ಕೊರೊನಾ ಪಿಡುಗಿನ ಕಾಲದಲ್ಲೂ ಎಎನ್ಎಫ್‌ ಸಿಬಂದಿಗೆ ಆರಾಮ ಡ್ಯೂಟಿ

 

ಕಾರ್ಕಳದಲ್ಲಿ ಎಎನ್‌ಎಫ್‌ ತುಕಡಿಯಲ್ಲಿ 80 ಸಿಬ್ಬಂದಿ , ಹೆಬ್ರಿಯಲ್ಲಿ 32

-15 ವರ್ಷಗಳಿಂದ ಇರುವ ಕ್ಯಾಂಪ್‌

-ಪೊಲೀಸರಿಂದಲೇ ಹೆಚ್ಚು ಕಾರ್ಯಾಚರಣೆ

ನ್ಯೂಸ್‌ ಕಾರ್ಕಳ ವಿಶೇಷ ವರದಿ

ಕಾರ್ಕಳ : ನಕ್ಸಲ್‌ ಚಟುವಟಿಕೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮತ್ತು ನಕ್ಸಲ್‌ ಬಾಧಿತ ಪ್ರದೇಶದ ಜನರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸುವ ಸಂಬಂಧ 2005 ಮೇ 21ರಂದು ರಾಜ್ಯ ಸರಕಾರದ ಆದೇಶದಂತೆ 13 ಎಎನ್‌ಎಫ್‌ (ನಕ್ಸಲ್‌ ನಿಗ್ರಹ ಪಡೆ) ತುಕಡಿಯನ್ನುತೆರೆಯಲಾಗಿದ್ದು, ಈ ಪೈಕಿ ಕಾರ್ಕಳದಲ್ಲೂ ಒಂದು ಕ್ಯಾಂಪ್‌ ಅಸ್ತಿತ್ವಕ್ಕೆ ಬಂತು. ಕಾರ್ಕಳ ನಗರದ ಸ್ವರಾಜ್‌ ಮೈದಾನ ಬಳಿ ಕ್ಯಾಂಪ್‌ ಮಾಡಲಾಗಿದ್ದು, ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 2016ರ ಬಳಿಕ ನಕ್ಸಲ್‌ ಚಟುವಟಿಕೆ ಕಾರ್ಕಳ, ಹೆಬ್ರಿ ಭಾಗದಲ್ಲಿ ಕಂಡು ಬಾರದಿದ್ದರೂ ಸುಮಾರು 80 ಮಂದಿ ಸಿಬ್ಬಂದಿ ಇಲ್ಲಿರುವುದು ಯಾತಕ್ಕಾಗಿ ಎನ್ನುವುದು ಹಲವರ ಪ್ರಶ್ನೆ.

ಕಾರ್ಕಳ ತಾಲೂಕಿನ ಈದು, ಮಾಳ, ನೂರಾಲ್‌ಬೆಟ್ಟು, ಅಂಡಾರು, ಶಿರ್ಲಾಲು, ಕೆರ್ವಾಶೆ, ಹೆಬ್ರಿ ತಾಲೂಕಿನ ವರಂಗ, ಕಬ್ಬಿನಾಲೆ, ನಾಡ್ಪಾಲು ಗ್ರಾಮಗಳನ್ನು ನಕ್ಸಲ್‌ಪೀಡಿತ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು 2016ರವರೆಗೆ ಕೆಲವೊಂದು ನಕ್ಸಲ್‌ ಚಟುವಟಿಕೆಗಳು ಅಲ್ಲೊಂದು ಇಲ್ಲೊಂದು ವರದಿಯಾಗಿದ್ದವು.

