
ದಿಲ್ಲಿ, ಆ.18: ದೇಶಾದ್ಯಂತ ಆತಂಕಕ್ಕೆ ಕಾರಣವಾಗಿದ್ದ ಕೊರೊನಾ ಸೋಂಕಿನ ಹಾವಳಿ ಕಡಿಮೆಯಾಗುವ ಲಕ್ಷಣ ಕಾಣಿಸಿದೆ. ಸತತ ನಾಲ್ಕನೇ ದಿನ ಕೊರೊನಾ ಸೋಂಕಿತರ ಮತ್ತು ಮೃತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಮಂಗಳವಾರ 55,079 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಈ ವರೆಗಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 27,02,743ಕ್ಕೆ ಏರಿಕೆಯಾಗಿದೆ.
ಸಾವಿನ ಪ್ರಮಾಣ ಕೂಡ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 876 ಮಂದಿ ಒಂದೇ ದಿನ ನಿಧನರಾಗಿದ್ದಾರೆ. ಇಲ್ಲಿಯವರೆಗೆ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 51,797ಕ್ಕೆ ಏರಿಕೆಯಾಗಿದೆ.
ಆ.11ರಿಂದ ಆ.15ರವರೆಗೆ ಪ್ರತಿನಿತ್ಯ 60 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದರು. ಆ.13ರಂದು ದಾಖಲೆಯ 69 ಸಾವಿರದವರೆಗೂ ಸೋಂಕಿತರ ಸಂಖ್ಯೆ ತಲುಪಿತ್ತು. ಆದರೆ, ಭಾನುವಾರ 56,507 ಮಂದಿಯಲ್ಲಿ ಸೋಂಕು ಕಂಡು ಬಂದಿತ್ತು. ಅದು ಮಂಗಳವಾರ ಮತ್ತಷ್ಟು ಇಳಿಕೆಯಾಗಿದೆ. ಕಳೆದೊಂದು ವಾರದಿಂದ ಪ್ರತಿನಿತ್ಯ 900ಕ್ಕೂ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದರು. ಆದರೆ, ಒಂದು ವಾರದ ಬಳಿಕ ಮೃತರ ಸಂಖ್ಯೆ 900ಕ್ಕಿಂತ ಕೆಳಕ್ಕೆ ಇಳಿದಿದೆ.
ಈ ನಡುವೆ 27,02,743 ಮಂದಿ ಸೋಂಕಿತರ ಪೈಕಿ 19,77,780 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 6,73,166 ಸಕ್ರಿಯ ಪ್ರಕರಣಗಳಿವೆ.