ಕಾರ್ಕಳ : ಕಾರ್ಕಳ ಪೇಟೆಯ ಮೂರು ಮಾರ್ಗ ರಸ್ತೆ ಬದಿಯಲ್ಲಿರುವ ಹೈಮಾಸ್ಟ್ ದೀಪ ಕಳೆದ ಮೂರು ತಿಂಗಳಿನಿಂದ ಉರಿಯುತ್ತಿಲ್ಲ. 2017ರಲ್ಲಿ 1.13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಹೈಮಾಸ್ಟ್ ದೀಪ ಇದೀಗ ಉಪಯೋಗಕ್ಕಿಲ್ಲದಂತಾಗಿದೆ. ಕಾರ್ಕಳ ನಗರದಲ್ಲಿ ಒಳಚರಂಡಿ ಕಾಮಗಾರಿಯಾಗುತ್ತಿದ್ದ ಸಂದರ್ಭ ಹೈಮಾಸ್ಟ್ ದೀಪದ ತಂತಿ ಕಡಿತವಾಗಿದ್ದು, ಬಳಿಕ ಅದನ್ನು ಸರಿಪಡಿಸುವತ್ತ ಒಳಚರಂಡಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮುಂದಾಗಿಲ್ಲ. ಪುರಸಭೆಯೂ ದೀಪ ಸರಿಪಡಿಸುವ ಗೋಜಿಗೆ ಹೋಗಿಲ್ಲ.
15 ಕಡೆ ಅಳವಡಿಕೆ
ಕಾರ್ಕಳ ಹೃದಯಭಾಗವಾಗಿರುವ ಮೂರು ಮಾರ್ಗವಲ್ಲದೇ ಪೇಟೆಯ ವಿವಿಧೆಡೆ ಸುಮಾರು 15 ಕಡೆ ಹೈ ಮಾಸ್ಟ್ ದೀಪ ಅಳವಡಿಸಲಾಗಿತ್ತು. ಅವುಗಳಲ್ಲೂ ಕೆಲವೊಂದು ದೀಪಗಳು ಉರಿಯದೇ ಆ ಪರಿಸರವನ್ನು ಕತ್ತಲ್ಲಟ್ಟಿದೆ. ಉರಿಯದ ದೀಪ ಸರಿಪಡಿಸುವ ನಿಟ್ಟಿನಲ್ಲಿ ಪುರಸಭೆ ಸೂಕ್ತ ಕ್ರಮ ವಹಿಸಬೇಕಿದೆ.
ಪ್ರಚಾರಕ್ಕಷ್ಟೇ ಸೀಮಿತವೇ ?
ಹೈ ಮಾಸ್ಟ್ ದೀಪ ಕೆಟ್ಟು ಹೋದಲ್ಲಿ ಸರಿಪಡಿಸುವ ಕಾರ್ಯವಾಗುತ್ತಿಲ್ಲ. ಸೋಲಾರ್ ದೀಪದ ಕಥೆಯೂ ಇಂಥದ್ದೇ. ನಿರ್ವಹಣೆ ಸಮರ್ಪಕವಾಗಿ ಇಲ್ಲದೇ ಹೋದರೂ ಇಂತಹ ದೀಪಗಳನ್ನು ಅಳವಡಿಸಲಾಗುತ್ತಿದೆ. ನಾಲ್ಕು ದಿನ ಉರಿಯುವಂತಹ ಹೈಮಾಸ್ಟ್ ದೀಪವನ್ನು ಸಿಕ್ಕ ಸಿಕ್ಕಲ್ಲಿ ಅಳವಡಿಸಿ ಸಾರ್ವಜನಿಕ ಹಣ ಪೋಲು ಮಾಡುವುದಾದರೂ ಯಾಕೆ ? ಇಂತಹ ಯೋಜನೆಗಳು ಪ್ರಚಾರಕ್ಕಷ್ಟೇ ಸೀಮಿತವೇ ಎಂಬುದು ಸಾರ್ವಜನಿಕರ ಪ್ರಶ್ನೆ.

7 ತಿಂಗಳ ಹಿಂದೆ ಮೂರು ಮಾರ್ಗ ಹೈಮಾಸ್ಟ್ ದೀಪ ಕೆಟ್ಟು ಹೋಗಿದ್ದು ಆಬಳಿಕ ಸರಿಪಡಿಸಲಾಯಿತು. ಒಳಚರಂಡಿ ಕಾಮಗಾರಿ ನಡೆಸುವ ವೇಳೆ ಮತ್ತೆ ಹೈಮಾಸ್ಟ್ ದೀಪದ ಕೇಬಲ್ ಕಡಿತವಾಗಿದೆ. ಸದ್ಯದಲ್ಲೇ ಸರಿಪಡಿಸಲಾಗುವುದು.
ಶೋಭಾ ದೇವಾಡಿಗ
ಪುರಸಭಾ ಸದಸ್ಯೆ






































































