ವೆಂಕಟರಮಣ ದೇವಸ್ಥಾನದಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್‌ ಯಂತ್ರ ಅಳವಡಿಕೆ

0

ಕಾರ್ಕಳ, ಆ.2 : ಕಾರ್ಕಳದ ಪಡುತಿರುಪತಿ ಶ್ರೀ ವೆಂಕಟರಮಣ  ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ  ಸುರಕ್ಷೆಯ ದೃಷ್ಟಿಯಿಂದ ಪೂರ್ಣ ದೇಹವನ್ನು ಸ್ಯಾನಿಟೈಸ್‌ ಮಾಡುವ ಸ್ವಯಂಚಾಲಿತ ಯಂತ್ರವನ್ನು ಅಳವಡಿಸಲಾಗಿದೆ.

ಲೋಹ ಶೋಧಕ ದ್ವಾರದ ಮಾದರಿಯಲ್ಲಿರುವ ಈ  ಯಂತ್ರದ ಒಳಗಿನಿಂದ ಭಕ್ತರು ಹಾದು ಹೋಗುವಾಗ ಸ್ವಯಂಚಾಲಿತವಾಗಿ ಇಡೀ ದೇಹಕ್ಕೆ ಹರ್ಬಲ್‌ಸ್ಯಾನಿಟೈಸರ್‌ಸಿಂಪಡಣೆಯಾಗುತ್ತದೆ.

ಕಾರ್ಕಳ ತಾಲೂಕಿನ ದೇವಸ್ಥಾನಗಳಲ್ಲಿ ಇಂಥ ಸೌಲಭ್ಯ ಬಂದಿರುವುದು ಇದೇ ಮೊದಲು.

ಹರ್ಬಲ್‌ಸ್ಯಾನಿಟೈಸರ್‌ಎಂದರೇನು?

ಹರ್ಬಲ್‌ ಸ್ಯಾನಿಟೈಸರ್‌ನಲ್ಲಿ  ವಿವಿಧ ಗಿಡಮೂಲಿಕೆಗಳ ಅಂಶವಿದೆ. ಇದರಿಂದ ಜನರಿಗೆ ಯಾವುದೇ ಹಾನಿಯಿಲ್ಲ.ಸ್ಯಾನಿಟೈಸರ್‌ ತುಂಬಿಸಲು ಬದಿಯಲ್ಲೇ ಟಾಂಕಿ ಇದೆ.

ಸೆನ್ಸಾರ್‌ ಮೂಲಕ  ಕಾರ್ಯ ನಿರ್ವಹಣೆ

ಸ್ಯಾನಿಟೈಸರ್‌ ಉಪಕರಣವನ್ನು ತಯಾರಿಸಿಕೊಟ್ಟವರು ಅಜೆಕಾರಿನ ಪ್ರೀತೇಶ್‌ ಶೆಟ್ಟಿಯವರು. ಸೆನ್ಸಾರ್‌ ಮೂಲಕ ಕೆಲಸ ಮಾಡುವ ಈ ಉಪಕರಣವನ್ನು ಪೂರ್ತಿಯಾಗಿ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಲ್ಲಿ ತಯಾರಿಸಲಾಗಿದೆ ಎಂದು ಪ್ರೀತೇಶ್‌ ಶೆಟ್ಟಿಯವರು ನ್ಯೂಸ್‌ ಕಾರ್ಕಳ ಡಾಟ್‌ ಕಾಮ್‌ಗೆ ತಿಳಿಸಿದರು.

ಉಪಕರಣ ತಯಾರಿಗೆ ಸುಮಾರು 30,000 ರೂ. ಖರ್ಚು ತಗಲುತ್ತದೆ. ದೇವಸ್ಥಾನ, ಆಸ್ಪತ್ರೆ,ಫ್ಯಾಕ್ಟರಿ, ಶಾಲಾ-ಕಾಲೇಜುಗಳಂಥ ಸ್ಥಾಪನೆಗಳಿಗೆ  ಬಹಳ  ಪ್ರಯೋಜನಕಾರಿ ಎನ್ನುವ ಪ್ರೀತೇಶ್‌ ಶೆಟ್ಟಿ ಪ್ರಾಯೋಜಕರು ಸಿಕ್ಕಿದರೆ ಹೆಚ್ಚಿನ ಸಂಖ್ಯೆಯಲ್ಲಿ  ತಯಾರಿಸಿ ಕೊಡಬಹುದು ಎನ್ನುತ್ತಾರೆ.    ವರ್ಕ್‌ ಶಾಪ್‌ ನಲ್ಲಿ ಪ್ರವೃತ್ತಿಯಾಗಿ ತಯಾರಿಸಿಕೊಟ್ಟ ಉಪಕರಣವನ್ನು ನೋಡಿ ಈಗ ಅನೇಕ ಮಂದಿ ಕುತೂಹಲದಿಂದ ವಿಚಾರಿಸುತ್ತಿದ್ದಾರೆ ಎಂದು ಪ್ರೀತೇಶ್‌ ಶೆಟ್ಟಿಯವರು ತಿಳಿಸಿದರು.

Previous articleರಕ್ಷಾ ಬಂಧನದ ಪ್ರಯುಕ್ತ ಫೋಟೋ ಸ್ಪರ್ಧೆ
Next articleಮಿಯ್ಯಾರು : ಭಗವಧ್ವಜ ವಿತರಣೆ

LEAVE A REPLY

Please enter your comment!
Please enter your name here