ನಕ್ಸಲ್‌ ಹೆಜ್ಜೆಗುರುತು
2003ರಲ್ಲಿ ಮೊದಲ ಬಾರಿಗೆ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟು ಎಂಬಲ್ಲಿ ನಕ್ಸಲ್‌ ಕೃತ್ಯ ಕಂಡುಬಂದಿರುತ್ತದೆ. ಅಂದು ಪೊಲೀಸರು ಹಾಗೂ ನಕ್ಸಲ್‌ ತಂಡದೊಂದಿಗೆ ಗುಂಡಿನ ಚಕಮಕಿಯಾಗಿದ್ದು, ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಹತರಾಗಿರುತ್ತಾರೆ. 2005ರಲ್ಲಿ ಹೆಬ್ರಿ ಠಾಣಾ ವ್ಯಾಪ್ತಿಯ ಮತ್ತಾವು ಎಂಬಲ್ಲಿ ಪೊಲೀಸ್‌ ಜೀಪಿಗೆ ನೆಲಬಾಂಬು ಮೂಲಕ ದಾಳಿ ಮಾಡಿದ್ದು, ಇದರಿಂದ ಹೆಬ್ರಿ ಠಾಣಾ ಪೊಲೀಸರು ಗಾಯಗೊಂಡಿದ್ದರು. 2008ರಂದು ಹೆಬ್ರಿಯ ಸೀತಾನದಿ ಎಂಬಲ್ಲಿ ನಕ್ಸಲರು ಭೋಜ ಶೆಟ್ಟಿ ಹಾಗೂ ಸುರೇಶ್‌ ಶೆಟ್ಟಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. 2010ರಂದು ಅಜೆಕಾರಿನ ಮೈರೋಡಿಯಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್‌ ಕುತ್ಲೂರು ವಸಂತ ಮೃತಪಟ್ಟಿರುತ್ತಾನೆ. 2011ರಲ್ಲಿ ಹೆಬ್ರಿ ಠಾಣಾ ಸರಹದ್ದಿನ ತಿಂಗಳಮಕ್ಕಿ ಎಂಬಲ್ಲಿ ನಕ್ಸಲರು ಸದಾಶಿವ ಎಂಬವರನ್ನು ಪೊಲೀಸ್‌ ಮಾಹಿತಿದಾರ ಎಂದು ಭಾವಿಸಿ ಹತ್ಯೆಗೈದಿದ್ದಾರೆ.

ಕೊನೆ ಚಟುವಟಿಕೆ
2016ರಲ್ಲಿ ನೂರಾಲ್‌ಬೆಟ್ಟು ಪ್ರದೇಶದಲ್ಲಿ ನಕ್ಸಲರು ಅಂಗನವಾಡಿ ಮತ್ತು ಶಾಲಾ ಗೋಡೆಗೆ “ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡೋಣ” ಎಂದು ಬರೆದ ಪೋಸ್ಟರ್‌ ಅಂಟಿಸಿದ್ದರು. ಬಹುಶಃ ಕಾರ್ಕಳ – ಹೆಬ್ರಿ ಉಭಯ ತಾಲೂಕಿನಲ್ಲಿ ಕಂಡು ಬಂದ ಕೊನೆಯ ನಕ್ಸಲ್‌ ಚಟುವಟಿಕೆಯಿದು.

