ಅಂತರಾಷ್ಟ್ರೀಯ ಅಹಿಂಸಾ ದಿನ : ಆ ಇಬ್ಬರು ಮಹಾತ್ಮರನ್ನು ನೆನೆಯುತ್ತಾ…

ಮಹಾತ್ಮ ಗಾಂಧೀಜಿಯ ಜನ್ಮದಿನವಾದ ಅಕ್ಟೋಬರ್ 2ನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಈ ದಿನವನ್ನು ಗಾಂಧಿಜಯಂತಿ ಎಂದು ಆಚರಿಸಲಾಗುತ್ತದೆ. 2004ರ ಜನವರಿಯಲ್ಲಿ ಇರಾನಿನ  ನೋಬೆಲ್ ಪ್ರಶಸ್ತಿ ವಿಜೇತ ಶಿರಿನ್ ಎಬಾಡಿ ಪ್ಯಾರಿಸ್ನಾ ಎಂಬವರು ಈ ದಿನದ ಪ್ರಸ್ತಾಪವನ್ನು ಕೈಗೆತ್ತಿಕೊಂಡರು.  ಮುಂಬಯಿಯ  world social foramನ  ಹಿಂದಿ ಶಿಕ್ಷಕರಿಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ  ಪ್ಯಾರಿಸ್ ನಲ್ಲಿ  ಪಾಠ ಮಾಡುತ್ತಿದ್ದಾಗ ಈ ಕಲ್ಪನೆ ಬಂದಿತ್ತು. ಇದು ಕ್ರಮೇಣ ಭಾರತದ ರಾಜಕೀಯ ನಾಯಕರ ಗಮನಕ್ಕೆ ಬಂತು. 2007 ಜೂನ್ 15 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಅಕ್ಟೋಬರ್ 2 ಅನ್ನು ಅಂತರಾಷ್ಟ್ರೀಯ ಅಹಿಂಸಾ ದಿನವಾಗಿ ಸ್ಥಾಪಿಸಲು ಅಂಗೀಕಾರ ದೊರೆಯಿತು. ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಸೇರಿದಂತೆ ಅಹಿಂಸೆಯ ಸಂದೇಶವನ್ನು ಸೂಕ್ತ ರೀತಿಯಲ್ಲಿ ಪ್ರಸಾರ ಮಾಡಬೇಕು ಎಂಬುದು ಇದರ ಆಶಯ.

ಉಪವಾಸ, ಸತ್ಯಾಗ್ರಹ ಅಸಹಕಾರ ಚಳವಳಿಗಳ ಮೂಲಕ ಅಹಿಂಸಾತ್ಮಕವಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಅದಮ್ಯ ಚೇತನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಗಾಂಧೀಜಿಯ ಪ್ರಕಾರ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲ.ಹೀಗಾಗಿ ಅವರು ಕಾಲಕಾಲಕ್ಕೆ ಉಪವಾಸ ವ್ರತ ಮಾಡುತ್ತಿದ್ದರು. ತನ್ನ 36ನೇ ವಯಸ್ಸಿನಲ್ಲಿ ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ವಾರದಲ್ಲಿ 1 ದಿನ ಮೌನ ವ್ರತ ಮಾಡುತ್ತಿದ್ದರು. ಶ್ರೀಮಂತ ಉಡುಪುಗಳನ್ನು ತ್ಯಜಿಸಿದ್ದರು.

ಇನ್ನೊಬ್ಬ ಮಹಾತ್ಮರ ಹುಟ್ಟುಹಬ್ಬವು ಇದೇ ದಿನದಂದು. ಅವರೇ ಸ್ವತಂತ್ರ ಭಾರತದ 2 ನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ . ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ ದಕ್ಷ ಪ್ರಧಾನಿ. ಇವರ ಪ್ರಾಮಾಣಿಕತನಕ್ಕೆ ಹಲವರು ತಲೆದೂಗಿದ್ದುಂಟು. ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂತಹದ್ದು. ತಾಷ್ಕೆಂಟ್‌  ಒಪ್ಪಂದದ ಮರು ದಿನವೇ ಸಾವು. ಇವರ ಸಾವು ಗೂಢ ರಹಸ್ಯವಾಗಿಯೇ ಉಳಿಯಿತು. ಬರಗಾಲದ ಸಂದರ್ಭದಲ್ಲಿ ಹೊರ ದೇಶದಿಂದ ಆಹಾರ ಆಮದು ಮಾಡಿಕೊಂಡದ್ದರಿಂದ ಸಾಲದ ಹೊರೆ ಹೆಚ್ಚಾಯಿತು. ಪರಿಹಾರಕ್ಕಾಗಿ ಸೋಮವಾರ ರಾತ್ರಿ ಊಟ ತ್ಯಾಗ ಮಾಡಿದರು. ಮರಣಾನಂತರ ಭಾರತ ರತ್ನ ಪ್ರಶಸ್ತಿ ಪಡೆದರು. ಜೈ ಜವಾನ್ ಜೈ ಕಿಸಾನ ಇವರ ಸಾರ್ವಕಾಲಿಕ ಜನಪ್ರಿಯ ವಾಕ್ಯ.

