ಕಾರ್ಕಳ, ಅ. 2: ಮಹಾ ಮಾನವತಾವಾದಿ ಮಹಾತ್ಮ ಗಾಂಧೀಜಿ ಹಾಗೂ ದೇಶದ ಅಪ್ರತಿಮ ಜನತಂತ್ರವಾದಿ ನಾಯಕ ದಿ. ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ತತ್ವ ಸಿದ್ಧಾಂತಗಳು ಸರ್ವಕಾಲೀನ ಸತ್ಯವಾಗಿದ್ದು ಸುಭದ್ರ ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗೆ ಇವು ಅಡಿಗಲ್ಲಾಗಿವೆ ಎಂದು ಹಿರಿಯ ನ್ಯಾಯವಾದಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶೇಖರ ಮಡಿವಾಳ ಹೇಳಿದ್ದಾರೆ.
ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯ ಕೌನ್ಸಿಲ್ ಹಾಲ್ ನಲ್ಲಿ ಕಾರ್ಕಳ ಕಾಂಗ್ರೆಸ್ ಆಯೋಜಿಸಿದ್ದ ಗಾಂಧೀ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು.
ಕಾಂಗ್ರೆಸ್ ಪಕ್ಷ ತನ್ನ ಸುದೀರ್ಘ ಆಡಳಿತಾತ್ಮಕ ವ್ಯವಸ್ಥೆಯಡಿಯಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದರೂ ಗಾಂಧೀಜಿ ತತ್ವ ಸಿದ್ಧಾಂತದಡಿಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಎತ್ತಿ ಹಿಡಿಯುವಲ್ಲಿ ಸೋತಿಲ್ಲ ಎಂದು ಹೇಳಿದರು.

ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಈಗಾಗಲೇ ಬಿಜೆಪಿ ಆಡಳಿತದಿಂದ ನೆಲಕಚ್ಚಿರುವ ಜನತಂತ್ರ ವ್ಯವಸ್ಥೆಯನ್ನು ಎತ್ತಿ ಹಿಡಿದು ಗಾಂಧೀಜಿಯ ಋಣ ತೀರಿಸಬೇಕು ಎಂದು ಕರೆ ನೀಡಿದರು.
ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್,ಸದಸ್ಯ ಸಿರಿಯಣ್ಣ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ರವಿಶಂಕರ ಸೇರ್ವೆಗಾರ್, ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಕುಕ್ಕುಂದೂರು ಉದಯ ಶೆಟ್ಟಿ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾಶಿವ ದೇವಾಡಿಗ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಆರೀಫ್ ಕಲ್ಲೊಟ್ಟೆ, ಕುಕ್ಕುಂದೂರು ಗ್ರಾಮಾಧ್ಯಕ್ಷ ಥೋಮಸ್ ಮಸ್ಕರೇನಸ್, ನಗರ ಮಹಿಳಾಧ್ಯಕ್ಷೆ ಕಾಂತಿ ಶೆಟ್ಟಿ, ಎಸ್ಸಿ ಘಟಕಾಧ್ಯಕ್ಷ ಅಣ್ಣಪ್ಪ ನಕ್ರೆ, ನಗರ ಸಭಾ ಸದಸ್ಯ ಸೀತಾರಾಮ, ಮಾಜಿ ಸದಸ್ಯರಾದ ನವೀನ್ ದೇವಾಡಿಗ, ಸೀತಾರಾಮ, ರಾಜೇಶ್ ದೇವಾಡಿಗ, ಮಹಿಳಾ ಕಾರ್ಯದರ್ಶಿ ಶೋಭಾ ಹಾಗೂ ಇತರರು ಉಪಸ್ಥಿತರಿದ್ದರು.ಸೇವಾದಳದ ಅಧ್ಯಕ್ಷ ಯುವ ವಾಗ್ಮಿ ಸುಶಾಂತ್ ಪ್ರಸ್ತಾವನೆ ಗೈದು, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ವಂದಿಸಿದರು.


































































