ಕಠ್ಮಂಡು : ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 903ಕ್ಕೆ ಏರಿಕೆಯಾಗಿದ್ದು, 2,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ. ಘಟನಾ ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದ್ದು, ನೂರಾರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರವಾಹಪೀಡಿತ ಪ್ರದೇಶದಿಂದ 8 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಾಪತ್ತೆಯಾದವರಲ್ಲಿ 238 ವಿದ್ಯಾರ್ಥಿಗಳು ಮತ್ತು 18 ಶಿಕ್ಷಕರಿದ್ದಾರೆ ಎಂದು ನೇಪಾಳದ ಶಿಕ್ಷಣ ಸಚಿವಾಲಯದ ಮಾಹಿತಿ ನೀಡಿದೆ. ದಿಢೀರ್ ಪ್ರವಾಹದಿಂದ 354 ಮೆಗಾವಾಟ್ ಸಾಮರ್ಥ್ಯದ ಎಂಟು ಜಲ ವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ. ನಿರ್ಮಾಣ ಹಂತದ ಐದು ಯೋಜನೆಗಳಿಗೂ ತೊಂದರೆಯಾಗಿದೆ. ಈ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಸಿಲುಕಿಕೊಂಡ ಸಾಧ್ಯತೆ ಇರುವ ಕಾರಣ, ನೇಪಾಳ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ. 191 ಕಾರ್ಮಿಕರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗಳ ಮುಂದೆ ಕುಟುಂಬಸ್ಥರ ತೊಳಲಾಟ
ದುರಂತ ಸಂಭವಿಸಿ ನಾಲ್ಕು ದಿನಗಳು ಕಳೆದಿದ್ದು ನಾಪತ್ತೆಯಾದವರ ಫೋಟೊ ಮತ್ತು ಮಾಹಿತಿಯನ್ನು ಹಿಡಿದು ಕುಟುಂಸ್ಥರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ವಿಧಿವಿಜ್ಞಾನ ತಂಡಗಳು ಮೃತದೇಹಗಳ ಪತ್ತೆ ಕಾರ್ಯದಲ್ಲಿ ತೊಡಗಿವೆ. ತಮಿಳುನಾಡಿನಿಂದ ನೇಪಾಳಕ್ಕೆ ತೆರಳಿದ್ದ 319 ಜನರ ಪೈಕಿ ಸುಮಾರು 100 ಮಂದಿಯ ಸಂಪರ್ಕ ಸಾಧ್ಯವಾಗಿಲ್ಲ ಎಂದು ರಾಜ್ಯ ಸಚಿವ ಎ. ರಾಜಮೋಹನ್ ತಿಳಿಸಿದ್ದಾರೆ.






















