ಹೆಬ್ರಿ : ಕಸ್ತೂರಿರಂಗನ್ ವರದಿ ಜಾರಿಗೊಳಿಸಲು ಸರಕಾರ ಮುಂದಾಗಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಕಸ್ತೂರಿರಂಗನ್ ಜಾರಿ ವಿರೋಧಿಸಿ ಅಂದು ಹೋರಾಟ ಮಾಡಿದ್ದ ಬಿಜೆಪಿ ನಾಯಕರು ಇಂದು ತುಟಿಪಿಟಿಕ್ ಎನ್ನುತ್ತಿಲ್ಲ. ವರದಿ ಜಾರಿಗೆ ದಿನಗಣನೆಯಾಗುತ್ತಿದ್ದರೂ ಶಾಸಕ ಮತ್ತು ಸಂಸದರೂ ಮೌನವಾಗಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ನ. 23ರಂದು ಹೆಬ್ರಿ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ, ಶಾಸಕ ಸುನಿಲ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲೆಯಲ್ಲಿ ಕಸ್ತೂರಿರಂಗನ್ ವರದಿ ಜಾರಿಗೆ ಬಿಡುವುದಿಲ್ಲ ಎಂದು ಹೇಳಿದ್ದರು. ಹೆಬ್ರಿ ತಾಲೂಕು ಸಂಪೂರ್ಣವಾಗಿ ವರದಿಯ ವ್ಯಾಪ್ತಿಗೆ ಬಂದಿದ್ದರೂ ಈ ಕುರಿತು ಶಾಸಕ, ಸಂಸದರು ಮೌನ ಮುರಿಯುತ್ತಿಲ್ಲ ಎಂದು ಮಂಜುನಾಥ ಪೂಜಾರಿ ಹೇಳಿದರು.
ಕೇರಳ ಮಾದರಿ ಅನುಷ್ಠಾನಗೊಳ್ಳಲಿ
ಕೇರಳ ಸರಕಾರ ರಾಜ್ಯದಲ್ಲಿ ೧೦೦ ಗ್ರಾಮಗಳನ್ನು ವರದಿ ವ್ಯಾಪ್ತಿಗೆ ಸೇರಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ೧೫೦೦ ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡಲಿದೆ. ಕೇರಳ ಮಾದರಿಯನ್ನು ಕರ್ನಾಟಕ ಅನುಷ್ಠಾನ ಮಾಡಿದಲ್ಲಿ ರಾಜ್ಯಕ್ಕೆ ಹೆಚ್ಚಿನ ಸಮಸ್ಯೆ ಇಲ್ಲ. ಇಲ್ಲವಾದರೆ ಜನತೆಗೆ ಭಾರಿ ತೊಂದರೆಯಾಗಲಿದೆ ಎಂದು ಮಂಜುನಾಥ ಪೂಜಾರಿ ಅಭಿಪ್ರಾಯಪಟ್ಟರು. ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಭಾರಿ ಸಮಸ್ಯೆಯಾಗಲಿದೆ. ಭೂಸುಧಾರಣೆ ಕಾಯ್ದೆಯಲ್ಲಿ ದೊರೆತ ಭೂಮಿ, ಅಕ್ರಮ-ಸಕ್ರಮ, ೯೪ ಸಿ ಭೂಮಿ ಮತ್ತು ಪಟ್ಟಾ ಭೂಮಿಯ ಮಾರಾಟದ ಹಕ್ಕನ್ನು ಜನತೆ ಕಳೆದುಕೊಳ್ಳಲಿದ್ದಾರೆ. ಮನೆ ನಿರ್ಮಾಣ, ದುರಸ್ತಿ, ರಸ್ತೆ, ವಿದ್ಯುತ್, ನೀರು ಹೀಗೆ ಯಾವೂದೇ ಅಭಿವೃದ್ಧಿ ಕೆಲಸಗಳು ನಡೆಸಲು ಕಸ್ತೂರಿ ರಂಗನ್ ಕಾಯ್ದೆಯಿಂದ ಅಡ್ಡಿಯಾಗಲಿದೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಹೋರಾಟಕ್ಕೆ ಸಿದ್ಧತೆ
ಜನತೆಗೆ ಸಮಸ್ಯೆಯಾಗುವ ಯಾವೂದೇ ಯೋಜನೆಯನ್ನು ಸರಕಾರ ಜಾರಿ ಮಾಡಿದರೇ ಸಹಿಸಲು ಸಾಧ್ಯವಿಲ್ಲ. ಸರಕಾರದ ಸ್ಪಷ್ಟ ನಿಲುವು ತಿಳಿಸದಿದ್ದರೆ ಅತೀ ಶೀಘ್ರವಾಗಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮಂಜುನಾಥ ಪೂಜಾರಿ ತಿಳಿಸಿದರು.

ಜನ ವಿರೋಧಿ ನೀತಿ-ನೀರೆ ಕೃಷ್ಣ ಶೆಟ್ಟಿ
ಕೇಂದ್ರ ಹಾಗೂ ರಾಜ್ಯ ಸರಕಾರ ನಿರಂತರವಾಗಿ ಜನವಿರೋಧಿ ನೀತಿಯನ್ನೇ ಜಾರಿಗೆ ತರುತ್ತಿದೆ. ಜನರ ಕಷ್ಟ ಸರಕಾರಕ್ಕೆ ಗೊತ್ತಾಗುತ್ತಿಲ್ಲ. ಇದೀಗ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಜನಾರ್ದನ್, ಸಂತೋಷ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಎಚ್. ಶೀನ ಪೂಜಾರಿ, ಕೆ. ಚಂದ್ರಶೇಖರ ಬಾಯರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್, ಪ್ರಮುಖರಾದ ಮುನಿಯಾಲು ರವಿ ಪೂಜಾರಿ, ಶಶಿಕಲಾ ಆರ್.ಪಿ., ಮುದ್ರಾಡಿಯ ಶಶಿಕಲಾ ಡಿ. ಪೂಜಾರಿ, ಸೋಮೇಶ್ವರ ಶಿವರಾಮ ಪೂಜಾರಿ, ಹುತ್ತುರ್ಕೆ ದಿನೇಶ ಶೆಟ್ಟಿ, ಮುದ್ರಾಡಿ ಅಶ್ವಿನಿ ಗೌಡ, ಐಟಿಸೆಲ್ ಅಧ್ಯಕ್ಷ ಸಂತೋಷ ನಾಯಕ್ ಕನ್ಯಾನ, ಮುದ್ರಾಡಿ ಪ್ರದೀಪ ಆಚಾರ್ಯ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






































































