ಆಗಸ್ಟ್ 5 ರಿಂದೀಚೆಗೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಎಸ್.ಪಿ ಇಂದು ಜೀವನ ಗಾನವನ್ನು ನಿಲ್ಲಿಸಿದರು.ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರಿಗೊಂದು ನುಡಿನಮನ…
70-80 ರ ದಶಕದಲ್ಲಿ ಬಾಲಿವುಡ್ ನಲ್ಲಿ ಕಿಶೋರ್ ಕುಮಾರ್, ಮನ್ನಾಡೇ, ಮೊಹಮ್ಮದ್ ರಫಿಯಂತಹ ಕೆಲವಾರು ಹಿನ್ನಲೆ ಗಾಯಕರು ಸದ್ದು ಮಾಡುತ್ತಿದ್ದರೆ ದಕ್ಷಿಣದಲ್ಲಿ ಏಕಮೇವಾದಿತ್ಯ ಹಿನ್ನಲೆ ಗಾಯಕರಾಗಿ ಸದ್ದು ಮಾಡುತ್ತಿದ್ದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ.
ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ. ಎಂ. ಸೌಂದರ್ ರಾಜನ್, ಕನ್ನಡದಲ್ಲಿ ಪಿ. ಬಿ. ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರು. ಆ ಸಮಯದಲ್ಲಿ ಎಂಟ್ರಿ ಕೊಟ್ಟ ಬಾಲು ಈ ಎಲ್ಲ ಭಾಷೆಗಳಿಗೂ ಸಾರ್ವಭೌಮರಾಗಿಬಿಟ್ಟರು.

ಬಹುಭಾಷಾ ಗಾಯಕ

ತೆಲುಗು,ಕನ್ನಡ,ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಎಸ್ಪಿಯವರದ್ದು ವಿಶ್ವದಾಖಲೆಯೇ ಸರಿ.
ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಇವರೊಬ್ಬರೇ. ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಮಾತುಗಾರರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ. ಅವರ ಒಟ್ಟಾರೆ ಪ್ರಮುಖ ಸಾಧನೆಗಳನ್ನು ಹೇಳುವುದಾದರೆ ಅದು ಅಪರಿಮಿತವಾದುದು.
ತಂದೆಯೇ ಮೊದಲ ಗುರು
1946 ಜೂನ್ 4 ರಂದು ಆಂಧ್ರಪ್ರದೇಶದ ನೆಲ್ಲೂರು ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಬಾಲು ಶಾಸ್ತ್ರೀಯವಾಗಿ ಸಂಗೀತ ಕಲಿಯಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು. ಮುಂದೆ ಮೇರು ಪ್ರಸಿದ್ಧಿ ಪಡೆದ ನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.
1966ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಬಾಲು ಹೇಳುತ್ತಾರೆ ‘ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ’.
ಶ್ರೀಪತಿ ಪಂಡಿತಾರದ್ಯುಲ ಬಾಲ ಸುಬ್ರಹ್ಮಣ್ಯಂಗೆ ಇಬ್ಬರು ಸಹೋದರರು ಮತ್ತು ಐದು ಮಂದಿ ಸಹೋದರಿಯರು. ಓರ್ವ ಸಹೋದರಿ ಎಸ್.ಪಿ.ಶೈಲಜಾ ಕೂಡಾ ಹಿನ್ನಲೆ ಗಾಯಕಿಯಾಗಿದ್ದಾರೆ.
ಎಂಜಿನಿಯರ್ ಆಗಬೇಕೆಂದು ಅನಂತಪುರದ ಜೆ.ಎನ್.ಟಿ.ಯು.ಕಾಲೇಜು ಸೇರಿದ್ದ ಎಸ್ಪಿಬಿ ಟೈಫಾಯ್ಡ್ ನಿಂದಾಗಿ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಬೇಕಾಗಿ ಬಂತು.ಶಿಕ್ಷಣದ ಜತೆಗೆ ಸಂಗೀತದತ್ತಲ್ಲೂ ಒಲವು ಹರಿಸಿದ್ದರು.
