ಕಾರ್ಕಳ, ನ. 1 : ಸಾಹಿತಿಗಳ, ಕವಿಗಳ, ಚಿಂತಕರ ಯೋಗದಾನದಿಂದಾಗಿ ಕನ್ನಡ ಭಾಷೆ ಇಂದು ಸಮೃದ್ಧವಾಗಿ ಬೆಳೆದಿದೆ. ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದರೂ ಸಾಹಿತ್ಯ ಮತ್ತು ನಾಡು ನುಡಿಗಾಗಿ ಮಿಡಿಯುವ ಮನಸುಗಳು ಸಾಕಷ್ಟಿವೆ. ಭಾಷೆ ಮತ್ತು ಸಂಸ್ಕೃತಿ ನಿಂತ ನೀರಾಗದೆ ನಿರಂತರ ಹರಿಯುವ ಹೊಳೆಯಾದರೆ ಮಾತ್ರ ಬೆಳೆಯುತ್ತದೆ.ನಮ್ಮ ಭಾಷೆ, ನಮ್ಮ ನಾಡು ಎಂಬ ಅಭಿಮಾನ ಪ್ರತಿಯೊಬ್ಬರಲ್ಲೂ ಇರಬೇಕು. ಮಾತೃಭಾಷೆಗಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳದ ಗಾಂಧಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು.
ತಹಶೀಲ್ದಾರ್ ಪುರಂದರ ಹೆಗ್ಡೆಯವರು ಧ್ವಜಾರೋಹಣ ಮಾಡಿದರು. ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯ ರಚನೆಯಾದಾಗ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ, ಬಲಿದಾನ ಮಾಡಿದ ಮಹನೀಯರನ್ನು ನಾವು ಈ ದಿನ ಸ್ಮರಿಸಬೇಕು.ಕರ್ನಾಟಕ ರಾಜ್ಯ ಬಹಳ ವೈವಿಧ್ಯತೆಯನ್ನು ಹೊಂದಿದೆ. ಏಳು ಭಾಷೆಗಳನ್ನಾಡುವ ಮಂದಿ ಇಲ್ಲಿ ಒಗ್ಗಟ್ಟಿನಿಂದ ಮತ್ತು ಭಾವೈಕ್ಯದಿಂದ ಬಾಳುತ್ತಿದ್ದಾರೆ. ನಾಡುನುಡಿಯ ರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು ಎಂದರು.
ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ನಗರ ಠಾಣೆ ಪೊಲೀಸ್ ನಿರೀಕ್ಷಕ ಮಧು, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಉಪಸ್ಥಿತರಿದ್ದರು.

