ಮಾಸ್ಕ್‌ ಧರಿಸದಿದ್ದರೆ ಬೀಳಲಿದೆ 1,000 ರೂ. ದಂಡ!

ಬೆಂಗಳೂರು,ಅ.1: ಸಾಕಷ್ಟು ಬಾರಿ ಮನವಿ ಮಾಡಿದರೂ ಜನರು ಇನ್ನೂ ಕೊರೊನಾ ಬಗ್ಗೆ ಇನ್ನೂ ಅಸಡ್ಡೆ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕಠಿಣವಾಗಿ ವರ್ತಿಸಲು ನಿರ್ಧರಿಸಿದೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್‌ ಧರಿಸಬೇಕೆಂದು ನಿಯಮ ಮಾಡಿದ್ದರೂ ಅನೇಕ ಜನರು ಅದನ್ನು ಪಾಲಿಸುತ್ತಿಲ್ಲ. ಅಂಥವರಿಗೆ ದಂಡದ ಮೂಲಕವೇ ಬಿಸಿ ಮುಟ್ಟಿಸುವ ಪ್ರಸ್ತಾವವೊಂದು ಸರಕಾರದ ಮುಂದಿದೆ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ಪ್ರಮಾಣವನ್ನು ನಗರ ಪ್ರದೇಶದಲ್ಲಿ ರೂ. 1,000 ಹಾಗೂ ಗ್ರಾಮೀಣ ಪ್ರದೇಶದಲ್ಲಿ ರೂ. 500ಕ್ಕೆ ಹೆಚ್ಚಿಸುವ ಪ್ರಸ್ತಾವ ಇದು.  

ಹಿರಿಯ ಅಧಿಕಾರಿಗಳು ಸರಕಾರಕ್ಕೆ ದಂಡದ ಮೊತ್ತವನ್ನು ಹೆಚ್ಚಿಸಲು ಶಿಫಾರಸು ಮಾಡಿದ್ದು,  ಈ ಸಂಬಂಧ ಗುರುವಾರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಬಳಿಕ  ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು  ವೈದ್ಯಕೀಯ ಶಿಕ್ಷಣ ಸಚಿವರ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಪೂರ್ತಿಯಾಗಿ ಮಾಸ್ಕ್ ಧರಿಸದವರಿಗೂ ಸಹ ದಂಡ ಅನ್ವಯವಾಗಲಿದೆ. ಇತ್ತೀಚಿನ‌ ದಿನಗಳಲ್ಲಿ ಮಾಸ್ಕ್‌ ಧರಿಸದೆ ನಿರ್ಲಕ್ಷ್ಯ ತೋರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈಗಿರುವ 200 ರೂ. ದಂಡವನ್ನು ಹೆಚ್ಚಿಸಲಾಗಿದೆ. ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗುರಿ ನಿಗದಿ ಮಾಡಿ, ದಂಡ ವಸೂಲು ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ ಡೌನ್ ಬೇಡ ಎಂದಾದರೆ  ಪ್ರತಿಯೊಬ್ಬರೂ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಯನ್ನು ಅನುಸರಿಸಬೇಕು. ಎಲ್ಲಾ ಸರ್ಕಾರಿ ಕಚೇರಿಗಳ ಕೆಲಸಗಾರರೂ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದರೆ, ಕಚೇರಿಗೆ ಪ್ರವೇಶವಿರುವುದಿಲ್ಲ. ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಮಾವೇಶ, ಮದುವೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗರಿಷ್ಠ 50 ಜನರು ಸೇರಲು ಮಾತ್ರ ಅವಕಾಶವಿರಲಿದೆ. 

ಹೆಚ್ಚು ಜನ ಸೇರಿದರೆ ಆಯೋಜಕರು ಅಥವಾ ಆ ಸಂಸ್ಥೆ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರಿಗೆ ಬಸ್’ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಈ ನಿಯಮವನ್ನು ವ್ಯಾಪಕವಾಗಿ ಉಲ್ಲಂಘಿಸಿದ್ದು, ಇನ್ನು ಮುಂದೆ ಕಡ್ಡಾಯವಾಗಿ ಶೇ.50ರಷ್ಟು ಮಂದಿಯನ್ನು ಮಾತ್ರವೇ ಹತ್ತಿಸಿಕೊಳ್ಳಬೇಕು, ಜೊತೆಗೆ ಮಾಸ್ಕ್ ಇಲ್ಲದವರಿಗೆ ಬಸ್ ಒಳಗೆ ಪ್ರವೇಶ ನೀಡದಂತೆ     ನಿರ್ವಾಹಕರಿಗೆ ಸೂಚಿಸಲಾಗುವುದು ಎಂದು ಹೇಳಿದರು. 

ಮಾರುಕಟ್ಟೆ, ಮಾಲ್, ಪಾರ್ಕ್, ಇತರೆ ಸಾರ್ವಜನಿಕ ಸ್ಥಳದಲ್ಲಿ 5ಕ್ಕೂ ಹೆಚ್ಚು ಜನ ಗುಂಪುಗೂಡಿ ನಿಲ್ಲುವಂತಿಲ್ಲ. ಇವರ ನಡುವೆ ಸಹ ಕನಿಷ್ಠ 6 ಅಡಿ ಅಂತರವಿರಬೇಕು. ಇಲ್ಲವಾದರೆ, ಆ ಸಂಸ್ಥೆ ಮಾಲೀಕರ ಮೇಲೆ ದಂಡ ಪ್ರಯೋಗ ಮಾಡಲಾಗುವುದು. ಜೊತೆಗೆ ನಿರ್ಲಕ್ಷ್ಯ ಮುಂದುವರೆದರೆ ಪರವಾನಗಿಯನನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 









































































































error: Content is protected !!
Scroll to Top