಾಮುಖ್ಯವಾದ ಸಂಗತಿ.ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಬಯಸುತ್ತಾರೆ.ಅದಕ್ಕಾಗಿಯೆ ನಮಗೆ ವಿಶೇಷ ಶಿಕ್ಷಣ ನೀಡಲು ಮುಂದಾಗುತ್ತಾರೆ.ಆದರೆ ಸದ್ಯದ ಪರಿಸ್ಥಿತಿಯಲ್ಲಿ ಶಾಲಾ ತರಗತಿಯಲ್ಲಿ ಕುಳಿತು ಶಿಕ್ಷಣ ಪಡೆಯಲು ಸಾಧ್ಯವಿಲ್ಲ.ಆನ್ ಲೈನ್ ಅಥವಾ ರೆಕಾರ್ಡಿಂಗ್ ವಿಡಿಯೋಗಳಿಂದ ನಮಗೆ ಶಿಕ್ಷಣ ನೀಡಬೇಕಾದ ಪರಿಸ್ಥಿತಿ ಇದೆ.ಇದು ನಮಗೆ ಹಾಗೂ ಪಾಲಕರಿಗೆ ಒ೦ದು ಸವಾಲೂ ಹೌದು.ಅದರಲ್ಲೂ ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣವನ್ನು ಕೇಳುವುದೆಂದರೆ ಕಷ್ಟದ ಮಾತು.ಅದಕ್ಕಾಗಿ ಪೋಷಕರು ವಿಶೇಷ ಕಾಳಜಿಯನ್ನು ಕೈಗೊಳ್ಳಬೇಕಾಗುವುದು.
ಆನ್ ಲೈನ್ ಶಿಕ್ಷಣದಿಂದ ಮನೆಗೆ ದುಷ್ಪರಿಣಾಮವೇ ಹೆಚ್ಚು ಎಂದು ತಜ್ಞರು ತಿಳಿಸಿದ್ದಾರೆ.ಏಕೆಂದರೆ ಮೊಬೈಲ್, ಕಂಪ್ಯೂಟರ್ ,ಲ್ಯಾಪ್ ಟಾಪ್ ಇನ್ನಿತರ ಯಂತ್ರಗಳಲ್ಲಿ ನಾವು ಪಾಠವನ್ನು ಕೇಳುತ್ತಿದ್ದರೆ ಇದರಿಂದ ಮಾನಸಿಕ ಹಾಗೂ ದೈಹಿಕ ಪರಿಣಾಮ ಬೀರುತ್ತದೆ.ಅವರ ದೈಹಿಕ ಚಟುವಟಿಕೆ ಮೇಲೆ ಪರಿಣಾಮಗಳಾಗುತ್ತವೆ. ಕಣ್ಣು, ತಲೆ ,ಕುತ್ತಿಗೆ ನೋವು ಕಾಣಿಸುತ್ತದೆ. ಆನ್ ಲೈನ್ ಶಿಕ್ಷಣ ಎಷ್ಟೇ ಕಟ್ಟುನಿಟ್ಟು ಮಾಡಿದರು ಶಾಲೆಯಲ್ಲಿ ಕುಳಿತು ತರಗತಿ ನಡೆಸಿದ ಹಾಗೆ ಆಗುವುದಿಲ್ಲ .ವಿದ್ಯಾರ್ಥಿಗಳಿಗೆ ಶಿಕ್ಷಕರ ಭಯ ಇರುವುದಿಲ್ಲ.
ಒಟ್ಟಿನಲ್ಲಿ ಹೇಳುವುದಾದರೆ ಆನ್ ಲೈನ್ ಶಿಕ್ಷಣ ಸೂಕ್ತವಾದದ್ದಲ್ಲ. ಆದರೂ ನಮಗೆ ಬೇರೆ ಯಾವುದೇ ದಾರಿಯಿಲ್ಲ.ಈ ವರ್ಷದ ಶೈಕ್ಷಣಿಕ ವರ್ಷ ಮುಕ್ಕಾಲು ಭಾಗ ಮುಗಿದಿದೆ.ನಮಗೆ ಈ ವರ್ಷ ಶಾಲೆ ಆರಂಭಿಸುವುದು ಸರಿಯೇ ಅಥವಾ ತಪ್ಪೇ ಎಂದು ಎಲ್ಲರಿಗೂ ಸಮರ್ಥನೆ ಮಾಡುವುದು ಕಷ್ಟವಾಗಿದೆ.ನಮ್ಮ ಹಿತದೃಷ್ಟಿಯಲ್ಲಿ ನೋಡಬೇಕಾಗುವುದು ಒಳ್ಳೆಯದು ಹಾಗೂ ನಮ್ಮ ಶೈಕ್ಷಣಿಕ ವರ್ಷವೂ ವ್ಯರ್ಥವಾಗದಂತೆ ನೋಡಬೇಕು ಎಂಬುದು ನಮ್ಮೆಲ್ಲರ ಚಿಂತನೆಯೂ ಆಗಿದೆ.
ಸಂಜನಾ ದೇವಾಡಿಗ – ಒಂಬತ್ತನೆಯ ತರಗತಿ
ಆಂಗ್ಲ ಮಾಧ್ಯಮ ವಿಭಾಗ , ಭುವನೇಂದ್ರ ಪ್ರೌಢ ಶಾಲೆ, ಕಾರ್ಕಳ









































