ಯಕ್ಷಾಂಕಣ – ಒಂದು ಚೆಂಡೆಯ ಕತೆ

ಇದು ಒಂದು ” ಚೆಂಡೆ “ಯ ಕತೆ. ಆದರೆ ವಾಸ್ತವಿಕವಾಗಿ ಹೇಳುವುದಾದರೆ ಚೆಂಡೆವಾದಕರ ಕತೆ.ಇದೊಂದು ಸಣ್ಣ ಘಟನೆಯಾದರೂ ಭಾವನಾತ್ಮಕವಾದ ಸಂಬಂಧ ಹೊಂದಿದ ಕಲಾವಿದ ಹಾಗೂ ಕಲಾಪ್ರೇಮಿಯ ನಡುವೆ ನಡೆದ ಸತ್ಯ ಘಟನೆ.
ಯಕ್ಷಗಾನದ ಚೆಂಡೆವಾದಕರಲ್ಲಿ ಪ್ರಾತಃ ಸ್ಮರಣೀಯರಲ್ಲಿ ನೆನಪಿಸಬೇಕಾದ ಹೆಸರು “ನೆಡ್ಲೆ ನರಸಿಂಹ ಭಟ್ಟರು”. ಚೆಂಡೆ , ಮದ್ದಳೆಗಳ ಸೂಕ್ಷ್ಮ ಪಟ್ಟುಗಳನ್ನು ನೆಡ್ಲೆಯವರಷ್ಟು ಅರಿತವರು ತುಂಬ ವಿರಳ. ನಿರಾಯಾಸವಾಗಿ , ನಿರಾಳವಾಗಿ ಚೆಂಡೆ ಮದ್ದಳೆ ನುಡಿಸುವ ನೆಡ್ಲೆಯವರು ರಂಗದ ಸಂಪೂರ್ಣ ನಡೆ ಅರಿತಿದ್ದ ಮಹಾನ್ ಕಲಾವಿದರು. ನೋಡಲು ಸದಾ ಗಂಭೀರವಾಗಿರುತ್ತಿದ್ದ ಭಟ್ಟರು ವಿನೋದಪ್ರಿಯರೆಂದು ಯಾರಿಗೂ ಗೊತ್ತಿಲ್ಲದ ಸಂಗತಿ. ರಂಗದ ನಡೆಯ ಬಗ್ಗೆ ಅಪಾರ ಜ್ಞಾನವಿದ್ದ ನೆಡ್ಲೆಯವರು , ಕಲಾವಿದರು ಕ್ರಮ ತಪ್ಪಿದರೆ ಹಾಸ್ಯದ ಮೂಲಕವೇ‌ “ಚುರುಕು” ಮುಟ್ಟಿಸುತ್ತಿದ್ದರು. ಒಮ್ಮೆ ಕಟೀಲು ಮೇಳದವರ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ. ಅಂದು ಮೂಲತಃ ಪುಂಡುವೇಷಧಾರಿಯಾದ ಕೈರಂಗಳರು ಪ್ರಥಮವಾಗಿ ಕೋಲು ಕಿರೀಟದ ದೇವೇಂದ್ರನ ಪಾತ್ರ ಮಾಡಿದ್ದರು‌. ಅಂದು ದೇವೇಂದ್ರನ ಪಾತ್ರದಲ್ಲಿ ಸ್ವಲ್ಪ ಹೆಚ್ಚು ಧಿಗಿಣ ತೆಗೆದರಂತೆ. ಮರುದಿನ ಬೆಳಿಗ್ಗೆ ನೆಡ್ಲೆಯವರ ಪ್ರತಿಕ್ರಿಯೆ
“ಕೃಷ್ಣಾ , ನಿನ್ನೆಯ ದಿನ ನಿನ್ನ ಅಭಿಮನ್ಯು ಒಳ್ಳೇದಾಗಿತ್ತು”
ಕೈರಂಗಳರು , “ಗುರುಗಳೇ , ನಿನ್ನೆ ನಾನು ದೇವೇಂದ್ರ ಮಾಡಿದ್ದು” ಎಂದಾಗ ,
” ಓಹ್ , ಅದು ದೇವೇಂದ್ರವಾ ? ನಾನು ನಿನ್ನ ಧಿಗಿಣ ನೋಡಿ ಅಭಿಮನ್ಯು ಎಂದೇ ತಿಳಿದದ್ದು “
ಎಂದರಂತೆ.ದೇವೇಂದ್ರನ ಪಾತ್ರ ಅಭಿಮನ್ಯುವಿನಂತೆ ಧಿಗಿಣ ತೆಗೆಯಬಾರದು ಎಂಬುದನ್ನು ನೆಡ್ಲೆಯವರು ಕಲಾವಿದರಿಗೆ , ಬೇಸರವಾಗದಂತೆ ತಿದ್ದುವ ಕ್ರಮ ಹೀಗಿತ್ತು.
ದಿ.ಚೆನ್ನಪ್ಪ ಶೆಟ್ಟರು ಯಾವಾಗಲೂ ನೆಡ್ಲೆಯವರ ಕುರಿತು ನನ್ನಲ್ಲಿ ಹೇಳುತ್ತಿದ್ದರು. ಕಲಾವಿದ , ತನ್ನ ಪಾತ್ರ ಸರಿಯಾಗಿ ನಿರ್ವಹಿಸದಿದ್ದಾಗ ನೆಡ್ಲೆಯವರು ಆ ಕಲಾವಿದನಿಗೆ ಹೇಳುವ ಕ್ರಮ ಹೀಗೆ
“ನಿನ್ನೆ ನಿನ್ನ ವೇಷ ಒಳ್ಳೇದಾಗಿತ್ತು” ‌.
ಆಗ ಆ ಕಲಾವಿದನು ಬೀಗುವಷ್ಟರಲ್ಲಿ
” ಆದರೆ , ನಾಟ್ಯ ಸರಿಯಾಗಲಿಲ್ಲ , ಮಾತುಗಾರಿಕೆ ಇನ್ನಷ್ಟು ಒಳ್ಳೇದಾಗಬೇಕಿತ್ತು , ಅಭಿನಯ ಸಾಕಾಗಲಿಲ್ಲ , ರಂಗದ ನಡೆ ಸರಿಯಾಗಿ ಬರಲಿಲ್ಲ .”ಪಾತ್ರವೇ ಸರಿಯಾಗಲಿಲ್ಲ ಎಂದು ಹಾಸ್ಯಮಿಶ್ರಿತವಾಗಿ ಹೇಳುವ ಶೈಲಿ ಹೀಗಿತ್ತು.
ಈಗ “ಚೆಂಡೆ”ಯ ವಿಷಯಕ್ಕೆ ಬರುವಾ.

