ಗುರು – ಗುರಿಯಿಂದ ಶೈಕ್ಷಣಿಕ ಪ್ರಗತಿ : ಕಮಲಾಕ್ಷ ಕಾಮತ್
ಕಾರ್ಕಳ : ಸಂಪಾದಿಸಿದ ಹಣದಲ್ಲಿ ಒಂದು ಭಾಗವನ್ನು ದಾನ ಮಾಡಿದಾಗ ಜೀವನ ಸಾರ್ಥಕ್ಯವಾಗಲಿದೆ ಎಂದು ನಿವೃತ್ತ ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್ ಅಭಿಪ್ರಾಯಪಟ್ಟರು.
ಅವರು ಜೂ. 24ರಂದು ಕೆಎಂಇಎಸ್ ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾದಾನವೂ ಶ್ರೇಷ್ಠ ದಾನಗಳಲ್ಲಿ ಒಂದು. ಜೀವನಕ್ಕೆ ಅರ್ಥ ಬರುವುದೇ ಇತರರಿಗಾಗಿ ಬದುಕಿದಾಗ ಎಂದರು.
ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸ್ಪಷ್ಟ ಗುರಿಯನ್ನು ಹೊಂದಿರಬೇಕು. ಗುರು ಮತ್ತು ಗುರಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ. ಕೆ.ಎಂ.ಇ.ಎಸ್. ವಿದ್ಯಾಸಂಸ್ಥೆ ಎಲ್ಲಾ ದೃಷ್ಟಿಯಲ್ಲಿಯೂ ಅತ್ಯುತ್ತಮ ವಿದ್ಯಾ ಸಂಸ್ಥೆಯಾಗಿದೆ. ತಂದೆ-ತಾಯಿ, ಗುರು-ಹಿರಿಯರ ಆಶೀರ್ವಾದವೇ ನಮ್ಮನ್ನು ಕೊನೆಯವರೆಗೆ ಸಲಹುತ್ತದೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ಮಾತನಾಡಿ, ನಮ್ಮ ಶಾಲೆಯಲ್ಲಿ ಅತಿ ಕಡಿಮೆ ಶುಲ್ಕದೊಂದಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪೂರ್ವ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ ಎಂದರು. ಪ್ರಾಂಶುಪಾಲ ಕೆ. ಬಾಲಕೃಷ್ಣ ಶುಭಹಾರೈಸಿದರು.

ನೀರಿನ ಫಿಲ್ಟರ್ ಉದ್ಘಾಟನೆ
ಕೆಎಂಇಎಸ್ ಸಂಸ್ಥೆಗೆ ಕಮಲಾಕ್ಷ ಕಾಮತ್ ಅವರು ನೀರಿನ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿದ್ದು, ಇದೇ ಸಂದರ್ಭ ಅದನ್ನು ಉದ್ಘಾಟಿಸಲಾಯಿತು.

ಕಾಲೇಜು ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ 46 ವಿದ್ಯಾರ್ಥಿಗಳನ್ನು, ಹೈಸ್ಕೂಲ್ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿರುವ 21 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉದ್ಯಮಿ ಅಭಿಷೇಕ್ ಮಡಿವಾಳ, ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಆಚಾರ್ಯ, ಮೊಹಮ್ಮದ್ ಅರ್ಮಾನ್ ಶಾಹೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಲೊಲಿಟಾ ಡಿಸಿಲ್ವಾ ಸ್ವಾಗತಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕಿ ಪಾಟ್ಕರ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕರಾದ ಅಲ್ವಿನಾ ಡಿ ಸೋಜ ಕಾರ್ಯಕ್ರಮ ನಿರೂಪಿಸಿ, ನಿವೇದಿತಾ ವಂದಿಸಿದರು. ಶಿಕ್ಷಕರಾದ ಗುರುಕುಮಾರ್, ಸಂಗೀತಾ, ಹಿಲ್ಡಾ ಸಹಕರಿಸಿದರು.






































































