ಕಾರ್ಕಳ : ಸ್ವಾತಂತ್ರ್ಯ ಹೋರಾಟಗಾರ, ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡ ಅವರು ಅತ್ಯಂತ ಪರಿಣಾಮಕಾರಿಯಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದವರು. ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಿ ಕೊಡುವಲ್ಲಿ ಮೊದಲಿಗನಾಗಿ ಹೋರಾಟ ಮಾಡಿರುವ ಬಿರ್ಸಾ ಮುಂಡ ಅವರು ಯುವ ಪೀಳಿಗೆಗೆ ಪ್ರೇರಣೆ ಎಂದು ಗುಲ್ಬರ್ಗ ಸಂಸದ ಡಾ. ಉಮೇಶ್ ಜಾಧವ್ ಹೇಳಿದರು.
ಅವರು ನ. 22ರಂದು ಕಾರ್ಕಳ ಶಾಸಕರ ಕಚೇರಿ ವಿಕಾಸದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ನಡೆದ ಬಿರ್ಸಾ ಮುಂಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಮರಿಸುವ ಕಾರ್ಯವಾಗಬೇಕು-ವಿ. ಸುನಿಲ್ ಕುಮಾರ್
ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ಬ್ರಿಟಿಷ್ ಆಡಳಿತಾವಧಿಯಲ್ಲಿ ಅರಣ್ಯ ಉತ್ಪನ್ನಗಳನ್ನು ನಿರ್ಬಂಧಿಸಲು ಹೊರಟಾಗ ಇದರ ವಿರುದ್ಧ ಸಮಸ್ತ ಆದಿವಾಸಿಗಳನ್ನು ಒಗ್ಗೂಡಿಸಿಕೊಂಡು ಬಿರ್ಸಾ ಮುಂಡ ಹೋರಾಟಕ್ಕಿಳಿದ್ದರು. ಬಿರ್ಸಾ ಮುಂಡರಂತಹ ಸ್ವಾತಂತ್ಯ್ಯ ಹೋರಾಟಗಾರರನ್ನು ಸದಾ ಸ್ಮರಿಸುವ ಕಾರ್ಯವಾಗಬೇಕೆಂದು ಹೇಳಿದರು.
ಸನ್ಮಾನ
ಕೇರಳ ಬಿಜೆಪಿ ಸಹ ಉಸ್ತುವಾರಿಯಾಗಿರುವ ಶಾಸಕ ಸುನಿಲ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ ಸಾಲಿಯಾನ್, ನವೀನ್ ನಾಯಕ್, ಎಸ್ಟಿ ಮೋರ್ಚಾದ ಅಧ್ಯಕ್ಷ ಕೆ.ಪಿ. ನಾಯ್ಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ದಿವ್ಯ ಶ್ರೀ ಗಿರೀಶ್ ಅಮೀನ್, ರೇಶ್ಮಾ ಉದಯ ಶೆಟ್ಟಿ, ಎಸ್ಟಿ ಮೋರ್ಚಾದ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ಟಿ ಮೋರ್ಚಾ ಉಪಾಧ್ಯಕ್ಷ ಪ್ರಶಾಂತ್ ಹೆರ್ಮುಂಡೆ ಸ್ವಾಗತಿಸಿ, ಜಿಲ್ಲಾ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀಧರ ಗೌಡ ಪ್ರಸ್ತಾವನೆಗೈದರು. ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಪುತ್ರನ್ ವಂದಿಸಿದರು.







































































