ದಿಲ್ಲಿ, ಆ. 28: ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿ ಬೂದಿ ಮುಚ್ಚಿದ ಕೆಂಡದಂತೆ ಆಗಾಗ ಹೊಗೆಯೆಬ್ಬಿಸುತ್ತಿದೆ. ಹಿರಿಯ ನಾಯಕರು ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದು ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾರ್ಯಕಾರಿಣಿ ಸಮಿತಿಯ ತುರ್ತು ಬೈಠಕ್ ಕರೆದದ್ದು, ಈ ಬೈಠಕ್ ನಲ್ಲಿ ಸೋನಿಯಾ ಗಾಂಧಿಯನ್ನೇ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿಸುವ ತೀರ್ಮಾನ ಕೈಗೊಂಡ ಬೆಳವಣಿಗೆಗಳೆಲ್ಲ ಮುಗಿದ ಬಳಿಕ ಈಗ ಮತ್ತೆ ಕೆಲವು ನಾಯಕರು ಅಸಮಾಧಾನ ಹೊಕ ಹಾಕ ತೊಡಗಿದ್ದಾರೆ.
ಪತ್ರ ಬರೆದ 23 ನಾಯಕರಲ್ಲಿ ಒಬ್ಬರಾದ ಗುಲಾಮ್ ನಬಿ ಆಜಾದ್ ಈಗ ಮೌನ ಮುರಿದಿದ್ದು, ಈಗಿರುವ ಅಧ್ಯಕ್ಷರಿಗೆ ಶೇಕಡಾ ಒಂದರಷ್ಟು ಬೆಂಬಲವೂ ಇರಲಿಕ್ಕಿಲ್ಲ ಎಂದಿದ್ದಾರೆ. ಈಗ ಆಯ್ಕೆ ಆಗಿರುವ ಅಧ್ಯಕ್ಷರಿಗೆ ಯಾರ ಬೆಂಬಲವೂ ಇಲ್ಲ. ಬಹುಶಃ ಅವರಿಗೆ ಶೇ.1 ಮತ ಬೀಳಬಹುದು ಎಂದು ಹೇಳುವ ಮೂಲಕ ಸೋನಿಯಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.
ಅಧ್ಯಕ್ಷರನ್ನು ಬದಲಾಯಿಸಬೇಕು ಎನ್ನುವ ನಮ್ಮ ಪತ್ರಕ್ಕೆ ರಾಜ್ಯ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಕಿಡಿಕಾರಿದ್ದಾರೆ. ದುರಾದೃಷ್ಟ ಎಂದರೆ ಚುನಾವಣೆ ನಡೆಯುವಾಗ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಯಾರು ಕಾಂಗ್ರೆಸ್ ಮೇಲೆ ನಿಜವಾದ ಅಭಿಮಾನ ಹೊಂದಿದ್ದಾರೋ ಅವರು ಮಾತ್ರ ನಮ್ಮ ಕೋರಿಕೆಯನ್ನು ಬೆಂಬಲಿಸಿದ್ದಾರೆ ಎಂದು ಗುಲಾಬ್ ನಬಿ ಆಜಾದ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕನ ಅಗತ್ಯವಿದೆ. ಹೀಗಾಗಿ ಉನ್ನತ ಮಟ್ಟದ ಹುದ್ದೆಯಲ್ಲಿ ಜನರಿಗೆ ಹೆಚ್ಚು ಪರಿಚಯವಾಗಿರುವ ಹಾಗೂ ಪಕ್ಷದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ನಾಯಕನನ್ನು ಆಯ್ಕೆ ಮಾಡಬೇಕು ಎಂಬುದು 23 ನಾಯಕರ ಕೋರಿಕೆ ಆಗಿತ್ತು.






























































