ಇನ್ಮುಂದೆ ಸರಕಾರಿ ಕಚೇರಿಗಳಲ್ಲಿ ಗೃಹಜ್ಯೋತಿ ಪರಿಶೀಲನೆ ಪ್ರಕ್ರಿಯೆ – ಅಜಿತ್‌ ಹೆಗ್ಡೆ ಮಾಳ

ಕಾರ್ಕಳ : ರಾಜ್ಯ ಸರಕಾರದ ಆದೇಶದಂತೆ ತಾಲೂಕಿನಲ್ಲಿ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲೆಲ್ಲೋ ಮಾಡಿ ಗೊಂದಲಕ್ಕೆ ಕಾರಣವಾಗುವ ಬದಲು ಆಯಾ ಗ್ರಾಮದಲ್ಲಿನ ಸರಕಾರಿ ಕಚೇರಿ, ಕಟ್ಟಡಗಳಲ್ಲಿ ಪ್ರಕ್ರಿಯೆ ನಡೆಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅಜಿತ್‌ ಹೆಗ್ಡೆ ಮಾಳ ಸೂಚಿಸಿದರು.

ಅವರು ಗೃಹಜ್ಯೋತಿ ಪರಿಷ್ಕರಣೆ ಸಂಬಂಧಿಸಿದತೆ ಜು. 21ರಂದು ಕಾರ್ಕಳ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಟ್ವರ್ಕ್‌ ಸಮಸ್ಯೆ, ಸಿಬ್ಬಂದಿ ಕೊರೆತೆ ಇದ್ದ ಕಾರಣ ಗ್ರಾಮದ ಯಾವುದಾದರೂ ಒಂದು ಕಡೆ ಸೇರಿ ಮೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ಜನರಲ್ಲಿ ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದೆ ಎಂದ ಅವರು ಇದನ್ನು ತಡೆಯುವ ಸಲುವಾಗಿ ಮತ್ತು ಸರಕಾರದ ಯೋಜನೆಯಿಂದ ಯಾರೂ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಇನ್ನು ಮುಂದೆ ಆಯಾ ಪ್ರದೇಶದಲ್ಲಿನ ಪಂಚಾಯತ್‌ ಸಭಾಂಗಣ, ಸಮುದಾಯ ಭವನ ಸೇರಿದಂತೆ ಸರಕಾರಿ ಕಚೇರಿ, ಕಟ್ಟಡಗಳಲ್ಲಿ ಪರಿಶೀಲನಾ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗೃಹಜ್ಯೋತಿ ಪರಿಶೀಲನಾ ಪ್ರಕ್ರಿಯೆಯಲ್ಲಿ ಮೆಸ್ಕಾಂ ಇಲಾಖೆಯೊಂದಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಭಾಗಿಯಾಗುವಂತೆ ನೀಡಿದ ರಾಜ್ಯ ಸರಕಾರದ ಆದೇಶದಂತೆ ಇನ್ನು ಮುಂದೆ ತಾಲೂಕಿನಲ್ಲಿ ಸಮಿತಿಯ 15 ಸದಸ್ಯರೂ ಗೃಹಜ್ಯೋತಿ ಪರಿಶೀಲನೆಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸಸ್ಪೆಂಡ್‌ ಮಾಡಿ
ತಾಲೂಕಿನ ಒಂದು ಕಡೆ ಗೃಹಜ್ಯೋತಿ ಪರಿಶೀಲನೆಗೆ ಹಣ ಪಡೆದುಕೊಂಡಿದ್ದಾರೆ ಎಂಬ ದೂರು ಬಂದಿವೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ. ಒಂದು ವೇಳೆ ಮುಂದೆಯೂ ಈ ರೀತಿ ನಡೆದಲ್ಲಿ ಅಂತಹ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಮೆಸ್ಕಾಂ ಕಾರ್ಯನಿರ್ವಹಕ ಇಂಜಿನಿಯರ್ ನರಸಿಂಹ ಮಾತನಾಡಿ, ಸರಕಾರಿ ಯೋಜನೆ ಪ್ರತಿಯೊಬ್ಬರಿಗೂ ತಲುಪಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಇಲಾಖೆ ಕಾರ್ಯನಿರ್ವಹಿಸುತ್ತಿದೆ.‌ ಕಾರ್ಕಳ – ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಶೇ. 60 ರಷ್ಟು ಗೃಹಜ್ಯೋತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆ. 30ರವರೆಗೆ ಕಾಲಾವಕಾಶವಿದ್ದು, ಈ ಅವಧಿಯಲ್ಲಿ ಬಾಕಿ ಉಳಿದಿರುವ ಪರಿಷ್ಕರಣೆ ನಡೆಸಲಾಗುವುದು. ಅಲ್ಲದೆ ಇದೀಗ‌ ಸರಕಾರದ ಆದೇಶದಂತೆ ಅನುಷ್ಠಾನ ಸಮಿತಿಯೂ ನಮ್ಮೊಂದಿಗೆ ಜೊತೆಯಾದಗ ಯಾವುದೇ ಗೊಂದಲವಿಲ್ಲದೆ ವ್ಯವಸ್ಥಿತವಾಗಿ‌ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಕಳ – ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನಗೆ 60332 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಈಗಾಗಲೇ 37540 ಪರಿಷ್ಕರಣೆಗೆ ಒಳಪಡಿಸಲಾಗಿದ್ದು, ಇದರಲ್ಲಿ 37025 ಅರ್ಜಿಗಳು ಯಶಸ್ವಿಯಾಗಿದೆ. 23307 ಪರಿಷ್ಕರಣೆಗೆ ಬಾಕಿಯಿದೆ.

ತಾಲೂಕು ಪಂಚಾಯತ್‌ ಎಡಿ ಕೃಷ್ಣಾನಂದ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಮೆಸ್ಕಾಂ ಇಲಾಖೆಯ ಎಇಇ ಶಿಲ್ಪಾ, ವಿವಿಧ ಶಾಖಾಧಿಕಾರಿಗಳು, ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ನಿಟ್ಟೆ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಾಯಕ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.





























































































































error: Content is protected !!
Scroll to Top