ಚಿತ್ರರಂಗಕ್ಕೆ ಪಾದಾರ್ಪಣೆ

1966 ಡಿ.15 ರಂದು ತೆಲುಗಿನ ” ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ” ಎಂಬ ಚಿತ್ರಕ್ಕೆ ಹಾಡುವ ಮೂಲಕ ಎಸ್ಪಿಬಿ ಹಿನ್ನಲೆ ಗಾಯಕ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅದಾದ ಎಂಟು ದಿನಗಳ ಬಳಿಕ ಕನ್ನಡದ ‘ ನಕ್ಕರೆ ಅದೇ ಸ್ವರ್ಗ ‘ ಚಿತ್ರಕ್ಕೆ ಹಾಡುವ ಮೂಲಕ ತೆಲುಗೇತರ ಭಾಷೆಗೆ ಸ್ವರ ನೀಡಿದರು.ತಮಿಳಿನಲ್ಲಿ ಹಾಡಿದ್ದ ಮೊದಲ ಹಾಡು ‘ಹೋಟೆಲ್ ರಾಮಣ್ಣ’ .ಆದರೆ ಅದು ತೆರೆ ಕಾಣಲೇ ಇಲ್ಲ.
ನಂತರ ಎಸ್ಪಿ ಹಿಂತಿರುಗಿ ನೋಡಲೇ ಇಲ್ಲ.ಬಹು ಬೇಡಿಕೆಯ ಗಾಯಕನಾಗಿ, ದಕ್ಷಿಣ ಭಾರತಕ್ಕೊಬ್ಬನೇ ಗಾಯಕನೋ ಏನೋ ಎಂಬಂಥ ರೀತಿಯಲ್ಲಿ ಬೇಡಿಕೆ ಪಡೆದು ವ್ಯಸ್ತರಾದರು.
ದಾಖಲೆ ಮೇಲೆ ದಾಖಲೆ
1981 ಫೆಬ್ರವರಿ 8 ರಂದು ಬೆಂಗಳೂರಿನಲ್ಲಿ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರಿಗಾಗಿ ಒಂದೇ ದಿನ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಕನ್ನಡದಲ್ಲಿ 21,ತಮಿಳಿನಲ್ಲಿ 19, ಹಿಂದಿಯಲ್ಲಿ 16 ಹಾಡುಗಳನ್ನು ರೆಕಾರ್ಡ್ ಮಾಡಿರುವುದೊಂದು ವಿಶೇಷ ದಾಖಲೆಯಾಗಿದೆ.ಅಲ್ಲದೆ ಆ ಸಮಯ ಆನಂದ್- ಮಿಲಿಂದ್ ರಿಗಾಗಿ 15-20 ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳುತ್ತಿದ್ದರು.
ಇದು ಎಸ್ ಪಿ ಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗಿರುವ ನಿದರ್ಶನ. ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ.
ಇದನ್ನೇ ಡಾ. ರಾಜ್ ಕುಮಾರ್ ಅವರು ಒಮ್ಮೆ ಪಿ ಬಿ ಎಸ್ ಬಗ್ಗೆ ಹೇಳುತ್ತಾ ‘ಪಿ ಬಿ ಎಸ್ ನನ್ನ ಆತ್ಮ, ನಾನು ಶರೀರ’ ಎನ್ನುತ್ತಿದ್ದರು. ರಾಜ್ ಕಪೂರ್ ಮುಖೇಶ್ ಬಗ್ಗೆ ಇದನ್ನೇ ಹೇಳುತ್ತಿದ್ದರು.
ಹೀರೊಗಳ ಅಂತರ್ಧ್ವನಿ
ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿ ಬಾಲು ಅವರದ್ದು.
ಪಿ.ಸುಶೀಲಾ, ಎಸ್.ಜಾನಕಿ,ವಾಣಿ ಜಯರಾಂ ಮತ್ತು ಎಲ್.ಆರ್.ಈಶ್ವರಿ ಜತೆ ಎಸ್ಪಿ ಬಾಲಸುಬ್ರಹ್ಮಣ್ಯಂ ಯುಗಳ ಗೀತೆಗಳನ್ನು ಹೆಚ್ಚಾಗಿ ಹಾಡಿದ್ದಾರೆ.
ತಮಿಳಿನಲ್ಲಿ ಎಂ.ಜಿ.ರಾಮಚಂದ್ರನ್, ಶಿವಾಜಿ ಗಣೇಶನ್ ಮತ್ತು ಜೆಮಿನಿ ಗಣೇಶನ್ ರಿಗಾಗಿ ಬಾಲು ಹೆಚ್ಚಾಗಿ ಹಾಡಿದ್ದರು.