ಅದು ಸುಮಾರು 1975ರ ಕಾಲವಿರಬಹುದು. ನೆಡ್ಲೆ ನರಸಿಂಹ ಭಟ್ಟರಿಗೆ ತೀವ್ರ ಆರ್ಥಿಕ ಸಂಕಷ್ಟದ ಕಾಲ. ತುರ್ತಾಗಿ ಹಣ ಬೇಕಿತ್ತು . ಆ ಕಾಲ , ಈಗಿನಷ್ಟು , ಕಲಾವಿದರಿಗೆ ಅನುಕೂಲವಾಗಿರಲಿಲ್ಲ .ನೆಡ್ಲೆಯವರು ಬೇರೆಯವರಲ್ಲಿ ದೇಹಿ ಎಂದವರಲ್ಲ . ನೆಡ್ಲೆಯವರ ಬಳಿ ಒಂದು‌ ಚೆಂಡೆ ಇತ್ತು . ಅದನ್ನು ಮಾರಿಯಾದರೂ ಹಣ ಸಂಗ್ರಹಿಸಬೇಕಾದ ಅನಿವಾರ್ಯತೆ . ಆಗ ವಿಶ್ವವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಪರಮೇಶ್ವರ‌ ಭಟ್ಟರ ಬಳಿ ಬಂದ ಭಟ್ಟರು ತಮ್ಮ ಪರಿಸ್ಥಿತಿ ತಿಳಿಸಿದರು. ಪರಮೇಶ್ವರರು ತಮ್ಮ ಶಿಷ್ಯನಾದ ಆಗ ಎಂ.ಎ. ಕಲಿಯುತ್ತಿದ್ದ ಗುಂಡಿಲಗುತ್ತು ಶಂಕರ ಶೆಟ್ಟರನ್ನು ಕರೆದು “ಇವರ ಬಳಿ ಒಂದು ಚೆಂಡೆ ಇದೆ . ಅದನ್ನು ಪಡೆದು , ಅವರಿಗೆ ಹಣ ನೀಡು” ಎಂದರು . ಅಂತೆಯೇ ಶಂಕರ ಶೆಟ್ಟರು ಆ ಕಾಲದ ದೊಡ್ಡ ಮೊತ್ತವಾದ ರೂ.400 ಕೊಟ್ಟು ಚೆಂಡೆಯನ್ನು ಖರೀದಿಸಿದರು. ಯಕ್ಷಗಾನದ ಅಭಿಮಾನಿ ಹಾಗೂ ಸ್ವತಃ ಯಕ್ಷಗಾನ ಕಲಾವಿದ ಹಾಗೂ ಗುರುಗಳಾದ ಶಂಕರ ಶೆಟ್ಟರು ಆ ಚೆಂಡೆಯನ್ನು ಜಾಗ್ರತೆಯಿಂದ ಕಾಪಾಡಿಕೊಂಡು ಬಂದರು. ಒಮ್ಮೆ ಅ ಚೆಂಡೆಗೆ ಹಗ್ಗ ಬಿಗಿಯಲು ವಾಸು ಎಂಬವರಲ್ಲಿ ಕೊಟ್ಟಾಗ , ಅವರು
” ಶೆಟ್ಟರೇ , ಈ ಚೆಂಡೆ ಸಾವಿರದಲ್ಲಿ ಒಂದರಂತೆ ಇರುವ ವಿರಳ ಚೆಂಡೆ ” ಎಂದರು . ಅಂದಿನಿಂದ ಶೆಟ್ಟರು ಅಪೂರ್ವವಾದ ಆ ಚೆಂಡೆಯನ್ನು ಅತ್ಯಂತ ಜಾಗ್ರತೆಯಿಂದ ಕಾಪಾಡಿ ಬಂದರು .ಮುಂದೆ ಶೆಟ್ಟರು ಕೆನರಾ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದರು.
ಶೆಟ್ಟರು ತಮ್ಮ ಬಳಿ ಇದ್ದ ಶೃತಿಪೆಟ್ಟಿಗೆ , ಮದ್ದಳೆ , ಜಾಗಟೆ , ಚಕ್ರತಾಳ ಎಲ್ಲಾ ಕೆನರಾ ಕಾಲೇಜಿನ ಯಕ್ಷಗಾನ ಸಂಘಕ್ಕೆ ದಾನ ನೀಡಿದರೂ , ನೆಡ್ಲೆಯವರ ಚೆಂಡೆಯನ್ನು ತಮ್ಮ ಬಳಿಯೇ ಉಳಿಸಿಕೊಂಡರು. ಆ ಆ ಚೆಂಡೆಯನ್ನು ಕೇಳಿದರೂ ಕೊಡಲಿಲ್ಲ . ಆದರೂ ಚೆಂಡೆ ಉಪಯೋಗಿಸದಿದ್ದರೆ ಹಾಳಾಗುವ ಭೀತಿಯಿತ್ತು. ಶೆಟ್ಟರಿಗೆ ಚೆಂಡೆವಾದನ ತಿಳಿದಿರಲಿಲ್ಲ. ಆದರೂ ಆಗಾಗ ಶೆಟ್ಟರು ಮನೆಯಲ್ಲೇ ಚೆಂಡೆಯನ್ನು ಬಾರಿಸುತ್ತಿದ್ದರು. ಚೆಂಡೆ ಹಾಗೆಯೇ ಶೆಟ್ಟರ ಬಳಿಯೇ ಉಳಿಯಿತು. ಇದಾಗಿ ಸುಮಾರು ಇಪ್ಪತೈದು ವರ್ಷ ಕಳೆದಿರಬಹುದು. ನೆಡ್ಲೆಯವರ ಪುತ್ರ “ನರನ್ಸ್ ಬ್ರೆಡ್” ಸಂಸ್ಥೆ ಪ್ರಾರಂಭಿಸಿ ಉನ್ನತಿಗೆ ಬಂದರು . ಭಟ್ಟರ ಪುತ್ರ ಶ್ರೀರಾಮ ಭಟ್ಟರಿಗೆ ಈ ಎಲ್ಲಾ ವಿಷಯ ಕದ್ರಿ ನವನೀತ ಶೆಟ್ಟರಿಂದ ತಿಳಿಯಿತು . ಒಮ್ಮೆ ಶಂಕರ ಶೆಟ್ಟರ ಬಳಿ ನವನೀತ ಶೆಟ್ಟರೊಂದಿಗೆ ಬಂದ ರಾಮ ಭಟ್ಟರು ಮಾತಾಡುತ್ತಾ,”ನಮ್ಮ ತಂದೆಯವರು ನಿಮಗೆ ಮಾರಿದ ಚೆಂಡೆ ನಮಗೆ ಕೊಡಬಹುದೇ” ಎಂದು ಕೇಳಿದರು.