ಪೊಲೀಸರ ಕಾರ್ಯವೇ ಹೆಚ್ಚು
ನಕ್ಸಲ್‌ ನಿಗ್ರಹ ಪಡೆ ಕಾರ್ಕಳದಲ್ಲಿ ಬೀಡುಬಿಟ್ಟಿದ್ದರೂ ನಕ್ಸಲ್‌ ಕಾರ್ಯಾಚರಣೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವುದು ಪೊಲೀಸರೇ. ಕಾರ್ಕಳದಲ್ಲಿ ನಡೆದ ಈದು ಕಾರ್ಯಾಚರಣೆಯಲ್ಲಿ ಆಗಿನ ಡಿಸಿಐಬಿ ಇನ್ಸ್‌ಪೆಕ್ಟರ್‌ ಅಶೋಕನ್‌ ಮತ್ತು ಅವರ ತಂಡ ಎನ್‌ಕೌಂಟರ್‌ ನಡೆಸಿದ್ದರೆ, ಮೈರೋಡಿಯಲ್ಲಿ ನಡೆದ ಎನ್‌ಕೌಂಟರ್‌ ಅನ್ನು ಅಂದು ಕಾರ್ಕಳದಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದ ಪುಟ್ಟುಸ್ವಾಮಿ ಗೌಡ ನೇತೃತ್ವದಲ್ಲಿ ನಡೆಸಿತ್ತು. ತಿಂಗಳಮಕ್ಕಿಯಲ್ಲಿ ಸದಾಶಿವ ಅವರನ್ನು ಅಪಹರಿಸಿ, ನಕ್ಸಲರು ಹತೈಗೈದಿದ್ದ ಸಂದರ್ಭ ಮೃತದೇಹವನ್ನೂ ಪೊಲೀಸರೇ ಪತ್ತೆ ಹಚ್ಚಿದ್ದು, ಈ ಎಲ್ಲ ಸಂದರ್ಭ ಎಎನ್‌ಎಫ್‌ ತಂಡದ ಕಾರ್ಯಕ್ಕಿಂತಲೂ ಜಿಲ್ಲಾ ಪೊಲೀಸ್‌ ತಂಡದ ಶ್ರಮವೇ ಅಧಿಕವಾಗಿತ್ತು.

ಭರಪೂರ ಸೌಲಭ್ಯ
ಎಎನ್‌ಎಫ್‌ ಸಿಬ್ಬಂದಿಗೆ ಮೂಲ ವೇತನದ ಜೊತೆಗೆ ಸರಕಾರ ಹೆಚ್ಚುವರಿಯಾಗಿ 30 ಶೇ. ವಿಶೇಷ ಭತ್ಯೆ ನೀಡುತ್ತಿದೆ. ಅಲ್ಲದೇ ತಿಂಗಳಿಗೆ 21 ದಿನ ಕರ್ತವ್ಯ ನಿರ್ವಹಿಸಿದ ಬಳಿಕ 7 ದಿನಗಳ ಕಾಲ ಎಂಆರ್‌ (monthly rest) ಎಂಬ ವಿಶೇಷ ರಜಾ ಸೌಲಭ್ಯ ಒದಗಿಸುತ್ತಿದೆ. ಇಷ್ಟೆಲ್ಲ ಸೌಲಭ್ಯವಿದ್ದರೂ ಹೇಳಿಕೊಳ್ಳುವಂತಹ ಕೆಲಸವೇನು ಅವರಿಗಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಎಎನ್‌ಎಫ್‌ನವರು ಪ್ರಸ್ತುತ ಏನು ಮಾಡುತ್ತಿದ್ದಾರೆ ?
ಕಾರ್ಕಳ ಎಎನ್‌ಎಫ್‌ನಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸಿಬ್ಬಂದಿಯಿರುವುದು ರಕ್ಷಣೆಗಿಂತಲೂ ಹೆಚ್ಚಾಗಿ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಕೂಂಬಿಂಗ್‌ ನಡೆಸುತ್ತಿದ್ದೇವೆ ಎಂದು ಹೇಳುವ ಇಲ್ಲಿನ ಪೊಲೀಸರು ವ್ಯಾಯಾಮ, ಆಟೋಟಗಳಲ್ಲೇ ಸಮಯ ಕಳೆಯುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಕಾರ್ಕಳದಲ್ಲಿ ಪ್ರಸ್ತುತ ಒಬ್ಬರು ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌, ನಾಲ್ವರು ಎಸ್‌ಐ ಸೇರಿದಂತೆ ಒಟ್ಟು 80 ಸಿಬ್ಬಂದಿಯಿದ್ದು, ಹೆಬ್ರಿಯಲ್ಲಿ ತಲಾ ಒಬ್ಬರು ಇನ್ಸ್‌ಪೆಕ್ಟರ್‌, ಎಸ್‌ಐ ಸೇರಿದಂತೆ 32 ಮಂದಿ ಸಿಬ್ಬಂದಿಯಿದ್ದಾರೆ. ಇಷ್ಟೊಂದು ಸಿಬ್ಬಂದಿ ಈ ಕ್ಯಾಂಪ್‌ನಲ್ಲಿ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.