ಮೈಲುಗಲ್ಲಾದ ಶಂಕರಾಭರಣಂ
1980 ರಲ್ಲಿ ” ಶಂಕರಾಭರಣಂ” ಚಿತ್ರದ ಹಾಡಿನ ಬಳಿಕ ಬಾಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಾರಂಭಿಸಿದರು. ಹಿನ್ನಲೆ ಗಾಯಕನ ಮೊದಲ ರಾಷ್ಟ್ರ ಪ್ರಶಸ್ತಿಯನ್ನು ಕೂಡಾ ಇದೇ ಚಿತ್ರದ ಹಾಡಿಗಾಗಿ ಪಡೆದರು.
ತಮಿಳಿನಲ್ಲಿ ಸಂಗೀತ ನಿರ್ದೇಶಕ ಇಳಯ ರಾಜಾ ,ಗಾಯಕಿ ಎಸ್.ಜಾನಕಿ ಮತ್ತು ಬಾಲ ಸುಬ್ರಹ್ಮಣ್ಯರದ್ದು ಯಶಸ್ವಿ ಸಂಗಮ.1970-80ರ ದಶಕ ಈ ತ್ರಿಮೂರ್ತಿಗಳದ್ದೇ ಹವಾ.ಅದು ಇವರ ಯಶಸ್ಸಿನ ತುತ್ತತುದಿಯ ಕಾಲ. ಇವರು ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು.ಸಾಗರ ಸಂಗಮ್(1983) ಇಬ್ಬರಿಗೂ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟರೆ ಸ್ವಾತಿ ಮುತ್ಯಂ(1986),ಮತ್ತು ರುದ್ರವೀಣಾ(1988) ಚಿತ್ರದ ಹಾಡುಗಳಿಗೂ ರಾಷ್ಟ್ರ ಪ್ರಶಸ್ತಿ ದೊರೆಯಿತು.
ಮರಳಿ ಹಿಂದಿಗೆ
ಹಿಂದಿ ಚಿತ್ರಲೋಕದಿಂದ ದೂರವಾಗಿದ್ದ ಎಸ್ಪಿಬಿಗೆ ಸಲ್ಮಾನ್ ಖಾನ್ ನಟನೆಯ ‘ಮೈನೆ ಪ್ಯಾರ್ ಕಿಯಾ’ (1989) ಚಿತ್ರದ ಮೂಲಕ ಮತ್ತೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ದೊರೆಯಿತು. ಈ ಚಿತ್ರದ ಹಾಡಿಗಾಗಿ ಫಿಲ್ಮ್ ಫೇರ್ ಪ್ರಶಸ್ತಿಯೂ ಲಭಿಸಿತು. 70 ರ ದಶಕದಲ್ಲಿ ಕಿಶೋರ್ ಕುಮಾರ್ ರ ಸ್ವರ ಹೇಗೆ ರಾಜೇಶ್ ಖನ್ನಾ ರಿಗೆ ಸೂಕ್ತ ಎಂದುಕೊಳ್ಳಲಾಗಿತ್ತೋ ಎಸ್ಪಿಯ ಸ್ವರ ಸಲ್ಮಾನ್ ಗೆ ಬಲು ಸೂಕ್ತ ಎಂದಾಯಿತು.ಪರಿಣಾಮವಾಗಿ ಸಲ್ಮಾನ್ ನ ಮತ್ತೊಂದು ಚಿತ್ರ ‘ ಹಮ್ ಆಪ್ಕೆ ಹೈ ಕೌನ್’ ನಲ್ಲೂ ಎಸ್ ಪಿ ಬಾಲ ಸುಬ್ರಹ್ಮಣ್ಯಂ ಗೆ ಹಾಡುವ ಅವಕಾಶ ದೊರೆಯಿತು.
1990 ರ ದಶಕದಲ್ಲಿ ಸಂಗೀತ ನಿರ್ದೇಶಕರಾದ ವಿದ್ಯಾ ಸಾಗರ್, ಎಂ.ಎಂ.ಕೀರವಾಣಿ,ಎಸ್.ಎ.ರಾಜ್ ಕುಮಾರ್ ಜತೆ ಕೆಲಸ ಮಾಡುವ ಅವಕಾಶವೂ ಲಭಿಸಿತು. ಎ.ಆರ್.ರೆಹಮಾನ್ ಜತೆಯೂ ಎಸ್ಪಿ ಯಶಸ್ವೀ ಹಾಡುಗಳನ್ನು ನೀಡಿದ್ದಾರೆ.