ನಮ್ಮ ಧರ್ಮದ ಮೂಲ ಸಿದ್ಧಾಂತ ಅಹಿಂಸೆ. ಅಹಿಂಸೆ ಎಂಬ ಪದದ ಅರ್ಥ ಬಹಳ ವಿಸ್ತಾರವಾದದು. ಕೊಲ್ಲಬಾರದು,ಕೊಲ್ಲಲು ಕಾರಣವಾಗಬಾರದು,ಹತ್ಯೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಒಪ್ಪಬಾರದು. ನಮ್ಮ ದೈನಂದಿನ ಜೀವನದಲ್ಲಿ ಅಹಿಂಸಾ ತತ್ವವು ಜೀವನ ಕ್ರಮವಾಗಿ ರೂಢಿಯಲ್ಲಿರಬೇಕು. ಯಾವುದೇ ಜೀವಿಗೆ ಮನಸ್ಸಿಗೆ ನೋವನ್ನು ಉಂಟುಮಾಡುವುದು ಕೂಡ ಹಿಂಸೆಯಾಗಿದೆ‌. ಅಹಿಂಸೆ ಒಂದು ಅತ್ಯುತ್ತಮ ಧಾರ್ಮಿಕ ಕರ್ತವ್ಯ. ಇದು ಜೀವನದಲ್ಲಿ ನಿರಂತರ ಸ್ವಯಂ ಶಿಸ್ತನ್ನು ರೂಪಿಸುತ್ತದೆ. ವೈಜ್ಞಾನಿಕವಾಗಿ ವಿಶ್ಲೇಷಿಸಿದರೂ ಜೀವಿಯ ಮಾನಸಿಕ ಹಾಗೂ ಶಾರೀರಿಕ ಆರೋಗ್ಯಕ್ಕೆ ದಿವ್ಯ ಔಷಧಿ ಅಹಿಂಸಾ ತತ್ವ.

ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತನ ಮತ್ತು ದೇಶಭಕ್ತ ಶಾಸ್ತ್ರಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರ ತತ್ವ ಆದರ್ಶಗಳನ್ನು ಅಣು ಮಾತ್ರವಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.ಬರೇ ವೇದಿಕೆಗಳಲ್ಲಿ ಈ ಒಂದು ದಿನ ಮಾಡುವ ಭೀಷಣ ಭಾಷಣಗಳಿಂದ ಏನೂ ಪ್ರಯೋಜನವಿಲ್ಲ. ಜನತೆಯ ಪ್ರತಿನಿಧಿಗಳಲ್ಲಿ ಈ ಇಚ್ಛಾಶಕ್ತಿಯ ಕೊರತೆ ಇರುವುದರಿಂದಲೇ ನಮ್ಮ ದೇಶವೂ ಗೊಂದಲಗಳ ಗೂಡಾಗಿದೆ.

“ನುಡಿದಂತೆ ನಡೆದ ದೇಶಕ್ಕಾಗಿ ಜೀವ ಸವೆಸಿದ” ಈ ಮಹಾತ್ಮರ ಮೌಲ್ಯಗಳು ಸರಳ,ಧಾರ್ಮಿಕ ನಂಬಿಕೆಗಳಿಂದ ಬಂದವುಗಳು. “ಸತ್ಯ ಮತ್ತು ಅಹಿಂಸೆಯ ಅವರ ಹಾದಿಯಲ್ಲಿ ಸಾಗಿ ಪ್ರಾಮಾಣಿಕವಾಗಿ ನಮ್ಮ ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ.

ಮಾಲತಿ ವಸಂತ್ ರಾಜ್









































































































error: Content is protected !!
Scroll to Top