ಮ್ಯಾಪಿಂಗ್ ಪ್ರಕ್ರಿಯೆ -‌ ಕಾರ್ಕಳ‌ ಜಿಲ್ಲೆಗೆ ಪ್ರಥಮ

ಕಾರ್ಕಳ : ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಹೊಸ ಮತದಾರರ ಪಟ್ಟಿಯನ್ನು ತಯಾರಿಸಲಾಗುತ್ತಿದ್ದು, 96.36%ನೊಂದಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರ ಮ್ಯಾಪಿಂಗ್‌ನಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಸುಮಾರು 5,500 ಮಂದಿ ಹೊರ ಭಾಗದ ಜನತೆ ಇಲ್ಲಿದ್ದು, ಈ ಬಗ್ಗೆ ಬಿಎಲ್ಎ- ಬಿಎಲ್ಓ ಅವರು ಸರಿಯಾದ ಮಾಹಿತಿ ಸಂಗ್ರಹಿಸಿದಲ್ಲಿ ಯಾವುದೇ ಸಮಸ್ಯೆಯಾಗದೆ ಸುಲಭವಾಗಿ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಹೇಳಿದರು.

ಅವರು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತಾಗಿ ಜೂ. 24ರಂದು ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು, ಮೇಲ್ವಿಚಾರಕರು, ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಏಜೆಂಟರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2025ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳಿಗೆ ಸಂಬಂಧಿಸಿದಂತೆ 2002 ರಲ್ಲಿರುವ ಮತದಾರರ ಪಟ್ಟಿಯ ಮತದಾರರ ಕುಟುಂಬದ ಸಂತತಿಗಳಿಗೆ ಮ್ಯಾಪಿಂಗ್ ಮಾಡಿ ಲಿಂಕ್ ಮಾಡಲಾಗುತ್ತಿರುವುದರಿಂದ ಯಾವ ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ಗಮನಹರಿಸಬೇಕು. ಮ್ಯಾಪಿಂಗ್ ಸರಿಯಾದರೆ ಯಾವುದೇ ಸಮಸ್ಯೆಯಿಲ್ಲ. ಸಮಸ್ಯೆಯಿದ್ದಲ್ಲಿ ಹಿಯರಿಂಗ್‌ ಕರೆಯಲಾಗುವುದು. ಆ ಸಂದರ್ಭ ಸರಿಯಾದ ದಾಖಲೆ ನೀಡಿದರೆ ಆಯಿತು. ಒಂದು ವೇಳೆ ಹಿಯರಿಂಗ್‌ಗೆ ಬಾರದಿದ್ದಲ್ಲಿ ಅವರನ್ನು ಪಟ್ಟಿಯಿಂದ ಹೊರಗಿಡಲಾಗುವುದು ಎಂದರು.

10 ದಿನ ಮನೆ-ಮನೆಗೆ ಭೇಟಿ
ಮತಗಟ್ಟೆ ಅಧಿಕಾರಿಗಳು ಜೂ. 30 ರಿಂದ ಜುಲೈ 29ರವರೆಗೆ 10 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಪೂರ್ವದಲ್ಲಿ ಮುದ್ರಣಗೊಂಡಿರುವ ನಮೂನೆಯನ್ನು ದ್ವಿ ಪ್ರತಿಯಲ್ಲಿ ನೀಡುತ್ತಾರೆ. ಮತದಾರರು ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಪ್ರಸ್ತುತ ಭಾವಚಿತ್ರ ಅಂಟಿಸಿ ಕಡ್ಡಾಯವಾಗಿ ಸಹಿ ಮಾಡಿ ಒಂದು ಪ್ರತಿಯನ್ನು ಮತಗಟ್ಟೆ ಅಧಿಕಾರಿಗೆ ಹಿಂದಿರುಗಿಸಬೇಕು. ಒಂದೊಮ್ಮೆ ನೀಡದೇ ಇದ್ದಲ್ಲಿ ಮತಗಟ್ಟೆ ಅಧಿಕಾರಿಗಳು ಮೂರು ಬಾರಿ ಮನೆ ಬಾಗಿಲಿಗಿ ಭೇಟಿ ನೀಡಲಿದ್ದಾರೆ ಎಂದರು.

ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿಯದಂತೆ ಹಾಗೂ ಅನರ್ಹರು ಇರದಂತೆ ನಿಗಾವಹಿಸಬೇಕು. ಏನುಮರೇಷನ್ ಫಾರ್ಮ್ ಭರ್ತಿ ಮಾಡಿ ನೀಡದೆ ಇರುವವರು ಅಥವಾ ಫಾರಂ ಅಪ್ಲೋಡ್ ಆಗದೆ ಇರುವವರ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದ ಅವರು ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ಯಶಸ್ವಿಯಾಗಿ ಮುಗಿಸೋಣ ಎಂದರು.

ಅಪರ ಜಿಲ್ಲಾಧಿಕಾರಿ‌ ಅಬಿದ್ ಗದ್ಯಾಳ ಮಾತನಾಡಿ, 2002ರ ನಂತರ ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ನಡೆದಿಲ್ಲ. ಆದ್ದರಿಂದ ಹೊಸ ಪಟ್ಟಿ ತಯಾರಿಸುವಾಗ ಎಚ್ಚರಿಕೆಯಿಂದ ಪ್ರಕ್ರಿಯೆ ನಡೆಸಿ. ಮತದಾರ ಭಾರತದ ನಾಗರಿಕರಾಗಿರಬೇಕು, 18 ವರ್ಷ ತುಂಬಿರಬೇಕು, ಆ ಪ್ರದೇಶದ ವಾಸಿಯಾಗಿರಬೇಕು ಮತ್ತು ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಇರಬಾರದು ಎಂಬ ನಾಲ್ಕು ಅಂಶಗಳನ್ನು ಕಡ್ಡಾಯವಾಗಿ ಗಮನದಲ್ಲಿಟ್ಟುಕೊಂಡು ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ಹೊರಗುಳಿಯದಂತೆ, ಅನರ್ಹ ಮತದಾರ ಪಟ್ಟಿಯಲ್ಲಿ ಉಳಿಯಬಾರದು ಎಂಬ ನಿಟ್ಟಿನಲ್ಕಿ ಎಸ್ಐಆರ್ ಪ್ರಕ್ರಿಯೆ ನಡೆಸೋಣ ಎಂದರು.

ಉಪನ್ಯಾಸಕರಾದ ಜಿಲ್ಲಾ ಮಾಸ್ಟರ್ ಟ್ರೈನರ್ ಗಂಗಾಧರ್ ಹಾಗೂ ತಾಲೂಕು ಮಾಸ್ಟರ್ ಟ್ರೈನರ್ ಪ್ರಮೋದ್ ನಾಯಕ್ ಮಾಹಿತಿ ನೀಡಿದರು.

ಜೂ. 20 ರಿಂದ 29 ವರೆಗೆ ಪೂರ್ವಸಿದ್ಧತಾ ಕಾರ್ಯಗಳು ಮತ್ತು ತರಬೇತಿ ಪ್ರಕ್ರಿಯೆಗಳು ನಡೆಯಲಿವೆ. ಜೂ. 30 ರಿಂದ ಜುಲೈ 29 ಬಿಎಲ್‌ಒ ಗಳ ಮೂಲಕ ಮನೆ ಮನೆ ಸಮೀಕ್ಷೆ ನಡೆಸಿ, ನಮೂನೆಗಳನ್ನು ಪಡೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಜುಲೈ 29 ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ (Rationalization) ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 5 ಕರಡು ಮತದಾರರ ಪಟ್ಟಿಯ (Draft Roll) ಪ್ರಕಟಣೆ. ಆ. 5 ರಿಂದ ಸೆ. 4 ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಅ. 3 ರವರೆಗೆ ಸ್ವೀಕೃತವಾದ ಆಕ್ಷೇಪಣೆಗಳ ಇತ್ಯರ್ಥಗೊಳಿಸಬೇಕು, ಅ. 7 ಕ್ಕೆ ಅಂತಿಮ ಮತದಾರರ ಪಟ್ಟಿ ಅಧಿಕೃತವಾಗಿ ಪ್ರಕಟಣೆಯಾಗಲಿದೆ.

ಇಆರ್‌ಓ ಸುಬ್ರಹ್ಮಣ್ಯ ಸೆಟ್ಟಿ, ತಹಶೀಲ್ದಾರ್ ಪ್ರದೀಪ್ ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿ.ಎಲ್.ಓ, ಬಿ.ಎಲ್.ಎ ಹಾಗೂ ಮತ್ತಿತರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.































error: Content is protected !!
Scroll to Top