ಕೊರೊನಾ ಸೋಂಕಿನ ಬಗ್ಗೆ ಜನರು ಒಂದು ರೀತಿಯ ಅಸಡ್ಡೆ ತೋರಿಸುತ್ತಿರುವುದು ಗಮನಕ್ಕೆ ಬರುತ್ತಿದೆ. ಕೊರೊನಾ ಜೊತೆಗೆ ನಮಗೆ ಯಾವುದೇ ಸಂಬಂಧವಿಲ್ಲದಂತೆ ಹೆಚ್ಚಿನ ಜನರು ವತಿ೯ಸುತ್ತಿದ್ದಾರೆ. ಇದು ಸರಿಯಲ್ಲ. ಮುಖ್ಯವಾಗಿ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡುವುದು ನಿಧಾನವಾಗಿ ಕಡಿಮೆಯಾಗಿರುವುದನ್ನು ನಾವು ಗಮನಿಸುತ್ತಿದ್ದೇವೆ.ಸಕಾ೯ರದ ನೀತಿ ನಿಯಮಗಳನ್ನು ಮೀರಿ ಸಮಾರಂಭಗಳ ಆಯೋಜನೆ, ಕಾಯ೯ಕ್ರಮಗಳಲ್ಲಿ ಯಾವುದೇ ರೀತಿಯ ಕೊರೊನಾ ಮುಂಜಾಗ್ರತೆ ವಹಿಸದಿರುವುದು ಸಾಮಾನ್ಯವಾಗುತ್ತಿದೆ. ಇದು ಅಪಾಯಕ್ಕೆ ಎಡೆಮಾಡಿಕೊಡುವ ಸಂಭವವಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ.ಆದರೂ ನಮ್ಮವರಿಗೆ ಅರಿವು ಮೂಡಿಲ್ಲ. ಕೊರೊನಾದ ಲಕ್ಷಣ ಕಂಡು ಬಂದರೂ ಕೂಡ ಅದನ್ನು ಮುಚ್ಚಿಟ್ಟು ಸುರಕ್ಷತೆ ವಹಿಸದ ಪರಿಣಾಮ ಸೋoಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಅಲ್ಲದೆ ಐಸಿಯು, ವೆಂಟಿಲೇಟರ್ ನಲ್ಲಿ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಲಭ್ಯವಿಲ್ಲದಂತಾಗಿರುವುದು ಅಪಾಯದ ಸಂಕೇತ. ಹೀಗಾಗಿ ಜನರು ಸಕಾ೯ರದ ನೀತಿನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು.
ಸಚಿವರು, ಸಂಸದರು, ಸೇರಿದಂತೆ ಕೆಲವು ಪ್ರಭಾವಿ ವ್ಯಕ್ತಿಗಳೇ ಕೊರೊನಾ ವಿರುದ್ಧ ಸೆಣಸಲು ವಿಫಲರಾಗಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹೀಗಾಗಿ ಕೊರೊನಾ ನಮಗೆ ಬರುವುದಿಲ್ಲ ಎಂಬ ಹುಂಬ ಧೈರ್ಯ ಯಾರೂ ಇಟ್ಟುಕೊಳ್ಳಬೇಡಿ. ತುಸುವೇ ಅಜಾಗರೂಕತೆ ವಹಿಸಿದರೂ ಅಪಾಯ ಕಟ್ಟಿಟ್ಟಬುತ್ತಿ ಎಂಬುದನ್ನು ಮರೆಯಬೇಡಿ.
