ಬಿಜೆಪಿ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ

ಹುಬ್ಬಳ್ಳಿ : ಧರ್ಮವನ್ನು ಗುತ್ತಿಗೆ ಪಡೆದಂತೆ ಬಿಜೆಪಿ ವರ್ತಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಹುಬ್ಬಳ್ಳಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಭಾರತ ಯಾವುದೇ ಅಧಿಕೃತ ಧರ್ಮ ಹೊಂದಿರುವ ರಾಷ್ಟ್ರವಲ್ಲ. ಸಂವಿಧಾನದ ಚೌಕಟ್ಟಿನಲ್ಲೇ ಸರಕಾರ ನಡೆಯಬೇಕು. ಎಲ್ಲ ಧರ್ಮದ ಜನರಿಗೆ ತಮ್ಮ ನಂಬಿಕೆ ಮತ್ತು ಆಚರಣೆಗಳನ್ನು ಅನುಸರಿಸುವ ಹಕ್ಕಿದೆ. ಆದರೆ, ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ರಾಮ ಮಂದಿರ ವಿಚಾರ ಪ್ರಸ್ತಾವಿಸಿದ ಅವರು, ಇತಿಹಾಸದಲ್ಲಿ ಮುಹಮ್ಮದ್ ಘಜ್ನಿ ದೇಶವನ್ನು 17 ಬಾರಿ ಲೂಟಿ ಮಾಡಿದ್ದ. ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಬಿಜೆಪಿ ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಲಾಭ ಪಡೆಯುತ್ತಿದೆ. ಮುಹಮ್ಮದ್ ಘಜ್ನಿ ಮತ್ತು ನರೇಂದ್ರ ಮೋದಿ-ಅಮಿತ್ ಶಾ ನಡುವೆ ಏನು ವ್ಯತ್ಯಾಸ ಇದೆ ಎಂಬ ಪ್ರಶ್ನೆ ಜನರಲ್ಲಿದೆ ಎಂದು ಹೇಳಿದರು.

ಅಚ್ಛೇ ದಿನ್ ಹಾಗೂ ಅಮೃತ ಕಾಲದ ಭರವಸೆ ನೀಡಿದ್ದ ಬಿಜೆಪಿ ಈಗ ಜನರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದ್ದು, ಬಿಜೆಪಿಗೆ ಈಗ ಅಚ್ಛೇ ದಿನ್ ಅಲ್ಲ, ರಾಹುಕಾಲ ಆರಂಭವಾಗಿದೆ ಎಂದು ವ್ಯಂಗ್ಯವಾಡಿದರು.

ಆರೆಸ್ಸೆಸ್ ನೋಂದಣಿಯಾಗಲೇಬೇಕು
ಆರೆಸ್ಸೆಸ್ ಕುರಿತು ಮಾತನಾಡಿದ ಹರಿಪ್ರಸಾದ್, ದೇಶದಲ್ಲಿರುವ ಎಲ್ಲಾ ಸಂಘಟನೆಗಳು ನೋಂದಣಿ ಮಾಡಿಕೊಂಡಿವೆ. ಫುಟ್‌ಪಾತ್ ಮೇಲೆ ಅಂಗಡಿ ಇಟ್ಟ ವ್ಯಕ್ತಿಯೂ ನೋಂದಣಿ ಮಾಡದಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಹಾಗಿದ್ದರೆ ಕೋಟ್ಯಂತರ ರೂ. ಸಂಗ್ರಹಿಸುವ ಆರೆಸ್ಸೆಸ್ ನೋಂದಣಿ ಮಾಡಿಸಿಕೊಳ್ಳಲು ಏಕೆ ಹಿಂದೇಟು ಹಾಕುತ್ತಿದೆ? ಅವರು ಸಂಗ್ರಹಿಸುವ ಹಣದ ಲೆಕ್ಕಪತ್ರ ಸಾರ್ವಜನಿಕವಾಗಬೇಕೆಂದು ಆಗ್ರಹಿಸಿದರು.

ಆರೆಸ್ಸೆಸ್ ಪರವಾಗಿ ನಿಲ್ಲುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅವಕಾಶವಿಲ್ಲ. ಸಂವಿಧಾನ ಮತ್ತು ಜಾತ್ಯತೀತ ಮೌಲ್ಯಗಳಿಗೆ ಆರೆಸ್ಸೆಸ್ ವಿರುದ್ಧವಾಗಿದೆ. ಕಾಂಗ್ರೆಸ್ ಎಂದಿಗೂ ಅದರ ವಿಚಾರಧಾರೆಯನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಬಿಜೆಪಿ ಸಂಸದರ ವಿರುದ್ಧ ಅಸಮಾಧಾನ
ಕರ್ನಾಟಕದಿಂದ 19 ಬಿಜೆಪಿ ಲೋಕಸಭಾ ಸದಸ್ಯರು ಆಯ್ಕೆಯಾಗಿದ್ದರೂ ರಾಜ್ಯದ ಸಮಸ್ಯೆಗಳ ಬಗ್ಗೆ ಅವರು ಧ್ವನಿ ಎತ್ತುತ್ತಿಲ್ಲ. ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಅನುಮತಿ ಸಿಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂಭ್ರಮಪಟ್ಟರು. ಆದರೆ, ನಾವು ದೂರದರ್ಶಕ ಹಾಕಿ ನೋಡಿದರೂ ಆ ಅನುಮತಿ ಕಾಣುತ್ತಿಲ್ಲ ಎಂದು ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ಅದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟ ವಿಚಾರ. ನಾನು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದು ಯಾರಿಗೂ ಗೊತ್ತಿರಲಿಲ್ಲ. ಕಳೆದ ಒಂದು ವರ್ಷದಿಂದ ಆ ಪ್ರಕ್ರಿಯೆ ನಡೆಯುತ್ತಿತ್ತು. ಅನೇಕರು ಆ ಹುದ್ದೆಯ ಮೇಲೆ ಆಸೆ ಇಟ್ಟುಕೊಂಡಿದ್ದರು. ಅಂತಿಮವಾಗಿ ಸಮತೋಲಿತ ಸಚಿವ ಸಂಪುಟ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕ ಪ್ರಸಾದ್ ಅಬ್ಬಯ್ಯ ಮತ್ತಿತರರು ಉಪಸ್ಥಿತರಿದ್ದರು.















































































































































error: Content is protected !!
Scroll to Top