ಶೆಟ್ಟರೂ ಸಂತೋಷದಿಂದಲೇ ಆ ಚೆಂಡೆಯನ್ನು ನೆಡ್ಲೆಯವರ ಮಗನಿಗೇ ಉಚಿತವಾಗಿ ನೀಡಿ ಮಾನವೀಯತೆ ಮೆರೆದರು. ಆಗ ನೆಡ್ಲೆಯವರು ಯಕ್ಷರಂಗದಿಂದ ನಿವೃತ್ತರಾಗಿ ಮನೆಯಲ್ಲೇ ವಿಶ್ರಾಂತ ಜೀವನದಲ್ಲಿದ್ದರು. ಅಂತೂ ಅಪೂರ್ವವಾದ ಚೆಂಡೆಯೊಂದು ಎಷ್ಟೋ ವರ್ಷಗಳ ನಂತರ ಪುನಃ ಮೂಲ ಯಜಮಾನರಿಗೇ ದೊರಕುವಲ್ಲಿ ಕಲಾವಿದ ಹಾಗೂ ಕಲಾಪ್ರೇಮಿಯ ನಡುವಿನ ಭಾವನಾತ್ಮಕ ಸಂಬಂಧವೇ ಕಾರಣವಾದುದು ಉಲ್ಲೇಖನೀಯ.
ಎಂ. ಶಾಂತರಾಮ ಕುಡ್ವ,ಮೂಡಬಿದಿರೆ

ಎಂ. ಶಾಂತರಾಮ ಕುಡ್ವ,ಮೂಡಬಿದಿರೆ














































































































































error: Content is protected !!
Scroll to Top