ಕೊರೊನಾ ವಾರಿಯರ್ಸ್‌ ಆಗಿಯೂ ಸೇವೆಯಿಲ್ಲ
ಎಎನ್‌ಎಫ್‌ ಸಿಬ್ಬಂದಿಯನ್ನು ಸರಕಾರದ ನಿಯಮದಂತೆ ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿಲ್ಲ. ಹೀಗಾಗಿ ಕೊರೊನಾ ಮಹಾಮಾರಿಯಿಂದ ದೇಶವೇ ತತ್ತರಿಸಿದಂತಾದ ಪ್ರಸ್ತುತ ಸಂದರ್ಭದಲ್ಲೂ ಎಎನ್‌ಎಫ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆಗೊಳಿಸಿಲ್ಲ. ಕ್ವಾರಂಟೈನ್‌ ಕೇಂದ್ರಗಳಲ್ಲಿ ಸಾಕಷ್ಟು ಹಿರಿಯ ಶಿಕ್ಷಕ, ಶಿಕ್ಷಕಿಯರು, ಮಧುಮೇಹಕ್ಕೀಡಾದ ಶಿಕ್ಷಕರನ್ನೂ ನಿಯೋಜನೆ ಮಾಡಲಾಗಿದ್ದರೂ ಎಎನ್‌ಎಫ್‌ ಸಿಬ್ಬಂದಿಯನ್ನು ಮಾತ್ರ ಬಳಸದೇ ಇರುವುದು ಮಾತ್ರ ಅಚ್ಚರಿಯ ಸಂಗತಿಯೇ ಹೌದು. ಆದರೂ 16 ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು ಇದೀಗ ಅವರು ಗುಣಮುಖರಾಗಿರುತ್ತಾರೆ.

ಸರಕಾರ ಆಯಾಯ ಸಂದರ್ಭಕ್ಕೆ ತಕ್ಕಂತೆ ವಿಶೇಷ ಪಡೆಗಳನ್ನು ರಚಿಸುವುದು, ಕೆಲವು ಮಂದಿಯನ್ನು ವಿಶೇಷ ಕರ್ತವ್ಯಕ್ಕೆ ನೇಮಿಸುವುದೆಲ್ಲ ಸರಿ. ಆದರೆ ಇದಕ್ಕೊಂದು ಕಾಲಮಿತಿ ಎಂಬುದಿರಬೇಕು. ಕಾಲಕಾಲಕ್ಕೆ ಅವರೇನು ಮಾಡುತ್ತಿದ್ದಾರೆ ಎಂಬುದರ ಮೌಲ್ಯಮಾಪನವಾಗಬೇಕು. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಲ್ಪಟ್ಟ ವ್ಯವಸ್ಥೆಯ ಅಗತ್ಯ ಈಗಲೂ ಇದೆಯಾ ಎಂಬುದನ್ನು ತಿಳಿದುಕೊಳ್ಳಬೇಕಾದದ್ದು ಆಡಳಿತದಲ್ಲಿರುವವರ ಜವಾಬ್ದಾರಿ. ಹೀಗೆ ಮಾಡದಿದ್ದರೆ ಭಾರೀ ಪ್ರಮಾಣದಲ್ಲಿ ಮಾನವ ಮತ್ತು ಆರ್ಥಿಕ ಸಂಪನ್ಮೂಲ ವ್ಯರ್ಥವಾಗುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ನಕ್ಸಲ್‌ ನಿಗ್ರಹ ಪಡೆ. ನಕ್ಸಲ್ ನಿಗ್ರಹ ಪಡೆಯನ್ನೂ ಇನ್ನಿತರ ಕಾರ್ಯಗಳಿಗೂ ಬಳಸಿಕೊಳ್ಳುವಂತೆ ನಿಯಮ ರೂಪಿಸುವುದು ಉತ್ತಮ.













































































































































































error: Content is protected !!
Scroll to Top