ಮಾಸ್ಕ್ ಧರಿಸಲೇ ಬೇಕೇ ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ನಮ್ಮ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಬೇಕು.ಇದರಲ್ಲಿ ವಿನಾಯಿತಿ ಇಲ್ಲ. ಮಾಸ್ಕ್ ಧರಿಸುವ ಜತೆಗೆ ನಿಯಮಿತ ಅವಧಿಯಲ್ಲಿ ಕೈಗಳನ್ನು ಸಾಬೂನು ಅಥವಾ ಇನ್ನಿತರ ಶುಚಿತ್ವ ಕಾಪಾಡಿಕೊಳ್ಳುವ ವಸ್ತುಗಳಿಂದ ತೊಳೆದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ. ಕೆಲವು ಜನರು ಪೊಲೀಸರು ಹಾಕುವ ದಂಡದಿಂದ ತಪ್ಪಿಸಲು ಮಾಸ್ಕ್ ಹಾಕುವುದನ್ನು ನಾವು ನೋಡುತ್ತೇವೆ. ನಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದ್ದರೆ ಎಲ್ಲರೂ ಮಾಸ್ಕ್ ಧರಿಸಬೇಕಾದ ಅಗತ್ಯವಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ವೈರಸ್‌ನ ಭಯ ಟಡತ್ಯವಿಲ್ಲ ಎಂಬ ಭಾವನೆ ಹೆಚ್ಚಿನವರಲ್ಲಿದೆ. ತಜ್ಞರ ಪ್ರಕಾರ, ಮಧುಮೇಹ, ಹೃದ್ರೋಗ, ಶ್ವಾಸಕೋಶ ಸಮಸ್ಯೆಗಳಿರುವವರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳ ಪರಿಣಾಮದಿಂದ ರೋಗ ನಿರೋಧಕ ಶಕ್ತಿ ಕೊಂಚ ಕಡಿಮೆ ಇರುವ ಸಾಧ್ಯತೆಗಳು ಹೆಚ್ಚು. ಅಂತೆಯೇ ಹಿರಿಯ ನಾಗರಿಕರಲ್ಲೂ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆ ಇರುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಈ ವರ್ಗದ ಜನರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಆರೋಗ್ಯದ ಸಮಸ್ಯೆ ಇರುವವರಿಗೆ ಸೋಂಕು ತಗಲುವ ಸಾಧ್ಯತೆ ದುಪ್ಪಟ್ಟಾಗಿರುತ್ತದೆ ಎಂದು ಅವಲೋಕಿಸಲಾಗಿದೆ. ಆದರೂ ಯುವ ಸಮುದಾಯವೂ ಈ ಮಹಾಮಾರಿ ವೈರಸ್‌ನಿಂದ ಪಾರಾಗಲು ಬೇಕಾದ ಅಗತ್ಯ ಕ್ರಮಗಳನ್ನು ಪಾಲಿಸುವುದೇ ಸೂಕ್ತವಾಗಿದೆ.
ಜಿಲ್ಲಾಡಳಿತದ ನಿಯಮ ಪಾಲನೆ ಮಾಡಿರಿ
ಈಗಾಗಲೇ ಜಿಲ್ಲಾಧಿಕಾರಿ, ವೈದ್ಯರು ಕೊರೊನಾದ ಬಗ್ಗೆ ಮುಂಜಾಗ್ರತೆ ವಹಿಸಲು ಕರೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ರೂಪಿಸಿದ ನೀತಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾಗಿದೆ. ನಮ್ಮ ಉದಾಸೀನ ಮತ್ತು ನಿಲ೯ಕ್ಷದಿಂದ ಉಳಿದವರು ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಕೊರೊನಾ ದೂರವಾಗುವ ತನಕ ನಿಯಮಗಳನ್ನು ಪಾಲನೆ ಮಾಡೋಣ.
ಅಪಪ್ರಚಾರ, ಅಪನಂಬಿಕೆ ಬೇಡ: ಕೆಲವು ಜನರು ಸುಳ್ಳು ಮತ್ತು ಆಧಾರ ರಹಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲ. ಕೊರೊನಾ ದೂರವಾಗಬೇಕಾದರೆ ಸಕಾ೯ರ ಮಾತ್ರ ಕೆಲಸ ಮಾಡಿದರೆ ಸಾಲದು. ಎಲ್ಲರೂ ತಮ್ಮ ಆರೋಗ್ಯದ ದೃಷ್ಟಿಯಿಂದ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಈಗಾಗಲೇ ವಿಶ್ವದ ಕೆಲವು ದೇಶದಲ್ಲಿ ಕರೋನಾದ ಎರಡನೇ ಹಂತ ಪ್ರಾರಂಭವಾಗಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಜೀವನ ಸಾಗಿಸೋಣ.ಕೊರೊನಾ ಮುಕ್ತ ಭಾರತವನ್ನಾಗಿಸಲು ಪ್ರಯತ್ನಿಸೋಣ.
ರಾಘವೇಂದ್ರ ಪ್ರಭು ಕವಾ೯ಲು




































































