ಕಗ್ಗದ ಸಂದೇಶ- ಅಸೂಯೆ ಎಂಬ ಆರದ ಕಿಚ್ಚು

“ಉರಿಯುತಿರೆ ಹೊಟ್ಟೆ ಕಿಚ್ಚಾರಿಸಲು ನೀರೆಲ್ಲಿ?|

ನರಕವೆದೆಯಲಿ ನೆಲೆಸೆ ನಿದ್ದೆಗೆಡೆಯೆಲ್ಲಿ?||

ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ?|

ಕರುಬಿನಾ ಹರಿ ಪೊರೆಗೆ-ಮಂಕುತಿಮ್ಮ.”

    ಹೊಟ್ಟೆಯೊಳಗೆ  ಉರಿಯುವ  ಕಿಚ್ಚನ್ನು ಆರಿಸುವ  ನೀರು ಎಲ್ಲಿಹುದು? ಮತ್ಸರದ ನರಕ ಎದೆಯಲಿ ನೆಲೆಸಿರುವಾಗ  ನೆಮ್ಮದಿಯ ನಿದ್ದೆ ಬರಲು  ಸಾಧ್ಯವಿದೆಯೆ? ಈ ಮತ್ಸರ ಪಡುವವನ ಸಂಕಟವನ್ನು ಪರಿಹರಿಸಲು ಮನುಷ್ಯರಿಂದ ಸಾಧ್ಯವಿಲ್ಲ. ಪರರ ಕಂಡು ಕರುಬುವವನನ್ನು ಆ ಭಗವಂತನೆ ಕಾಪಾಡಬೇಕೆಂದು ಡಿ.ವಿ.ಜಿ. ಈ ಮುಕ್ತಕದಲ್ಲಿ ಹೇಳಿದ್ದಾರೆ.

   ಅರಿಷಡ್ವರ್ಗಗಳಲ್ಲಿ ಬಹಳ ಅಪಾಯಕಾರಿಯಾದದು ಮತ್ಸರ.ಮಹಾಭಾರತವೇ ಇದಕ್ಕೊಂದು ನೈಜ ಉದಾಹರಣೆ.ಇಂದ್ರಪ್ರಸ್ಥದಲ್ಲಿ ಪಾಂಡವರ ವೈಭವವನ್ನು ಕಂಡು ಮತ್ಸರಪಟ್ಟ ದುರ್ಯೋಧನನಿಂದಾಗಿ  ಅವನು ಮಾತ್ರವಲ್ಲ ಇಡೀ ಕುರುಕುಲವೇ ನಾಶವಾಗಿ ಹೋಯಿತು.ನಮ್ಮ ಮನೆಯ ಬೆಂಕಿ ನಮ್ಮ ಮನೆಯನ್ನೇ ಸುಡುವಂತೆ ನಮ್ಮ ಮನದ ಕಿಚ್ಚು ನಮ್ಮನ್ನೆ ಸುಡುತ್ತದೆ ಎನ್ನುವ ವಾಸ್ತವ ಸಂಗತಿಯನ್ನು  ನಾವು ಸದಾ ನೆನಪಿಟ್ಟುಕೊಳ್ಳಬೇಕು.ಅಸೂಯೆಯಿಂದ ನಾವು ಮಾತ್ರವಲ್ಲ  ನಮ್ಮ ನಂಬಿದವರ ಜೀವನವೂ ಹಾಳಾಗಿ ಹೋಗುತ್ತದೆ.

   ನಮ್ಮನ್ನು ನಾವು ನೋಡಿಕೊಂಡು ಜೀವನ ಮಾಡಿದರೆ ಕಷ್ಟವಾಗದು.ಇನ್ನೊಬ್ಬರ ನೋಡಿಕೊಂಡು ಬದುಕ ನಡೆಸಲು ಹೊರಟಾಗಲೆ ಸಮಸ್ಯೆಯುಂಟಾಗುವುದು.ಇರುವುದರಲ್ಲಿಯೆ ತೃಪ್ತಿಯನ್ನು ಕಾಣಬೇಕು.ಅತೃಪ್ತಿ ಮತ್ತು ಅಸೂಯೆ ಮಾನಸಿಕ ನೆಮ್ಮದಿಯೊಂದಿಗೆ ದೈಹಿಕ ಆರೋಗ್ಯವನ್ನು ಕೆಡಿಸುತ್ತದೆ.ವಿವೇಕದಿಂದ ಅಸೂಯೆಯನ್ನು ಗೆಲ್ಲಬಹುದು.ಇನ್ನೊಬ್ಬರ ಅಭಿವೃದ್ಧಿ ಮತ್ತು ಅವರ ಮಾಡುವ ಒಳ್ಳೆಯ ಕೆಲಸವನ್ನು ನೋಡಿ ಯಾರು ಸಂತೋಷ ಪಡುತ್ತಾರೊ ಅಂತಹ ವ್ಯಕ್ತಿಗಳು    ಜನರಿಗೆ ಮಾತ್ರವಲ್ಲ ದೇವರಿಗೂ ಇಷ್ಟವಾಗುತ್ತಾರೆ. ಮಾತ್ಸರ್ಯವನ್ನು ಬಿಟ್ಟು ಮಾನುಷ್ಯ ಪ್ರೀತಿಯನ್ನು ರೂಢಿಸಿಕೊಳ್ಳೋಣ.

  “ಉರಿಯುವವರು ಉರಿಯಲಿ,ಕುದಿಯುವವರು

ಕುದಿಯಲಿ,ನಿನ್ನಂತೆ ನೀನಿರು

ನೆನಪಿನಲಿ.ಉರಿಯುವವರು

ಬೂದಿಯಾಗುವರು,ಕುದಿಯುವವರು

ಅವಿಯಾಗುವರು.”

ಪ್ರಭಾಕರ ಶೆಟ್ಟಿ, ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷರು

















































error: Content is protected !!
Scroll to Top