ಉಡುಪಿ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಅಧೀನದಲ್ಲಿರುವ ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯು ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರ ಮಾನ್ಯತಾ ಮಂಡಳಿ (NABH) ಯಿಂದ ಮಾನ್ಯತೆ ಪಡೆದಿದೆ. ಆಸ್ಪತ್ರೆಯು NABH ಆಸ್ಪತ್ರೆಗಳ ಮಾನ್ಯತಾ ಮಾನದಂಡಗಳ 6ನೇ ಆವೃತ್ತಿಯ ಎಲ್ಲಾ ಅಗತ್ಯ ಮಾನದಂಡಗಳನ್ನು ಪೂರೈಸಿರುವುದಾಗಿ ದೃಢೀಕರಿಸಲಾಗಿದೆ. ಈ ಮಾನ್ಯತೆ ಆಸ್ಪತ್ರೆಯ 80 ಹಾಸಿಗೆಗಳಿಗೆ ಅನ್ವಯವಾಗಿದ್ದು 2026ರ ಮೇ 21ರಿಂದ 2030ರ ಮೇ 20ರವರೆಗೆ ಮಾನ್ಯವಾಗಿರುತ್ತದೆ. NABH ಅನ್ನು ಅಂತಾರಾಷ್ಟ್ರೀಯ ಆರೋಗ್ಯ ಗುಣಮಟ್ಟ ಸಂಸ್ಥೆ (ISQua) ಮಾನ್ಯತೆ ನೀಡಿರುವುದರಿಂದ ಇದರ ಮಾನದಂಡಗಳು ಭಾರತದಲ್ಲಿಯೂ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅಂಗೀಕರಿಸಲ್ಪಟ್ಟಿವೆ. ರೋಗಿಗಳ ಚಿಕಿತ್ಸೆ, ಸುರಕ್ಷತಾ ಕ್ರಮಗಳು, ಸ್ವಚ್ಛತೆ, ಸೋಂಕು ನಿಯಂತ್ರಣ ಹಾಗೂ ದೈನಂದಿನ ಕಾರ್ಯಾಚರಣೆ ಸೇರಿದಂತೆ ಹಲವಾರು ಅಂಶಗಳಲ್ಲಿ ಮೌಲ್ಯಮಾಪನ ಮಾಡಲಾಗಿದೆ.
ಸಂಪೂರ್ಣ ತಂಡದ ಪರಿಶ್ರಮದ ಫಲವಾಗಿ ಆಸ್ಪತ್ರೆಗೆ ಮಾನ್ಯತೆ ದೊರೆತಿದೆ. ಇಲ್ಲಿನ ಪ್ರತಿಯೊಬ್ಬ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿ ಈ ಮಾನದಂಡಗಳನ್ನು ಅನುಸರಿಸಲು ಒಟ್ಟಾಗಿ ಶ್ರಮಿಸಿದ್ದಾರೆ. ಇದು ಆಸ್ಪತ್ರೆ ಸಿಬ್ಬಂದಿ ಪರಿಶ್ರಮಕ್ಕೆ ದೊರೆತ ಮಾನ್ಯತೆ. ಮುಂದೆಯೂ ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ.
ಡಾ. ಸಂಜಯ್ ಕುಮಾರ್
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ
ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರು, ಇದು ಆಸ್ಪತ್ರೆ ಹಾಗೂ ಮಾಹೆಗೆ ಹೆಮ್ಮೆಯ ಕ್ಷಣ ಎಂದರು. ಕಾರ್ಕಳದಂತಹ ಗ್ರಾಮೀಣ ಪ್ರದೇಶದ ಆಸ್ಪತ್ರೆಗೆ NABH ಮಾನ್ಯತೆ ಬಹಳ ಮಹತ್ವದ್ದಾಗಿದೆ. ಈ ಭಾಗದ ಜನರು ನಗರಗಳಿಗೆ ದೂರ ಪ್ರಯಾಣ ಮಾಡದೇ ಗುಣಮಟ್ಟದ, ಸುರಕ್ಷಿತ ಆರೋಗ್ಯ ಸೇವೆಯನ್ನು ಪಡೆಯಬಹುದು ಎಂಬ ವಿಶ್ವಾಸವನ್ನು ನೀಡುತ್ತದೆ ಎಂದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ NABH ಮಾನ್ಯತಾ ಪ್ರಮಾಣಪತ್ರವನ್ನು ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಹಾಗೂ ಅವರ ಹಿರಿಯ ಸಹೋದ್ಯೋಗಿಗಳಿಗೆ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕುಲಪತಿ ಡಾ. ಶರತ್ ಕೆ. ರಾವ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, VSM ಹಾಗೂ ಗುಣಮಟ್ಟ ನಿರ್ದೇಶಕ ಡಾ. ಕ್ರಿಸ್ಟೋಫರ್ ಸುಧಾಕರ್ ಅವರು ಹಸ್ತಾಂತರಿಸಿದರು. ಮಾನ್ಯತಾ ಪತ್ರ ದೊರೆಯುವಲ್ಲಿ ಶ್ರಮಿಸಿದ ಡಾ. ಕೀರ್ತಿನಾಥ್ ಬಲ್ಲಾಳ್ ಉಪಸ್ಥಿತರಿದ್ದರು.








































































