ಬೆಂಗಳೂರು,ಆ.28 :ರಾಜ್ಯ ಸರಕಾರ ಮಾಡಿರುವ ಭೂ ಸುಧಾರಣಾ ತಿದ್ದುಪಡಿ ಕಾಯಿದೆ ರೈತರಿಗೆ ಮಾರಕವಾಗಲಿದೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಕಾಯಿದೆಯನ್ನು ರದ್ದುಪಡಿಸಲು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಭೂ ಸುಧಾರಣಾ ಕಾಯಿದೆಗೆ ಮಾಡಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಈ ಪತ್ರದಲ್ಲಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 1961 ಭೂ ಸುಧಾರಣಾ ಕಾಯಿದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಈ ಮೂಲಕ ರೈತರ ಕೃಷಿಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಕಾಯಿದೆ ತಿದ್ದುಪಡಿಗೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಕೃಷಿ ಭಾರತದ ಪ್ರಧಾನ ಅಂಗವಾಗಿದ್ದು, ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಗ್ರಾಮೀಣ ಭಾರತದಲ್ಲಿ ಕೃಷಿ ಭೂಮಿ ರೈತರ ಪಾಲಿಗೆ ಭಾವನಾತ್ಮಕ ವಿಚಾರವಾಗಿದೆ. ಆದರೆ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ರೈತ ವಿರೋಧಿ ನಡೆಯನ್ನು ಅನುಸರಿಸಿದೆ ಎಂದಿದ್ದಾರೆ.

ಕೆಐಎಡಿಬಿ ಈಗಾಗಲೇ 36,000 ಎಕರೆ ಅಭಿವೃದ್ಧಿಯಾಗದ ಭೂಮಿಯನ್ನು ಹೊಂದಿದ್ದು, ರೈತರ ಉತ್ಪಾದಕ ಜಮೀನುಗಳ ಬದಲು ಕೈಗಾರಿಕಾ ಅಭಿವೃದ್ಧಿಗೆ ಆ ಭೂಮಿಯನ್ನು ಬಳಸಿಕೊಳ್ಳಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದಿರುವಿಕೆಗೆ ಮುಖ್ಯ ಕಾರಣವಾದ ಜಮೀನ್ದಾರಿ ಪದ್ಧತಿ ಮರಳುವ ಸಾಧ್ಯತೆಗಳಿವೆ. ಭೂ ಸುಧಾರಣೆಯ ಪ್ರಯತ್ನವು ಬೆಂಗಳೂರು ಲ್ಯಾಂಡ್ ಮಾಫಿಯಾ ಹಿತಾಸಕ್ತಿಗಳಿಗೆ ಅನುಗುಣವಾಗಿದೆ, ಇದು ರಿಯಲ್ ಎಸ್ಟೇಟ್ ಮೂಲಕ ಅಪಾರ ಲಾಭ ಗಳಿಸಲು ಹೆಚ್ಚಿನ ಭೂಮಿಯನ್ನು ಲಭ್ಯವಾಗುವಂತೆ ಕಾಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕರ್ನಾಟಕ ಸರ್ಕಾರ ಏಕಪಕ್ಷೀಯವಾಗಿ ಈ ನಿರ್ಧಾರ ತೆಗೆದುಕೊಂಡಿದೆ. ಈ ತಿದ್ದುಪಡಿಯನ್ನು ಜಾರಿಗೆ ತರುವ ಮೊದಲು ವಿಧಾನಸಭೆಯಲ್ಲಿ ಚರ್ಚಿಸಬೇಕಾಗಿದೆ. ಲಕ್ಷಾಂತರ ರೈತರ ಹಿತದೃಷ್ಟಿಯಿಂದ ಸುಗ್ರೀವಾಜ್ಞೆಯನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿರ್ದೇಶಿಸಬೇಕೆಂದು ಪತ್ರದಲ್ಲಿ ಮೋದಿಯನ್ನು ವಿನಂತಿಸಿದ್ದಾರೆ.






























