ಪ್ರೇಮ ಲೋಕದ ಮೋಡಿ
‘ ಪ್ರೇಮಲೋಕ’ ದ ಮೂಲಕ ಕನ್ನಡದಲ್ಲಿ ಹಂಸಲೇಖಾರ ಜತೆ ಎಸ್ಪಿ ಮೋಡಿ ಸೃಷ್ಟಿಯಾಯಿತು. ಹಿಂದೂಸ್ತಾನಿ ಕ್ಲಾಸಿಕಲ್ ನಲ್ಲಿ ಹಂಸಲೇಖಾರ ಸಂಗೀತದಿಂದ ಮೂಡಿದ ‘ ಗಾನ ಯೋಗಿ ಪಂಚಾಕ್ಷರಿ ಗವಾಯಿ ‘(1995) ಚಿತ್ರದ ಹಾಡಿಗಾಗಿ ಎಸ್ಪಿಬಿ ಪಾಲಿಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಒಲಿದು ಬಂತು.1981ರಲ್ಲಿ ಏಕ್ ದೂಜೆ ಕೇಲಿಯೇ ,1983 ರಲ್ಲಿ ಸಾಗರ ಸಂಗಮ್ ಚಿತ್ರಗಳ ಹಾಡುಗಳಿಗೂ ಎಸ್ಪಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
1984 ರಲ್ಲಿ ಫಿಲ್ಮ್ ಫೇರ್ ಲೈಫ್ ಟೈಮ್ ಸಾಧನಾ ಪ್ರಶಸ್ತಿ, 1987 ರಲ್ಲಿ ಹಿನ್ನಲೆ ಗಾಯಕನಾಗಿ ಅಭೂತಪೂರ್ವ ಸಾಧನೆ ಪ್ರಶಸ್ತಿ ಪಡೆದಿರುವ ಬಾಲಸುಬ್ರಹ್ಮಣ್ಯಂ ಅವರು 1990ರಲ್ಲಿ ಮೈನೆ ಪ್ಯಾರ್ ಕಿಯಾ,2007 ರಲ್ಲಿ ತೆಲುಗಿನ ಶ್ರೀ ರಾಮದಾಸು,2008ರಲ್ಲಿ ತಮಿಳಿನ ಮೋಝಿ ಚಿತ್ರಗಳಿಗಾಗಿ ಉತ್ತಮ ಹಿನ್ನಲೆ ಗಾಯಕ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದರು.2016ರಲ್ಲಿ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಸಮಾರಂಭದಲ್ಲಿ ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದ ಇಯರ್ ಶತಮಾನದ ಪ್ರಶಸ್ತಿ,1997 ರಲ್ಲಿ ಪವಿತ್ರ ಬಂಧನಂ ಗೆ ಉತ್ತಮ ಪೋಷಕ ನಟ ನಂದಿ ಅವಾರ್ಡ್,1990 ರಲ್ಲಿ ಕೆಳದಿ ಕಣ್ಮಣಿ ಚಿತ್ರದ ಹಾಡಿಗಾಗಿ ತಮಿಳು ನಾಡು ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು,25 ಬಾರಿ ಆಂಧ್ರಪ್ರದೇಶ ಸರ್ಕಾರದ ‘ನಂದಿ’ ಪ್ರಶಸ್ತಿ ಪಡೆದಿದ್ದಾರೆ 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಇವರು.ಹಲವು ವಿಶ್ವ ವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ.
