ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರಕಾರದ ಅನುಮತಿ

0

ಬೆಂಗಳೂರು: ಕೊರೊನಾ ಸಾಂಕ್ರಮಿಕ ಹಿನ್ನೆಲೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರಕಾರ ಮಾರ್ಗಸೂಚಿ ರೂಪಿಸಿದೆ. ಕೊರೊನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಟ್ವಿಟ್ಟರ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದೆಲ್ಲೆಡೆ ಗಣೇಶೋತ್ಸವ ಆಚರಿಸಲು ಸರಕಾರ ಅವಕಾಶ ಮಾಡಿಕೊಡುವಂತೆ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌ ಆ. 17ರಂದು ಬೆಂಗಳೂರಿನ ಕಚೇರಿಯಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಸರಕಾರ ಪರಿಷೃತ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಮಾರ್ಗಸೂಚಿ ಇಂತಿದೆ.

1. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವವರು ನಾಲ್ಕು ಅಡಿ ಎತ್ತರ ಮೀರದಂತೆ ಮೂರ್ತಿ ನಿರ್ಮಾಣ ಮಾಡಬೇಕು. ಮನೆಯೊಳಗೆ ಪ್ರತಿಷ್ಠಾಪನೆ ಮಾಡುವವರು ಎರಡು ಅಡಿ ಮೀರದಂತೆ ಪ್ರತಿಷ್ಠಾಪನೆ ಮಾಡಬೇಕು.
2. ಪಾರಂಪರಿಕವಾಗಿ ಗಣೇಶೋತ್ಸವ ಮಾಡುವಲ್ಲಿ ಗಣೇಶೋತ್ಸವ ಸಮಿತಿ ಅಥವಾ ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್‌ ಕಾರ್ಪೋರೇಷನ್‌ ಅಥವಾ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯಬೇಕು. ಒಂದು ವಾರ್ಡ್ ಅಥವಾ ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಪ್ರೋತ್ಸಾಹಿಸುವುದು.
3. ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ದೇವಸ್ಥಾನದ ಒಳಗೆ, ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ/ ಖಾಸಗಿ/ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಟ ಸಂಖ್ಯೆಯೊಂದಿಗೆ ಆಚರಿಸಬಹುದು.
4. ಗಣೇಶೋತ್ಸವದ ಸ್ಥಳದಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಾಣ ಮಾಡಬೇಕು. ಒಮ್ಮೆಲೆ 20 ಕ್ಕಿಂತ ಅಧಿಕ ಜನರು ಸೇರದಂತೆ ಭಕ್ತಾದಿಗಳಿಗೆ ಅನುವು ಮಾಡುವುದು.
5. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ.
6. ಶ್ರೀ ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ಮೆರವಣಿಗೆ ಮಾಡುವಂತಿಲ್ಲ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
7. ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜನೆ ಮಾಡುವುದು ಮತ್ತು ಸರ್ಕಾರಿ ಅಥವಾ ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪನ ಮಾಡಿವವರು ಗಣೇಶ ಮೂರ್ತಿಯನ್ನು ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮಹಾನಗರ ಪಾಲಿಕೆ ಅಥವಾ ಜಿಲ್ಲಾಡಳಿತ ಅಥವಾ ಹತ್ತಿರದ ಸ್ಥಳೀಯ ಸಂಸ್ಥೆಗಳ ಅಥವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್‌ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವುದು.---
Previous articleಅಮಿತ್‌ ಶಾ ಮತ್ತೆ ಅಸ್ವಸ್ಥ
Next articleದೇಶದಲ್ಲಿ ಕೊರೊನಾ ಸೋಂಕು ತುಸು ಇಳಿಮುಖ

LEAVE A REPLY

Please enter your comment!
Please enter your name here