ಮಂಗಳೂರು : ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-40ರ ಆಂಧ್ರಪ್ರದೇಶದ ಕುರ್ನೂಲು ಬಳಿ ನಡೆದ ಕಾರು ಅಪಘಾತದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರೀಯ ಸಮಿತಿ ಜತೆ ಕಾರ್ಯದರ್ಶಿ ಹಾಗೂ ಕರಂಗಲ್ಪಾಡಿ ಹಾಪ್‌ಕಾಮ್ಸ್ ಪ್ರಧಾನ ವ್ಯವಸ್ಥಾಪಕ ರವಿಚಂದ್ರ ಶೆಟ್ಟಿ (45) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿರುಪತಿಯಿಂದ ಮಂತ್ರಾಲಯಕ್ಕೆ ಸಾಗುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಮೂವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಲೆಕ್ಕ ಪರಿಶೋಧಕ ಸುದೇಶ್ ರೈ, ಪ್ರದೀಪ್ ಆಳ್ವ ಕದ್ರಿ ಗಾಯಗೊಂಡವರು.
ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ ಮತ್ತು ಇತರರು 2 ಕಾರಿನಲ್ಲಿ ಭಾನುವಾರ ತಿರುಪತಿಗೆ ತೆರಳಿದ್ದರು. ತಿರುಪತಿಯಲ್ಲಿ ದೇವರ ದರ್ಶನದ ಬಳಿಕ ಮಂತ್ರಾಲಯಕ್ಕೆ ತೆರಳುತ್ತಿದ್ದರು. ಸತೀಶ್ ಶೆಟ್ಟಿ ಪಟ್ಲ ಅವರ ಕಾರು ಎದುರಿನಲ್ಲಿ ಚಲಿಸುತ್ತಿದ್ದು, ಅವರು ಮಂತ್ರಾಲಯ ತಲುಪಿದ್ದರು. ಆದರೆ ತುಂಬಾ ಹೊತ್ತಿನವರೆಗೂ ಪ್ರದೀಪ್ ಆಳ್ವರು ಚಲಿಸುತ್ತಿದ್ದ ಕಾರು ಬಾರದ ಕಾರಣ ಮರಳಿ ಹೋದ ರಸ್ತೆಯಲ್ಲೇ ವಾಪಾಸ್ ಬಂದಿದ್ದರು. ಈ ಸಂದರ್ಭ ಮಂತ್ರಾಲಯದಿಂದ ಕೆಲವು ಕಿಲೋಮೀಟರ್ ದೂರದ ಕುರ್ನೂಲುವಿನಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ನಾಲ್ವರು ಕೂಡಾ ಅದರೊಳಗೆ ಸಿಲುಕಿದ್ದರು. ಕೂಡಲೇ ಅವರನ್ನು ಹೊರತೆಗೆಯುವ ಪ್ರಯತ್ನ ಮಾಡಲಾಯಿತು. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ರವಿಚಂದ್ರ ಶೆಟ್ಟಿ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.
