ಕನ್ನಡದ ಎದೆ ತುಂಬಿ ಹಾಡುವೆನು,ತಮಿಳಿನ ವಾನಂ ಪಾಡಿ,ಎನ್ನೊಡು ಪಟ್ಟು ಪಾದುಂಗಲ್, ಏರ್ ಟೆಲ್ ಸೂಪರ್ ಸಿಂಗರ್, ಇಸೈವಾನಿಲ್ ಇಲಯನಿಂ,ತೆಲುಗಿನ ಪದುತ ತೀಯಗ ದಂತಹ ಟಿವಿ ಸಂಗೀತ ರಿಯಾಲಿಟಿ ಸರಣಿ ನಡೆಸಿಕೊಟ್ಟಿರುವ ಎಸ್ಪಿ ಬಾಲಸುಬ್ರಹ್ಮಣ್ಯಂ ತಮಿಳು ತೆಲುಗಿನ ಧಾರಾವಾಹಿ ಗಳಲ್ಲೂ ನಟಿಸಿದ್ದಾರೆ.ಧಾರಾವಾಹಿ ಶೀರ್ಷಿಕೆ ಗೀತೆ, ಕನ್ನಡ ತುಳು ಸೇರಿದಂತೆ ಇತರ ಹೆಚ್ಚಿನ ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಹಾಡಿರುವ ಭಕ್ತಿಗೀತೆಗಳ ಸಂಖ್ಯೆ ಅಗಣಿತವಾದುದು.
2013 ರಲ್ಲಿ ಶಾರೂಖ್ ನಟನೆಯ “ಚೆನ್ನೈ ಎಕ್ಸ್‌ಪ್ರೆಸ್ ” ಗಾಗಿ ವಿಶಾಲ್- ಶೇಖರ್ ಸಂಗೀತ ನಿರ್ದೇಶನದಲ್ಲಿ ಬಾಲು ಹಾಡಿದ್ದರು.
ಕಂಠದಾನ ಕಲಾವಿದ
ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದ ಬಾಲು ಒಬ್ಬ ಉತ್ತಮ ಕಂಠದಾನ ಕಲಾವಿದರೂ ಹೌದು. ಕಮಲ್ ಹಾಸನ್, ರಜನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಭಾಗ್ಯರಾಜ್, ಅನಿಲ್ ಕಪೂರ್,ಗಿರೀಶ್ ಕಾರ್ನಾಡ್, ಜೆಮಿನಿ ಗಣೇಶನ್, ಅರ್ಜುನ್ ಸರ್ಜಾ, ನಾಗೇಶ್,ಕಾರ್ತಿಕ್ ಮತ್ತು ರಘುವರನ್ ರಂತಹ ಕಲಾವಿದರಿಗೆ ಕಂಠದಾನ ಮಾಡಿದ್ದಾರೆ.ಸ್ತ್ರೀ ಸ್ವರದಲ್ಲೂ ಹಾಡುವ ಮತ್ತು ಕಂಠದಾನ ಮಾಡಿರುವ ದಾಖಲೆಯೂ ಎಸ್ಪಿಬಿ ಹೆಸರಲ್ಲಿದೆ.
ಮಿಮಿಕ್ರಿಯೂ ಗೊತ್ತಿತ್ತು
‘ತಾಳಿ ಕಟ್ಟುವ ಶುಭ ವೇಳೆ…..’ ಈ ಕನ್ನಡದ. ಸಿನಿ ಹಾಡು ನೀವು ಕೇಳಿರಬೇಕಲ್ಲಾ? ಅದರಲ್ಲಿ ನಾವು ಗಾನ ಗಾರುಡಿಗನ ಮಿಮಿಕ್ರಿ ಕಲೆಯನ್ನು ಚೆನ್ನಾಗಿ ಅನುಭವಿಸಬಹುದಾಗಿದೆ.ಅವರ ಸಾಮರ್ಥ್ಯಕ್ಕೊಂದು ಅದು ಉದಾಹರಣೆ.
ಆಡು ಮುಟ್ಟದ ಸೊಪ್ಪಿಲ್ಲ ಬಾಲು ಅವರು ಹಾಡದ ಹಾಡಿಲ್ಲ ಅನ್ನಬಹುದು.ಏಕ ಕಾಲದಲ್ಲಿ ಎರಡು ಮೂರು ಕಲಾವಿದರಿಗಾಗಿ ಭಿನ್ನ ಭಿನ್ನ ಸ್ವರದಲ್ಲಿ ಹಾಡುವ ಸಾಮರ್ಥ್ಯ ಇದ್ದರೆ ಅದು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮಾತ್ರ ಎನ್ನ ಬಹುದು.
ಏಳಿಂಜೆ ನಾಗೇಶ್, ಮುಂಬಯಿ








































































